- ನಮ್ಮ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ- ಭಿನ್ನಾಭಿಪ್ರಾಯ, ಗೊಂದಲ, ಗದ್ದಲಗಳನ್ನೆಲ್ಲಾ ಬದಿಗೊತ್ತಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿರಿ
ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಪಕ್ಷವು ದಾವಣಗೆರೆ ಲೋಕಸಭಾ ಕ್ಷೇತ್ರ ಗೆಲ್ಲುವುದರಲ್ಲಿ ಯಾವುದೇ ಅನುಮಾನವೂ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ನಗರದ ಬಂಟರ ಭವನದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನಪ ಪರ ಪಕ್ಷದ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಯಾವ ರೀತಿ ಹೋರಾಟ ಮಾಡಬೇಕೆಂಬ ಬಗ್ಗೆ ನಾಯಕರೆಲ್ಲಾ ಚರ್ಚಿಸಿದ್ದಾರೆ ಎಂದರು.ಭಿನ್ನಾಭಿಪ್ರಾಯ, ಗೊಂದಲಗಳಿದ್ದರೆ ಬದಿಗೊತ್ತಿ. ಅತಿ ಹೆಚ್ಚು ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಮುಖಂಡರು, ಕಾರ್ಯಕರ್ತರು ಸಮಸ್ಯೆ ಗಮನಕ್ಕೆ ತಂದರೆ ಪರಿಹರಿಸುತ್ತೇವೆ ಎಂದು ತಿಳಿಸಿದರು.
ಶಾಸಕರೂ ಒಂದೇ. ಎಲ್ಲರೂ ಒಂದೇ ಕುಟುಂಬವೆಂದು, ಕೆಲಸ ಮಾಡಿದಾಗ ಮಾತ್ರ ಕಾಂಗ್ರೆಸ್ ಗೆಲುವು ಸಾಧ್ಯ. ನಮ್ಮ ಜನರಿಗೆ ಬೇಕಾಗಿರುವುದು ಅನ್ನ, ಅರಿವು, ಆಶ್ರಯ, ಆರೋಗ್ಯಗಳೇ ಹೊರತು, ಐಷಾರಾಮಿ ಬದುಕಲ್ಲ. ಕಾಂಗ್ರೆಸ್ ಸದಾ ಜನರ ಕಷ್ಟ, ನಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವ ಪಕ್ಷವಾಗಿದೆ ಎಂದರು.
ಡಾ. ಎಚ್.ಬಿ. ಮಂಜಪ್ಪ ಅಧ್ಯಕ್ಷತೆ ವಹಿಸಿ, ದಾವಣಗೆರೆ ಕ್ಷೇತ್ರದಲ್ಲಿ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ 8 ಲಕ್ಷಕ್ಕೂ ಅಧಿಕ ಮತಗಳು ಬೀಳಲಿವೆ. ಕನಿಷ್ಠ 2.5 ಲಕ್ಷ ಮತಗಳಿಗೂ ಅಧಿಕ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ನಾವು, ನೀವೆಲ್ಲರೂ ಚುನಾವಣೆ ದಿನದವರೆಗೂ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹಗಲಿರುಳು ಶ್ರಮಿಸೋಣ ಎಂದು ತಿಳಿಸಿದರು.
- - - ಬಾಕ್ಸ್-1 ಡಾ.ಪ್ರಭಾ ಸ್ಪರ್ಧೆಗೆ ವರಿಷ್ಠರಿಂದ ಒತ್ತಡ: ಎಸ್‌ಎಸ್‌ಎಂ
ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಎಚ್.ಬಿ.ಮಂಜಪ್ಪ ಸ್ಪರ್ಧಿಸಿದ್ದರು. ಈ ಸಲವೂ ಮಂಜಪ್ಪ ಹೆಸರು ಪ್ರಸ್ತಾಪವಾಗಿತ್ತು. ಅನಂತರ ವಿನಯಕುಮಾರ ಹೆಸರು ಕೇಳಿಬಂದಿದ್ದು, ನಮ್ಮ ಜಿಲ್ಲೆಯವರಲ್ಲ. ನಮ್ಮ ಜಿಲ್ಲೆಯ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದೆವು ಎಂದರು.
