ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಬಾಲ್ಯದಲ್ಲಿಯೇ ಕೌಟುಂಬಿಕ ವ್ಯವಸ್ಥೆಗೆ ನೂಕಿ ಜೈಲು ಪಾಲಾಗಬೇಡಿ ಎಂದು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ. ಸರ್ದಾರ್ ಎಚ್ಚರಿಸಿದರು.
ಕನ್ನಡಪ್ರಭವಾರ್ತೆ ಚಿತ್ರದುರ್ಗಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಬಾಲ್ಯದಲ್ಲಿಯೇ ಕೌಟುಂಬಿಕ ವ್ಯವಸ್ಥೆಗೆ ನೂಕಿ ಜೈಲು ಪಾಲಾಗಬೇಡಿ ಎಂದು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ. ಸರ್ದಾರ್ ಎಚ್ಚರಿಸಿದರು.ಟಿಪ್ಪು ಸ್ಪೋರ್ಟ್ಸ್ ಕ್ರಿಕೆಟ್ ಕ್ಲಬ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬಡಾಮಕಾನ್‍ನ ಚಿಸ್ತಿಯಾ ಶಾದಿ ಮಹಲ್‍ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ನಿಷೇಷ ಕಾಯ್ದೆ ಮತ್ತು ಮಹಿಳೆ, ಮಕ್ಕಳ ಅಕ್ರಮ ಸಾಗಾಣಿಕೆ ತಡೆ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಪೋಷಣ್ ಮಾಸಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಸಾಕಷ್ಟು ಕಂಡು ಬರುತ್ತಿದ್ದು, ಬಡತನ ಹಾಗೂ ಇನ್ನಿತರೆ ಕಾರಣಗಳಿಗಾಗಿ ಮದುವೆ ಮಾಡಿದರೆ ಪೋಷಕರುಗಳ ವಿರುದ್ಧ ಪೋಕ್ಸೋ ಕೂಡ ದಾಖಲಾಗುತ್ತದೆ. ಹಾಗಾಗಿ ಬಾಲ್ಯ ವಿವಾಹ ಮಾಡಬಾರದೆಂದು ತಾಕೀತು ಮಾಡಿದರು.ಹೆಣ್ಣಿಗೆ ಹದಿನೆಂಟು ವರ್ಷ ಹಾಗೂ ಗಂಡಿಗೆ 21 ವರ್ಷವಾಗುವವರೆಗೆ ವಿವಾಹ ಮಾಡಬಾರದೆಂದು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಬಾಲ್ಯ ವಿವಾಹ ಪ್ರಕರಣಗಳು ಜಾಸ್ತಿಯೇ ಆಗುತ್ತಿವೆ. ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಕಠಿಣ ಕಾನೂನು ಜಾರಿಗೆ ಸಿದ್ಧತೆಗಳು ಆಗುತ್ತಿವೆ ಎಂದು ತಿಳಿಸಿದರು.ಹಿರಿಯ ನ್ಯಾಯವಾದಿ ಬಿ.ಕೆ. ರಹಮತ್‍ವುಲ್ಲಾ ಮಾತನಾಡಿ, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಎರಡು ವರ್ಷ ಸಜೆಯಾಗುತ್ತದೆ. ಹೆಣ್ಣಿಗೆ ಹದಿನೆಂಟು ವರ್ಷ, ಗಂಡಿಗೆ 21 ವರ್ಷವಾಗಿದ್ದರೆ ಮಾತ್ರ ವಿವಾಹವಾಗಲು ಅರ್ಹರು. ಇಲ್ಲದಿದ್ದರೆ ಅಂತಹ ವಿವಾಹ ಅಸಿಂಧುವಾಗುತ್ತದೆ ಎನ್ನುವ ಅರಿವು ಪೋಷಕರುಗಳಲ್ಲಿ ಮೂಡಬೇಕಿದೆ ಎಂದರು.
ಇಸ್ಲಾಂ ಧರ್ಮದಲ್ಲಿ ನಾಲ್ಕು ಮದುವೆಯಾಗಬಹುದು. ಹಾಗಂತ ಸರ್ಕಾರಿ ನೌಕರ ಒಂದಕ್ಕಿಂತ ಹೆಚ್ಚು ವಿವಾಹವಾದರೆ ಕಾನೂನಿನಡಿ ಶಿಕ್ಷೆಗೊಳಪಡುತ್ತಾನೆ. ದೇಶದ ಕಾನೂನು ಪರಿಪಾಲನೆ ಮಾಡುವುದು ಧರ್ಮದ ಅರ್ಧ ಭಾಗ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅಪ್ರಾಪ್ತ ಬಾಲಕಿಯ ಜತೆ ದೈಹಿಕ ಸಂಪರ್ಕವಿಟ್ಟುಕೊಂಡರೆ ಪೋಕ್ಸೋ ಕಾಯಿದೆಯಡಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ದೇಶದ ಕಾನೂನು ಪರಿಪಾಲನೆ ಮಾಡಬೇಕು ಎಂದರು.ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜ್‍ಪೀರ್ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ. ಹೆಣ್ಣು-ಗಂಡು ವಿವಾಹವಾಗುವುದು ಪ್ರಕೃತಿ ನಿಯಮ. ತಂದೆ ತಾಯಿಗಳು ಕಾನೂನು ಅರಿವಿಲ್ಲದೆ ತಮ್ಮ ಮಕ್ಕಳಿಗೆ ಅಪ್ರಾಪ್ತ ವಯಸ್ಸಿನಲ್ಲಿಯೇ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾದ ಎನ್ನುವುದು ಗೊತ್ತಿರಬೇಕು. ಸರ್ಕಾರ ಹಾಗೂ ಸಂವಿಧಾನದಡಿ ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷಗಳಾಗಿದ್ದಾಗ ಮಾತ್ರ ವಿವಾಹವಾಗಲು ಅರ್ಹರು ಎನ್ನುವ ಜಾಗೃತಿ ಎಲ್ಲರಲ್ಲೂ ಮೂಡಬೇಕು ಎಂದು ತಿಳಿಸಿದರು.ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ನಗರಸಭೆ ಸದಸ್ಯ ನಸ್ರುಲ್ಲಾ, ನಿವೃತ್ತ ಡಿವೈಎಸ್ಪಿಗಳಾದ ಅಬ್ದುಲ್‍ರೆಹಮಾನ್, ಸೈಯದ್ ಇಸಾಕ್, ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಅಂಜದ್ ಮೊಹಿನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎಂ. ವೀಣಾ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.