ಕಷ್ಟವೆಂದು ಸನ್ಮಾರ್ಗ ತೊರೆಯದಿರಿ

KannadaprabhaNewsNetwork |  
Published : Dec 12, 2023, 12:45 AM IST
ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ವಿವೇಕ ತೋರಣ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಲೀಲಾಮೃತ ಉಪನ್ಯಾಸ ಮಾಲಿಕೆಯಲ್ಲಿ ಶ್ರೀ ರಾಮಕೃಷ್ಟಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು.  | Kannada Prabha

ಸಾರಾಂಶ

ಸತ್ಯನಿಷ್ಠರಿಗೆ, ಸನ್ಮಾರ್ಗಿಗಳಿಗೆ ಆರಂಭದಲ್ಲಿ ಕಷ್ಟಗಳು ಬರುವುದು ಸಹಜ. ನೂರಕ್ಕೆ ನೂರರಷ್ಟು ಧರ್ಮ ಪಾಲನೆಯಿಂದ ವನವಾಸ ತಪ್ಪಿದ್ದಲ್ಲ. ಧರ್ಮ ಪಾಲನೆಯಿಂದ ವನವಾಸ ಖಚಿತ ಎಂದಷ್ಟೇ ತಿಳಿಯಬಾರದು. ಜೀವನಪೂರ್ತಿ ವನವಾಸ ಆಗುವುದಿಲ್ಲ. ಕಷ್ಟಗಳು ಬರುವುದು ಕಡಿಮೆ ದಿನಗಳಷ್ಟೇ. ಶ್ರೀರಾಮನಿಗೆ ವನವಾಸದ ಬಳಿಕ ಪಟ್ಟಾಭಿಷೇಕವಾಯಿತು. ಸುಖವೂ ದಕ್ಕಿತು ಎಂಬುದನ್ನು ಸಹ ಅರ್ಥ ಮಾಡಿಕೊಳ್ಳಬೇಕು. ಕಷ್ಟದ ಬಳಿಕದ ಸುಖಕ್ಕೆ ಸಿದ್ಧರಾಗಬೇಕು ಎಂದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಸನ್ಮಾರ್ಗದಲ್ಲಿ ನಡೆದರೆ ಬದುಕಲು ಸಾಧ್ಯವಿಲ್ಲ ಎಂದು ಅನೇಕರು ನಂಬಿಕೆ ಕಳೆದುಕೊಂಡಿದ್ದಾರೆ. ಆದರೆ, ವನವಾಸದ ಬಳಿಕ ಪಟ್ಟಾಭಿಷೇಕವೂ ಇರುತ್ತದೆ. ಸುಖವೂ ಸಿಗುತ್ತದೆ ಎಂಬ ಸತ್ಯವನ್ನು ಸಹ ತಿಳಿದುಕೊಳ್ಳಬೇಕು ಎಂದು ರಾಮಕೃಷ್ಣಾಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ನಗರದ ರಾಘವ ಕಲಾಮಂದಿರದಲ್ಲಿ "ವಿವೇಕ ತೋರಣ " ಹಮ್ಮಿಕೊಂಡಿರುವ ಸ್ವಾಮಿ ವಿವೇಕಾನಂದ ಲೀಲಾಮೃತ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.

ಸತ್ಯನಿಷ್ಠರಿಗೆ, ಸನ್ಮಾರ್ಗಿಗಳಿಗೆ ಆರಂಭದಲ್ಲಿ ಕಷ್ಟಗಳು ಬರುವುದು ಸಹಜ. ನೂರಕ್ಕೆ ನೂರರಷ್ಟು ಧರ್ಮ ಪಾಲನೆಯಿಂದ ವನವಾಸ ತಪ್ಪಿದ್ದಲ್ಲ. ಧರ್ಮ ಪಾಲನೆಯಿಂದ ವನವಾಸ ಖಚಿತ ಎಂದಷ್ಟೇ ತಿಳಿಯಬಾರದು. ಜೀವನಪೂರ್ತಿ ವನವಾಸ ಆಗುವುದಿಲ್ಲ. ಕಷ್ಟಗಳು ಬರುವುದು ಕಡಿಮೆ ದಿನಗಳಷ್ಟೇ. ಶ್ರೀರಾಮನಿಗೆ ವನವಾಸದ ಬಳಿಕ ಪಟ್ಟಾಭಿಷೇಕವಾಯಿತು. ಸುಖವೂ ದಕ್ಕಿತು ಎಂಬುದನ್ನು ಸಹ ಅರ್ಥ ಮಾಡಿಕೊಳ್ಳಬೇಕು. ಕಷ್ಟದ ಬಳಿಕದ ಸುಖಕ್ಕೆ ಸಿದ್ಧರಾಗಬೇಕು ಎಂದರು.

ಮಕ್ಕಳ ಕಡೆ ಹೆಚ್ಚು ನಿಗಾ ವಹಿಸಿ:

ಮಕ್ಕಳ ಬೆಳವಣಿಗೆ ಮೇಲೆ ಪೋಷಕರು ಹೆಚ್ಚು ನಿಗಾ ವಹಿಸುವುದು ಬಹಳ ಅಗತ್ಯವಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ನೀಡಬೇಕು. ಧರ್ಮ ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡಬೇಕು. ಧರ್ಮನಿಷ್ಠರಾಗಿ ಬದುಕಿದ ಶ್ರೀರಾಮಚಂದ್ರ, ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ರಾಜಕೀಯ ವಲಯದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ, ಅಧಿಕಾರಿ ವಲಯದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಸೇರಿದಂತೆ ಅನೇಕ ಮಹನೀಯರ ಜೀವನ ಆದರ್ಶಗಳನ್ನು ಮಕ್ಕಳಿಗೆ ಹೇಳಿಕೊಡಬೇಕು.

