ಕನ್ನಡಪ್ರಭ ವಾರ್ತೆ ಚನ್ನಗಿರಿ
ಮನುಷ್ಯನ ಮನಸ್ಸು ಚಂಚಲತೆಯಿಂದ ಕೂಡಿದ್ದು, ಮಾನವನ ಜನ್ಮ ಕಟ್ಟಕಡೆಯ ಜನ್ಮವಾಗಿದೆ. ಆತ್ಮ, ದೇಹ, ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಜೀವಿತದ ಅವಧಿಯಲ್ಲಿ ಉತ್ತಮ ಕೆಲಸ ಮಾಡಬೇಕಾಗಿದೆ ಎಂದು ಕೋಡಿಹಳ್ಳಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ನುಡಿದರು.ಪಟ್ಟಣದ ಶ್ರೀ ಹಾಲಸ್ವಾಮಿ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ವಚನಾಮೃತ ಬೋಧನೆ ಪ್ರವಚನ ಕಾರ್ಯಕ್ರಮ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ದೇಹಕ್ಕೆ ಆತ್ಮ ಆಶ್ರಯವಾಗಿದ್ದರೆ, ಆತ್ಮ ದೇಹಕ್ಕೆ ಆಶ್ರಯವಾಗಿರುತ್ತದೆ. ಆದ್ದರಿಂದ ಅತ್ಮ ಪರಮಾತ್ಮನಲ್ಲಿ ವಿಲೀನಗೊಂಡಾಗ ಜೀವನ ಸಾರ್ಥಕವಾಗಲಿದೆ. ಪುರಾಣ, ಪ್ರವಚನ, ದೇವಾಲಯ, ಮಠ ಮಂದಿರಗಳು ಆತ್ಮಕ್ಕೆ ನೆಮ್ಮದಿ ನೀಡುವ ತಾಣಗಳು ಎಂದರು.
ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿ, ಜೀವನದ ಒತ್ತಡಗಳಿಂದ ಹೊರಬರಲು ಮಠ, ಮಂದಿರ, ದೇವಾಲಯಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಆಗ ಮಾತ್ರ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಶ್ರಾವಣ ಮಾಸದ ಒಂದು ತಿಂಗಳ ಪರ್ಯಂತ ಧಾರ್ಮಿಕ ಪ್ರವಚನಗಳನ್ನು ಜನತೆಗೆ ಪ್ರಸ್ತುತಪಡಿಸಿ, ಶ್ರೀ ಹಾಲಸ್ವಾಮಿ ವಿರಕ್ತ ಮಠದ ಸೇವಾಕಾರ್ಯ ಶ್ಲಾಘನೀಯ ಎಂದರು.ನಾನು ಸಾಮಾನ್ಯ ಕುಟುಂಬದಿಂದ ಬಂದವನಾಗಿದ್ದು, ಇಂದು ಶಾಸಕನಾಗಿದ್ದೇನೆ. ಇದಕ್ಕೆ ಗುರುಗಳ ಮಾರ್ಗದರ್ಶನ, ಪ್ರೀತಿಯೇ ಕಾರಣವಾಗಿದೆ. ತಂದೆ ಯಾವುದೇ ಅಧಿಕಾರದಲ್ಲಿ ಇಲ್ಲ, ಕೋಟ್ಯಂತರ ರು.ಗಳ ಅವ್ಯವಹಾರ ಮಾಡಿ ಮಾಧ್ಯಮಗಳಲ್ಲಿ ಬಂದಿಲ್ಲ. ಸಾಮಾನ್ಯ ವರ್ಗದ ಕೆಳದರ್ಜೆ ನೌಕರನ ಮಗನಾಗಿ ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಮತದಾರರ ಆಶೀರ್ವಾದದಿಂದ ಗೆದ್ದು ಶಾಸಕನಾಗಿದ್ದೇನೆ. ಆದರೆ, ನನ್ನ ವಿರೋಧಿಗಳು ನನ್ನನು ಕಾಗೆ, ಗೂಬೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ನಾನು ಕಿವಿಗೂಡುವುದಿಲ್ಲ ಎಂದರು.
ನಾನು ಇದೇ ತಾಲೂಕಿನ ಕೋಗಲೂರು ಗ್ರಾಮದವನು. ಮುಂದಿನ ಕೆಲ ದಿನಗಳಲ್ಲಿಯೇ ಚನ್ನಗಿರಿಯಲ್ಲಿ ನನ್ನದೇ ಆದ ಸ್ವಂತ ಮನೆಯನ್ನು ನಿರ್ಮಿಸಿ, ಕ್ಷೇತ್ರದ ಪ್ರತಿಯೊಬ್ಬರಿಗೂ ಆಮಂತ್ರಣ ನೀಡಿ, ಗೃಹಪ್ರವೇಶ ಮಾಡುತ್ತೇನೆ. ಕೋಡಿಹಳ್ಳಿ ಶ್ರೀಗಳ ಮಠಕ್ಕೆ ಎರಡು ವರ್ಷದ ಭೇಟಿ ನೀಡಿದ ಸಂದರ್ಭ ನೀನು ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೇರುವೆ ಎಂಬ ಭವಿಷ್ಯ ನುಡಿದಿದ್ದರು. ಅವರ ಆಶೀರ್ವಾದದಂತೆ ಇಂದು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿರುವೆ ಎಂದು ಸ್ಮರಿಸಿದರು.ಸಮಾರಂಭದ ದಿವ್ಯ ಸಮ್ಮುಖವನ್ನು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯರು ಮತ್ತು ನೇತೃತ್ವವನ್ನು ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಡಾ. ಎಂ.ಬಿ. ಗಂಗಾಧರ್, ಎಂ.ಡಿ. ಮಹಾಬಲೇಶ್ವರ, ಟಿ.ಎಸ್. ಹರ್ಷ, ಜವಳಿ ಮಹೇಶ್ ಹಾಜರಿದ್ದರು.