ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ : ಜನಾರ್ದನ ರೆಡ್ಡಿ

KannadaprabhaNewsNetwork |  
Published : Sep 20, 2024, 01:42 AM ISTUpdated : Sep 20, 2024, 01:13 PM IST
19ುಲು2 | Kannada Prabha

ಸಾರಾಂಶ

ನಗರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಅನುದಾನ ಹಂಚಿಕೆಯಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಎಲ್ಲ ವಾರ್ಡ್‍ಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗುವುದು.

 ಗಂಗಾವತಿ : ನಗರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಅನುದಾನ ಹಂಚಿಕೆಯಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಎಲ್ಲ ವಾರ್ಡ್‍ಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಗರ ಪ್ರದೇಶವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, 35 ವಾರ್ಡ್‍ಗಳನ್ನು ಸಹ ಅಭಿವೃದ್ಧಿಪಡಿಸಬೇಕಾಗಿದೆ. ನಗರದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಅಷ್ಟೇ ಅಲ್ಲದೆ ಬೇರೆ ಬೇರೆ ಗ್ರಾಮಗಳಿಂದ ಸಹ ಸಾಕಷ್ಟು ಜನರು ನಗರಕ್ಕೆ ಆಗಮಿಸುತ್ತಿದ್ದಾರೆ. ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಟ್ರಾಫಿಕ್ ಸಮಸ್ಯೆ ಕಂಡು ಬರದಂತೆ ರಸ್ತೆಗಳ ಅಗಲೀಕರಣ, ಚರಂಡಿಗಳ ನಿರ್ಮಾಣ, ಸಿಸಿ ರಸ್ತೆಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಸೌಕರ್ಯ ಸೇರಿದಂತೆ ನಾನಾ ಸಮಸ್ಯೆಗಳು ಇರುವ ಎಲ್ಲ ವಾರ್ಡ್‍ಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ನಗರಸಭೆಗೆ ಕೆಕೆಆರ್‌ಡಿಬಿ ವತಿಯಿಂದ ₹45 ಕೋಟಿ ಅನುದಾನ ಬಂದಿದೆ. ಅದನ್ನು ಎಲ್ಲ ವಾರ್ಡ್‍ಗಳಿಗೂ ಸಮಾನವಾಗಿ ಹಂಚಿಕೆ ಮಾಡಲಾಗುವುದು. ಅನುದಾನ ಹಂಚಿಕೆಯಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಮುಂದಿನ ದಿನಮಾನಗಳಲ್ಲಿ ರಾಜ್ಯದಲ್ಲಿಯೇ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳ ಪಟ್ಟಿಯಲ್ಲಿ ಗಂಗಾವತಿ ಕೂಡ ಸೇರ್ಪಡೆಗೊಳ್ಳಲಿದೆ ಎಂದು ಹೇಳಿದರು.

ಮಾರುಕಟ್ಟೆ ಸ್ಥಳಾಂತರ ಕಡ್ಡಾಯ:

ನಗರಸಭೆಯ ಲಕ್ಷಾಂತರ ರೂ. ಅನುದಾನ ಬಳಸಿಕೊಂಡು ಗುಂಡಮ್ಮ ಕ್ಯಾಂಪ್‌ನಲ್ಲಿ ವಿಶಾಲವಾದ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ. ಅದು ಬಳಕೆಯಿಲ್ಲದೆ ಹಾಳಾಗುತ್ತಿದೆ. ಹಾಗಾಗಿ ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳು, ತರಕಾರಿ ಮಾರುವ ವ್ಯಾಪಾರಿಗಳು, ಮಾಂಸದ ವ್ಯಾಪಾರಿಗಳು ಗುಂಡಮ್ಮ ಕ್ಯಾಂಪ್‌ ಮಾರುಕಟ್ಟೆಗೆ ಸ್ಥಳಾಂತರಗೊಳ್ಳಬೇಕು. ಸ್ವಯಂ ಪ್ರೇರಣೆಯಿಂದ ವ್ಯಾಪಾರಿಗಳು ಸ್ಥಳಾಂತರಗೊಳ್ಳದೆ ಇದ್ದರೆ ಪೊಲೀಸ್ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳಾಂತರ ಮಾಡಲಾಗುವುದು. ಮಾರುಕಟ್ಟೆಯಲ್ಲಿ ಒಟ್ಟು 59 ಮಳಿಗೆಗಳು ಇದ್ದು, ಅದರಲ್ಲಿ 41 ತರಕಾರಿ ಮಳಿಗೆಗಳು, 18 ಮಾಂಸದ ಅಂಗಡಿಗಳು ಇವೆ. ಇವುಗಳಿಗೆ ಆದಷ್ಟು ಬೇಗನೆ ಟೆಂಡರ್‌ ಕರೆದು ವ್ಯಾಪಾರಿಗಳಿಗೆ ಮಳಿಗೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

85 ನಿರ್ಣಯಗಳಿಗೆ ಅನುಮೋದನೆ:

ನಗರದಲ್ಲಿರುವ 35 ವಾರ್ಡ್‍ಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯ ಚರ್ಚಿಸಿ 85 ನಿರ್ಣಯ ತೆಗೆದುಕೊಂಡು ಒಪ್ಪಿಗೆ ಸೂಚಿಸಲಾಯಿತು.

ನಗರದ ಚರಂಡಿ ದುರಸ್ತಿ, ಸಿಸಿ ರಸ್ತೆಗಳ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ, ಬ್ಯಾನರ್‌ ಅಳವಡಿಕೆಗೆ ಟೆಂಡರ್ ಕರೆಯುವುದು, ನಿವೇಶನ ವಸತಿ ವಿನ್ಯಾಸಕ್ಕೆ ಒಪ್ಪಿಗೆ ನೀಡುವುದು, ಉದ್ಯಾನವನಗಳ ಅಭಿವೃದ್ಧಿ, ಶೌಚಾಲಯಗಳ ನಿರ್ಮಾಣ, ರುದ್ರಭೂಮಿಯಲ್ಲಿ ವಿದ್ಯುತ್ ದೀಪಗಳ ಅಳವಡಿಕೆ, ಘನತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ನೀಡುವುದು, ಹೊಸ ವಿದ್ಯುತ್ ಕಂಬಗಳ ಅಳವಡಿಕೆ ಸೇರಿದಂತೆ ಎಲ್ಲ ನಿರ್ಣಯಗಳಿಗೆ ನಗರಸಭೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ನಗರಸಭೆ ಅಧ್ಯಕ್ಷ ಮೌಲಾಸಾಬ್, ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಡಮನಿ, ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ, ನಗರಸಭೆ ಸದಸ್ಯರಾದ ಶಾಮೀದ್ ಮನಿಯಾರ್, ಪರಶುರಾಮ ಮಡ್ಡೇರ, ವಾಸುದೇವ ನವಲಿ, ಎಫ್. ರಾಘವೇಂದ್ರ, ಮನೋಹರಸ್ವಾಮಿ, ಖಾಸಿಂಸಾಬ್ ಗದ್ವಾಲ್, ಉಸ್ಮಾನ್ ಹಾಗೂ ಇತರರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!