ರಾಹುಲ್ ಜೀ ದೊಡ್ಮನಿ ಬಡದಾಳ
ಕನ್ನಡಪ್ರಭ ವಾರ್ತೆ ಚವಡಾಪುರಸಾಮಾನ್ಯವಾಗಿ ಒಂದೂರಿಂದ ಇನ್ನೊಂದು ಊರಿಗೆ ಹೋಗಲು ಗುಣಮಟ್ಟದ ರಸ್ತೆ ಸಂಪರ್ಕವಿರಬೇಕು. ದುರಾದೃಷ್ಟವೆನ್ನುವಂತೆ ಅಫಜಲ್ಪುರ ತಾಲೂಕಿನಾದ್ಯಂತ ಗ್ರಾಮೀಣ ರಸ್ತೆಗಳಿಂದ ಹಿಡಿದು ರಾಜ್ಯ ರಾಷ್ಟ್ರೀಯ ಹೆದ್ದಾರಿಗಳು ಕೂಡ ಹದಗೆಟ್ಟು ಹೋಗಿದ್ದು ಯಾವ ರಸ್ತೆಯಿಂದ ಸಂಚರಿಸಿದರೂ ಕೂಡ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ಅಫಜಲ್ಪುರ ತಾಲೂಕಿನ ಬಡದಾಳ, ಚಿಂಚೋಳಿ, ಅರ್ಜುಣಗಿ, ರೇವೂರ, ಕುಲಾಲಿ, ಹಳಿಯಾಳ, ಮಲ್ಲಾಬಾದ ಸೇರಿದಂತೆ ಅನೇಕ ಗ್ರಾಮೀಣ ರಸ್ತೆಗಳು ಹಾಗೂ ಅಫಜಲ್ಪುರ ಕರ್ಜಗಿ, ಮಣೂರ, ಮಾಶಾಳ ರಾಜ್ಯ ಹೆದ್ದಾರಿಗಳು, ಅಫಜಲ್ಪುರ ಬಳೂರ್ಗಿ, ಅಫಜಲ್ಪುರ ಕಲಬುರಗಿ ರಾಷ್ಟ್ರೀಯ ಹೆದ್ದಾರಿಗಳು ಸಾವಿನ ಕೂಪಗಳಾಗಿ ಮಾರ್ಪಟ್ಟಿವೆ. ನಿತ್ಯ ಒಂದಿಲ್ಲೊಂದು ರಸ್ತೆ ಅಪಘಾತಗಳಲ್ಲಿ ಜನ ಸಾವಿಗೀಡಾಗಿ ತಾಲೂಕಿನ ತುಂಬ ಸಂತಾಪ ಸೂಚಿಸಲಾರದಷ್ಟು ಕುಟುಂಬಗಳು ಬೀದಿಗೆ ಬರುತ್ತಲಿವೆ.ಪ್ರಸಕ್ತ ವರ್ಷದಲ್ಲಿ 45 ರಸ್ತೆ ಅಪಘಾತ 57 ಸಾವು ಪ್ರಕರಣ ದಾಖಲು:
ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 174 ಅಪಘಾತ ಪ್ರಕರಣಗಳು ದಾಖಲಾಗಿ 201 ಜನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲೂ ಪ್ರಸಕ್ತ ವರ್ಷದಲ್ಲಿ 45 ರಸ್ತೆ ಅಪಘಾತಗಳು ಸಂಭವಿಸಿದ್ದು 57 ಕ್ಕೂ ಹೆಚ್ಚಿನ ಜನ ಅಸುನೀಗಿದ್ದಾರೆ. ಕಳೆದ ವಾರ ದಂಪತಿ ಸೇರಿ ನಾಲ್ವರು ಹದಗೆಟ್ಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಮಾಂಡರ್ ಜೀಪಿನಲ್ಲಿ ಸಂಚರಿಸುವಾಗ ಅಪಘಾತವಾಗಿ ಜೀವ ಕಳೆದುಕೊಂಡಿದ್ದಾರೆ.ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ: ಗ್ರಾಮೀಣ ಭಾಗದ ರಸ್ತೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕಾಗಿದ್ದ ಕ್ಷೇತ್ರದ ಜನಪ್ರತಿನಿಧಿಗಳು ರಸ್ತೆಗಳು ಹದಗೆಟ್ಟು ದಿನಕ್ಕೊಂದು ಅಪಘಾತಗಳಾಗಿ ಜನ ಜೀವ ಕಳೆದುಕೊಳ್ಳುತ್ತಿದ್ದರೂ ಕೂಡ ಕ್ಯಾರೆ ಎನ್ನುತ್ತಿಲ್ಲ. ಅದೇ ರೀತಿ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು ಕೂಡ ಹದಗೆಟ್ಟು ದಿನಕ್ಕೊಂದು ಅಪಘಾತಗಳು ಸಂಭವಿಸಿ ಅಮೂಲ್ಯ ಜೀವಗಳು ಹೆದ್ದಾರಿ ಮೇಲೆ ಪ್ರಾಣಪಕ್ಷಿಗಳು ಹಾರಿ ಹೋಗುತ್ತಿದ್ದರೂ ಕೂಡ ಹೆದ್ದಾರಿ ಸರಿ ಪಡಿಸುವ ಗೋಜಿಗೆ ಹೋಗುತ್ತಿಲ್ಲ. ಇದೆಲ್ಲವನ್ನು ನೋಡಿದಾಗ ಇವರಿಗೆ ಜನರ ಜೀವದ ಬಗ್ಗೆ ಇರುವ ಕಾಳಜಿ ಎಂಥದ್ದು ಎನ್ನುವುದು ಸ್ಪಷ್ಟವಾಗುತ್ತದೆ. ಇದೆಲ್ಲವನ್ನು ಗಮನಿಸಿದಾಗ ಅಫಜಲ್ಪುರದ ಕಡೆ ಯಾರು ಬರಬೇಡಿ ಇದು ಅಪಘಾತ ವಲಯ ಎನ್ನುವ ಮಾತುಗಳು ನಿತ್ಯ ಜನರ ಬಾಯಲ್ಲಿ ಕೇಳುವಂತಾಗಿದೆ.ಅಫಜಲ್ಪುರ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿದ್ದು ಅದನ್ನು 25 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಕಲಬುರಗಿ ಹೈ ಕೋರ್ಟ್‌ನಿಂದ ಅಫಜಲ್ಪುರ ತಾಲೂಕಿನ ಮಾದಾಬಾಳ ತಾಂಡಾದ ವರೆಗೆ ಹೆದ್ದಾರಿ ನವೀಕರಣ ಮಾಡಲಾಗುತ್ತಿದೆ. ಈಗಾಗಲೇ ಟೆಂಡರ್ ಆಗಿದ್ದು ಏಜೆನ್ಸಿ ಕೂಡ ನೇಮಿಸಲಾಗಿದೆ, ಇನ್ನೊಂದು ವಾರದೊಳಗೆ ಕಾಮಗಾರಿ ಆರಂಭವಾಗಲಿದೆ.
ಗೋರಖನಾಥ ಚನ್ನಶೆಟ್ಟಿ, ಎಇಇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರನಾವು ಯಾವ ಊರಿಗೆ ಹೋಗಬೇಕೆಂದರೂ ಜೀವ ಕೈಯಲ್ಲಿ ಹಿಡಿದು ಹೋಗುವಂತಾಗಿದೆ. ವಾಹನ ಹತ್ತಿದವರು ಮರಳಿ ಸುರಕ್ಷಿತವಾಗಿ ಮನೆಗೆ ಬರುತ್ತೇವಾ ಎನ್ನುವ ಅಳುಕಿನಲ್ಲೇ ವಾಹನ ಹತ್ತುವಂತಾಗಿದೆ. ಸಂಬಂಧ ಪಟ್ಟವರು ಕೂಡಲೇ ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವ ಕೆಲಸ ಮಾಡಲಿ.
ಮಂಜುನಾಥ ಆನೂರ, ಸಾಮಾಜಿಕ ಹೋರಾಟಗಾರ