ಕನ್ನಡಪ್ರಭ ವಾರ್ತೆ, ತುಮಕೂರುತಂತ್ರಜ್ಞಾನ ಪ್ರಾಬಲ್ಯವಿರುವ ಯುಗದಲ್ಲಿ ಸರ್ವವ್ಯಾಪಿಯಾಗಿರುವ ಮೊಬೈಲ್ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್. ಚೇತನಕುಮಾರ್ ಹೇಳಿದರು.ನಗರದ ಬಾಲಭವನದಲ್ಲಿ ಬಾಲಭವನ ಸಮಿತಿ ಹಾಗೂ ಝೆನ್ ಟೀಮ್ ವತಿಯಿಂದ ಆಯೋಜಿಸಿದ್ದ ಮೈಸೂರು ರಂಗಾಯಣದ ಮೈ ಫ್ಯಾಮಿಲಿ ನಾಟಕ ಉದ್ಘಾಟಿಸಿ ಮಾತನಾಡಿದರು.ಮೊಬೈಲ್‌ನಿಂದ ಸಿಗುವ ಮನರಂಜನೆಯ ಆಕರ್ಷಣೆಯು ಏಕಾಗ್ರತೆಗೆ ಭಂಗ ತರುತ್ತದೆ. ಇದರಿಂದಾಗಿ ಮಕ್ಕಳ ಕಡಿಮೆ ಶೈಕ್ಷಣಿಕ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ. ಮೊಬೈಲ್ ಅತಿಯಾದ ಬಳಕೆ ವ್ಯಸನದಂತಹ ನಡಾವಳಿಕೆಗೆ ಕಾರಣವಾಗುತ್ತದೆ. ಹೀಗಾಗಿ ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ನೀಡಬೇಕು ಎಂಬುದನ್ನು ಪೋಷಕರು ನಿರ್ಧರಿಸಬೇಕು ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ದಿನೇಶ ಉಪಸ್ಥಿತರಿದ್ದರು.