ಸುರ್ಜೇವಾಲಾರಿಂದ ನಾಲ್ಕೈದು ಸಲ ಕರೆ ಬಂದಿತ್ತು. ಅಷ್ಟೂ ಸಲವೂ ಚುನಾವಣೆಗೆ ನಿಲ್ಲುವಂತೆ ಒತ್ತಡ ಹೇರಿದ್ದರು. ಕಳೆದ ಅನೇಕ ಚುನಾವಣೆಯಲ್ಲಿ ನಮ್ಮ ಪರವಾಗಿ ಕೆಲಸ ಮಾಡಿ, ಅನುಭವ ಇರುವ ಡಾ.ಪ್ರಭಾ ಬಗ್ಗೆ ಸಮೀಕ್ಷೆ ಆಧರಿಸಿ, ರಾಜ್ಯ, ರಾಷ್ಟ್ರೀಯ ನಾಯಕರ ಒತ್ತಡಕ್ಕೆ ಮಣಿದು, ಚುನಾವಣೆಗೆ ಒಪ್ಪಿದೆ. ಪಕ್ಷಕ್ಕಾಗಿ ಡಾ.ಪ್ರಭಾ ಸಲ್ಲಿಸಿದ ಸೇವೆ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಹೀಗೆ ನಾನಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಗುರುತಿಸಿ, ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ಈಗ ನಿಮ್ಮೆಲ್ಲರ ಶ್ರಮದಿಂದ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯ, ಗೊಂದಗಳಿದ್ದರೂ ಅದನ್ನೆಲ್ಲಾ ಬದಿಗೊತ್ತಿ, ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು. ನಗರದ ಬಂಟರ ಭವನದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಪಕ್ಷದ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 8 ಚುನಾವಣೆ ಯಲ್ಲಿ ಮಾವನವರಾದ ಡಾ.ಶಾಮನೂರು ಶಿವಶಂಕರಪ್ಪ, ತಮ್ಮ ಪತಿ ಎಸ್.ಎಸ್.ಮಲ್ಲಿಕಾರ್ಜುನ್ ಪರವಾಗಿ ಕೆಲಸ ಮಾಡಿದ್ದೇನೆ ಎಂದರು. ಚುನಾವಣೆಯಲ್ಲಿ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ತಾವೇ ಕಾಂಗ್ರೆಸ್ ಅಭ್ಯರ್ಥಿಯೆಂಬುದಾಗಿ ತಿಳಿದು, ಕೆಲಸ ಮಾಡಿದರೆ ನಮ್ಮ ಗೆಲುವು ಕಷ್ಟವೇನಲ್ಲ. ಎಲ್ಲಾ ಭಿನ್ನಾಭಿಪ್ರಾಯ ಬದಿಗೊತ್ತಿ, ಎಲ್ಲರೂ ಚುನಾವಣೆವರೆಗೂ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷದ ಗೆಲುವೇ ನಮ್ಮ, ನಿಮ್ಮೆಲ್ಲರ ಗುರಿಯಾಗಬೇಕು ಎಂದು ಹೇಳಿದರು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ಅವರು ₹6 ಕೋಟಿ ವೆಚ್ಚದಲ್ಲಿ ಉಚಿತ ಲಸಿಕೆ ವ್ಯವಸ್ಥೆ ಮಾಡಿದ್ದರು. ಎಸ್ಸೆಸ್ ಕೇರ್ ಟ್ರಸ್ಟ್ ಮೂಲಕ ಪ್ರತಿ ತಿಂಗಳೂ ಉಚಿತ ಡಯಾಲಿಸಿಸ್ ಮಾಡಿಸಲಾಗುತ್ತಿದೆ. ಮಹಿಳೆಯರು, ಯುವತಿಯರು, ಮಕ್ಕಳ ಆರೋಗ್ಯ ತಪಾಸಣೆ, ಔಷಧಿ ವಿತರಣೆ ಕಾರ್ಯ ನಿರಂತರ ಸಾಗುತ್ತಿದೆ ಎಂದು ತಿಳಿಸಿದರು.ಜನ ಸೇವೆಗೆಂದೇ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ತಾವು ದಿನದ 24 ಗಂಟೆ ಕೆಲಸ ಮಾಡಲು ಸಿದ್ಧರಿದ್ದೇವೆ. ಈ ಹಿನ್ನೆಲೆ ಎಲ್ಲರೂ ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಚುನಾವಣೆಯನ್ನು ಮಾಡೋಣ. ಅಲ್ಲದೇ, ಚುನಾವಣೆ ಸಂದರ್ಭದಲ್ಲಿ ಯಾವುದೇ ಪಕ್ಷವನ್ನಾಗಲೀ, ವ್ಯಕ್ತಿಯನ್ನಾಗಲೀ ನಿಂದಿಸದೇ, ಮತಯಾಚಿಸಲು ನಿರ್ಧರಿಸಿದ್ದೇನೆ. ಹಲವಾರು ಮಠಾಧೀಶರೂ ನನಗೆ ಇದೇ ಸಲಹೆ ನೀಡಿದ್ದಾರೆ ಎಂದು ಕಾರ್ಯಕರ್ತರಿಗೆ ಅಭಿವೃದ್ಧಿ, ಜನಪರ ಕಾರ್ಯ, ಮಾನವೀಯ ಸೇವೆಗಳ ಆದಾರದಲ್ಲಿ ಮತ ಕೇಳುವಂತೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ ನೀಡಿದರು.
- - -ಕೋಟ್
400 ಸೀಟುಗಳ ಗೆದ್ದರೆ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದ ಸಂಸದ ಅನಂತಕುಮಾರ ಹೆಗಡೆಗೆ ಬಿಜೆಪಿ ಟಿಕೆಟ್ ತಪ್ಪಿದೆ. ಹಾಗಾಗಿ, ಸಂವಿಧಾನ ಬದಲಾಯಿಸುವವರು ಮತ್ತು ಸಂವಿಧಾನ ಉಳಿಸಿಕೊಳ್ಳುವವರ ಮಧ್ಯೆ ನಡೆಯುತ್ತಿರುವ ಯುದ್ಧ ಲೋಕಸಭೆ ಚುನಾವಣೆ-2024 ಆಗಿದೆ. ನಮ್ಮೆಲ್ಲರಿಗೂ ಕಾಂಗ್ರೆಸ್ ಪಕ್ಷದ ಗೆಲುವೇ ಗುರಿಯಾಗಬೇಕು- ನಿಖಿತ್ ರಾಜ್, ಕೆಪಿಸಿಸಿ ವಕ್ತಾರ
- - - -(ಫೋಟೋ ಬರಲಿವೆ)