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಸಿನಿಮಾ ನಟರು, ಕ್ರಿಕೆಟ್ ಆಟಗಾರರು ಹೀರೋ ಎಂದು ಭಾವಿಸುವುದು ಕಂಡುಬರುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರ ನೀಡಿದರೆ ಅವರ ವಿವೇಕಶಕ್ತಿ ಪ್ರಜ್ವಲಗೊಂಡು ಬದುಕಿನ ದಿಕ್ಕೇ ಬದಲಾಗುತ್ತದೆ ಎಂದರು.

ಆಸೆ ಇರಬೇಕು; ಹುರುಪು ಇರುವುದಿಲ್ಲ:

ಮನುಷ್ಯನಿಗೆ ಆಸೆ ಇರಬಾರದು ಎಂದಲ್ಲ. ಆಸೆ ಇರದೇ ಹೋದರೆ ಜೀವನದಲ್ಲಿ ಹುರುಪು ಇರುವುದಿಲ್ಲ. ಗೃಹಸ್ಥನಿಗೆ ಆಸೆ ಇರಬೇಕು. ಸಾಕಷ್ಟು ಹಣ ಸಂಪತ್ತೂ ಗಳಿಸಬೇಕು. ಆದರೆ, ಸಂಪತ್ತಿನ ಗಳಿಕೆ ಸನ್ಮಾರ್ಗದಲ್ಲಿರಬೇಕು. ಹೇಗೇಗೋ ದುಡ್ಡು ಮಾಡುವ ಆಸೆ ಇರಬಾರದು. ಎಷ್ಟೇ ಹಣ ಮಾಡು. ಅದೆಷ್ಟೇ ಶ್ರೀಮಂತನಾಗು, ತಪ್ಪಲ್ಲ; ಆದರೆ, ಮಾಡುವ ದುಡ್ಡು ಮತ್ತು ಸಂಪತ್ತು ನ್ಯಾಯ ಮಾರ್ಗದಲ್ಲಿರಬೇಕು. ಆಸೆ ಇರಬಾರದು. ಲೌಕಿಕ ಆಸೆಗಳು ದುಃಖಕ್ಕೆ ಮೂಲ ಎಂಬ ಮಾತು ಸನ್ಯಾಸಿಗಳಿಗೆ ಅನ್ವಯಿಸುತ್ತದೆಯೇ ವಿನಾ, ಗೃಹಸ್ಥನಿಗಲ್ಲ ಎಂದರಲ್ಲದೆ, ಪ್ರತಿ ಆಸೆಯನ್ನೂ ನ್ಯಾಯ ಮಾರ್ಗದಲ್ಲಿ ಈಡೇರಿಸಿಕೊಂಡಾಗ ಮಾತ್ರ ಜೀವ ಮಾಗಿ ಮೋಕ್ಷ ಕಾಣುತ್ತದೆ. ತೆಂಗಿನ ಗಿಡ ಬೆಳೆದಂತೆ ಎಲೆಗಳು ತಾನಾಗಿಯೇ ಬಿದ್ದು ಹೋಗುವಂತೆ ನಾವು ಬೆಳೆದಂತೆ ಕೆಳಮಟ್ಟದ ಆಸೆಗಳು ತಾವಾಗಿಯೇ ಬಿದ್ದು ಹೋಗುತ್ತವೆ.

ಸಂಸ್ಕಾರವಂತರಾದಂತೆ ತುಚ್ಛ ಆಸೆಗಳು ತಾವಾಗಿಯೇ ಉದುರಿ ಹೋಗುತ್ತವೆ. ಹೀಗಾಗಿಯೇ ಮನುಷ್ಯನನ್ನು ಬೆಳೆಸುತ್ತಾ ಹೋಗಬೇಕು ಎಂದರು. ಉಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿ ಹಾಗೂ ಸಮಾಜಸೇವಕ ಪೋಲಾ ರಾಧಾಕೃಷ್ಣ, ಲೆಕ್ಕ ಪರಿಶೋಧಕರಾದ ಪುರುಷೋತ್ತಮಗೌಡ ದಮ್ಮೂರು, ಹೊನ್ನೂರುಸ್ವಾಮಿ, ಎರ್ರಿಸ್ವಾಮಿ, ಡಾ. ಕೃಷ್ಣ, ವಿವೇಕ ತೋರಣ ಸಂಘಟನೆಯ ಅಧ್ಯಕ್ಷ ಜಿ.ಆರ್‌. ವಸ್ತ್ರದ, ಅಡವಿಸ್ವಾಮಿ ಇದ್ದರು. ಸಂಯೋಜಕ ಪ್ರಭುದೇವ ಕಪ್ಪಗಲ್ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಕ್ಯಾಲಿಗ್ರಫಿಗೆ ಲಭಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ
569 ಲೈಸೆನ್ಸ್‌ ಇ-ಹರಾಜಿಗೆ ಮುಂದಾದ ಅಬಕಾರಿ ಇಲಾಖೆ