ಶ್ರದ್ಧೆ, ಪ್ರಾಮಾಣಿಕತೆಯಿಂದ ಸರ್ಕಾರಿ ಕೆಲಸ ಮಾಡಿ: ಸಾವಿತ್ರಿ ಬಿ. ಕಡಿ

KannadaprabhaNewsNetwork | Published : Jul 10, 2024 12:37 AM

ಸಾರಾಂಶ

ಸರ್ಕಾರಿ ಕೆಲಸಕ್ಕೆ ಆಯ್ಕೆಯಾದ ನೌಕರರು ಶ್ರದ್ಧೆ, ಬದ್ಧತೆಯಿಂದ ತರಬೇತಿ ಪಡೆದು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು.

ವೃತ್ತಿ ಬುನಾದಿ ತರಬೇತಿಗೆ ಅಪರ ಜಿಲ್ಲಾಧಿಕಾರಿ ಚಾಲನೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸರ್ಕಾರಿ ಕೆಲಸಕ್ಕೆ ಆಯ್ಕೆಯಾದ ನೌಕರರು ಶ್ರದ್ಧೆ, ಬದ್ಧತೆಯಿಂದ ತರಬೇತಿ ಪಡೆದು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಹೇಳಿದರು.

ಹೊಸದಾಗಿ ಆಯ್ಕೆಯಾದ ಎಫ್.ಡಿ.ಎ ಮತ್ತು ಎಸ್.ಡಿ.ಎ ನೌಕರರಿಗೆ ಆಡಳಿತ ತರಬೇತಿ ಸಂಸ್ಥೆ ಮೈಸೂರು ಇದರ ಪ್ರಾಯೋಜಕತ್ವದಲ್ಲಿ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯಿಂದ ಜು. 8ರಿಂದ ಆಗಸ್ಟ್ 31ರವರೆಗೆ ನಗರದ ತಹಸೀಲ್ದಾರರ ಕಚೇರಿಯಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡ ವೃತ್ತಿ ಬುನಾದಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಇಲಾಖೆಯಲ್ಲಿನ ವಿವಿಧ ಸೇವೆ, ನೀತಿ ನಿಯಮಗಳ ಬಗ್ಗೆ ಸರಿಯಾದ ರೀತಿಯಲ್ಲಿ ಅಧ್ಯಯನ ನಡೆಸಿ ಅರ್ಥೈಸಿಕೊಂಡಲ್ಲಿ ಕೆಲಸ ಕಾರ್ಯಗಳನ್ನು ಸುಲಭವಾಗಿ ನಡೆಸಬಹುದಾಗಿದೆ. ಯಾವುದೇ ಕೆಲಸದಲ್ಲಿ ಶಿಸ್ತು ತುಂಬಾ ಮುಖ್ಯವಾಗಿದ್ದು, ಕಚೇರಿಯಲ್ಲಿ ಇದನ್ನು ಪಾಲಿಸಬೇಕು. ಮೇಲಧಿಕಾರಿಗಳೊಂದಿಗೆ ವಿನಯದಿಂದ ವರ್ತಿಸಬೇಕು. ಸಮಯ ಪಾಲನೆ, ಅಂದಿನ ಕೆಲಸವನ್ನು ಅಂದೇ ಪೂರ್ಣಗೊಳಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಕಾರ್ಯ ನಿರ್ವಹಿಸಬೇಕು. ಉತ್ತಮವಾದ ತರಬೇತಿಯಿಂದ ಯಾವುದೇ ಕಾರ್ಯವನ್ನು ಪರಿಪೂರ್ಣವಾಗಿ ಮಾಡಲು ಸಾಧ್ಯವಿದ್ದು, ಈ ಹಿನ್ನೆಲೆ ತರಬೇತಿಯ ಸದುಪಯೋಗ ಪಡಿಸಿಕೊಂಡು ಸರ್ಕಾರಿ ಸೇವೆ ಸಲ್ಲಿಸಲು ಸಿದ್ಧರಾಗಬೇಕು ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ್ ಮಾತನಾಡಿ, ಸರ್ಕಾರಿ ನೌಕರರು ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಇರಬೇಕು. ಕಚೇರಿ ಕೆಲಸಗಳಲ್ಲಿ ವಿಳಂಬ ಮಾಡಬಾರದು. ಕೆಲಸಗಳನ್ನು ಬಾಕಿ ಉಳಿಸಿಕೊಂಡರೆ, ಸಮಸ್ಯೆಗಳಿಗೆ ಅವಕಾಶ ಮಾಡಿಕೊಟ್ಟ ಹಾಗೆ ನಮ್ಮ ಮೇಲೆಯೂ ಒತ್ತಡ ಹಾಕಿಕೊಂಡಂತಾಗುತ್ತದೆ. ಆದ್ದರಿಂದ ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸುವ ಪರಿಪಾಠವನ್ನು ನೌಕರರು ಬೆಳೆಸಿಕೊಂಡಲ್ಲಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ ಎಂದರು.

ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ನೌಕರರಿಗೆ ಸೇವಾಮನೋಭಾವ ಇರಬೇಕು. ಹೊಸದನ್ನು ಕಲಿಯುವ ಉತ್ಸುಕತೆ ಇರಬೇಕು. ಕಚೇರಿ ಕೈಪಿಡಿ ಪ್ರಕಾರ ಕಾರ್ಯನಿರ್ವಹಿಸಬೇಕು. ಕಚೇರಿಗೆ ಬರುವ ಪತ್ರಗಳನ್ನು ಸರಿಯಾಗಿ ಓದಬೇಕು. ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮಾತನಾಡಿ, ಪ್ರತಿಯೊಬ್ಬ ಸರ್ಕಾರಿ ನೌಕರರಿಗೆ ವೃತ್ತಿ ಬುನಾದಿ ತರಬೇತಿ ಅವಶ್ಯಕವಾಗಿದೆ. ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಕೆಲಸ ನಿರ್ವಹಿಸಬೇಕು. ಕಚೇರಿಯ ಅಧಿಕಾರಿಗಳೊಂದಿಗೆ ಗೌರವದಿಂದ ವರ್ತಿಸಬೇಕು. ಜೊತೆಗೆ ಸಾರ್ವಜನಿಕರಿಗೆ ಉತ್ತಮವಾದ ಸೇವೆ ನೀಡಬೇಕು ಎಂದರು.

ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಮೂರ್ತಿ ದೇಸಾಯಿ, ಮೈಲಾರ್ ರಾವ್ ಕುಲಕರ್ಣಿ ಮತ್ತು ಲಾಯಕ್ ಅಲಿ ವಿಶೇಷ ಉಪನ್ಯಾಸ ನೀಡಿದರು. ತರಬೇತಿಯಲ್ಲಿ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

Share this article