ಯಾದಗಿರಿ : ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣ ಸೇರಿದಂತೆ ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ, ನರೇಗಾ ಕೂಲಿ ಹಣವನ್ನು ರೈತರ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳುತ್ತಿದ್ದ ಬ್ಯಾಂಕುಗಳ ಕ್ರಮದ ವಿರುದ್ಧ ಶುಕ್ರವಾರ (ಮೇ 17) ಪ್ರಕಟಗೊಂಡ "ಕನ್ನಡಪ್ರಭ " ವರದಿ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.
ಬರ ಪರಿಹಾರದ ಹಣವಷ್ಟೇ ಅಲ್ಲ, ‘ಪಿಂಚಣಿ, ನರೇಗಾ ಕೂಲಿ ಹಣವೂ ಸಾಲಕ್ಕೆ ಜಮೆ’ ಶೀರ್ಷಿಕೆಯಡಿ ಶುಕ್ರವಾರದ ಪ್ರಕಟಗೊಂಡಿದ್ದ ವರದಿ ಆಡಳಿತಕ್ಕೆ ಚುರುಕು ಮುಟ್ಟಿಸಿದೆ. ಬ್ಯಾಂಕುಗಳ ಈ ಕ್ರಮ ರೈತಾಪಿ ವರ್ಗದಲ್ಲಿ ಆಕ್ರೋಶ ಮೂಡಿಸಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಡಾ. ಸುಶೀಲಾ ಆದೇಶದ ಮೇರೆಗೆ, ಜಿಲ್ಲೆಯ ಎಲ್ಲ ಬ್ಯಾಂಕುಗಳ ವ್ಯವಸ್ಥಾಪಕರ ಜೊತೆ ತುರ್ತುಸಭೆ ನಡೆಸಿದ ಯಾದಗಿರಿ ಜಿಲ್ಲಾ ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಲೋಕೇಶ್, ಇಂತಹ ಯಾವುದೇ ಕ್ರಮಕ್ಕೆ ಮುಂದಾಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬರ ಪರಿಹಾರದ ಹಣ ಸೇರಿದಂತೆ ವೃದ್ಧಾಪ್ಯ ವೇತನ, ವಿಧವಾ ವೇತನ, ಪಿಂಚಣಿ, ಪಿಎಂ ಕಿಸಾನ್ ನೆರವು ಮುಂತಾದ ಸರ್ಕಾರದಿಂದ ನೇರವಾಗಿ ಫಲಾನುಭವಿಗಳಿಗೆ ನೇರವಾಗಿ (ಡಿಬಿಟಿ- ಡೈರೆಕ್ಟ್ ಬೆನೆಫಿಟ್ ಟ್ರಾನ್ಸಫರ್) ಮೂಲಕ ಸಂದಾಯವಾಗುವ ಹಣವನ್ನು ಯಾವುದೇ ಕಾರಣಕ್ಕಾಗಿ ಸಾಲದ ಖಾತೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಸೂಚಿಸಿದರು.
ಸರ್ಕಾರವು 2023-24 ನೇ ಸಾಲಿನ ಅವಧಿಯಲ್ಲಿ ಬರ ಹಿನ್ನೆಲೆಯಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿದ ಪರಿಹಾರದ ಮೊತ್ತವನ್ನು ಬ್ಯಾಂಕುಗಳು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿವೆ ಎಂದು ಆರೋಪ ಕೇಳಿಬರುತ್ತಿದ್ದು, ಇದು ಬಹಳ ಗಂಭೀರ ವಿಷಯವಾಗಿ ಪರಿಗಣಿಸಲಾಗಿದೆ ಎಂದು ಲೋಕೇಶ್ ಹೇಳಿದರು.
ಸಂಯಮದಿಂದ ವರ್ತಿಸಿ: ರೈತರು, ಸಾರ್ವಜನಿಕರು ಬ್ಯಾಂಕಿಗೆ ಬಂದಾಗ ಸಂಯಮದಿಂದ ವರ್ತಿಸುವ ಮೂಲಕ ಸ್ಪಂದಿಸಬೇಕು. ಏನಾದರೂ ತಾಂತ್ರಿಕ ದೋಷಗಳಿದ್ದರೆ ತಿಳಿವಳಿಕೆ ಮೂಡಿಸಿ ಸಮಸ್ಯೆ ಇತ್ಯರ್ಥಪಡಿಸಲು ಸಹಕಾರ ನೀಡಿ ಎಂದು ಲೋಕೇಶ ಸೂಚಿಸಿದರು.
ಸಂಚಲನ ಮೂಡಿಸಿದ "ಕನ್ನಡಪ್ರಭ " ವರದಿ
ಯಾದಗಿರಿ: "ಬರ ಹಣ ರೈತರ ಸಾಲಕ್ಕೆ ಜಮೆ " ಶೀರ್ಷಿಕೆಯಡಿ "ಕನ್ನಡಪ್ರಭ "ದಲ್ಲಿ ಮೇ 15ರಂದು ಪ್ರಕಟಗೊಂಡಿದ್ದ ವರದಿಯಿಂದ ಎಚ್ಚೆತ್ತ ಆಡಳಿತ, ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕುಗಳಿಗೆ ಆದೇಶಿಸಿತ್ತು.
ಆದರೆ, ಜಿಲ್ಲಾಧಿಕಾರಿ ಆದೇಶಕ್ಕೂ ಕ್ಯಾರೇ ಅನ್ನದ ಬ್ಯಾಂಕ್ ಅಧಿಕಾರಿಗಳು, ಸಾಮಾಜಿಕ ಪಿಂಚಣಿಗಳಾದ ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ, ನರೇಗಾ ಕೂಲಿ ಹಣವನ್ನೂ ಫಲಾನುಭವಿಗಳಿಗೆ ನೀಡಲು ಹಿಂದೇಟು ಹಾಕಿದ್ದವು. ಬ್ಯಾಂಕುಗಳ ಈ ಧೋರಣೆ ವಿರುದ್ಧ ಅನೇಕ ರೈತರು ತಮ್ಮ ನೋವು ತೋಡಿಕೊಂಡಿದ್ದರು.
ಈ ಕುರಿತು ಕನ್ನಡಪ್ರಭದಲ್ಲಿ ಮೇ 16 ರಂದು ಪ್ರಕಟಗೊಂಡ ವರದಿ ಬ್ಯಾಂಕುಗಳಿಗೆ ಚುರುಕು ಮುಟ್ಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಇದು ಬಂದಿದ್ದು, ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದ್ದರು ಎನ್ನಲಾಗಿದೆ.