ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರಸಭೆ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಯೋಜಿಸಿದ್ದ ‘ಪ್ಯಾರಾ ಲೀಗಲ್ ವಾಲಂಟಿಯರ್‌ಗಳಿಗೆ’ (ಪಿಎಲ್‌ವಿ) ಎರಡು ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ ಎಂಬ ತತ್ವದಂತೆ ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನು ಜ್ಞಾನ ತಲುಪಬೇಕು. ಜನಸಾಮಾನ್ಯರು ಮತ್ತು ನ್ಯಾಯಾಂಗ ವ್ಯವಸ್ಥೆಯ ನಡುವೆ ಪ್ಯಾರಾ ಲೀಗಲ್ ವಾಲಂಟಿಯರ್‌ಗಳು ಸೇತುವೆಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಪಿಎಲ್‌ವಿಗಳಿಗೆ ನೀಡಲಾಗುವ ಗುರುತಿನ ಚೀಟಿಯು ದರ್ಪ ಅಥವಾ ಅಧಿಕಾರ ತೋರಿಸುವುದಕ್ಕಲ್ಲ, ಬದಲಾಗಿ ಹೆಮ್ಮೆಯಿಂದ ಸಮಾಜಸೇವೆ ಮಾಡಲು ನೀಡಿದ ಅವಕಾಶ ಎಂದರು.ಕಳೆದ ಬಾರಿ ತರಬೇತಿಯನ್ನು ಕೇವಲ ಡಿಎಲ್‌ಎಸ್‌ಎಗೆ ಸೀಮಿತಗೊಳಿಸಲಾಗಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಒಳಗೊಂಡಂತೆ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಇದರಿಂದ ಇಲಾಖೆಗಳಿಗೂ ಪಿಎಲ್‌ವಿಗಳ ಅಸ್ತಿತ್ವ ಮತ್ತು ಕಾರ್ಯವೈಖರಿ ತಿಳಿಯಲಿದೆ. ಪಿಎಲ್‌ವಿಗಳು ಈ ಹಿಂದೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳು, ಎದುರಿಸಿದ ಸವಾಲುಗಳ ಬಗ್ಗೆ ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಮುಕ್ತ ಚರ್ಚೆ ನಡೆಯಲಿದೆ ಎಂದು ಹೇಳಿದರು.ಸಮಾಜದಲ್ಲಿ ಜ್ವಲಂತ ಸಮಸ್ಯೆಯಾಗಿರುವ ಬಾಲ್ಯವಿವಾಹ ತಡೆಯುವುದು, ಮತದಾರರ ಪಟ್ಟಿ ಹಾಗೂ ‘ಎಸ್‌ಐಆರ್’ ಹಂತದಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ನೆರವಾಗುವುದು, ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆ ಮತ್ತು ನಾಗರಿಕರ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಾಲಂಟಿಯರ್‌ಗಳು ಸಕ್ರಿಯವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್ ಮಾತನಾಡಿ, ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವುದು ಸುಲಭವೆನಿಸಿದರೂ, ಸಮಾಜದ ನಿರೀಕ್ಷೆ ಮತ್ತು ಜನರ ಒತ್ತಡಗಳ ನಡುವೆ ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆ ಸವಾಲಿನಿಂದ ಕೂಡಿದೆ. ಇಂತಹ ಸಂದರ್ಭ ನೊಂದವರಿಗೆ ಸೂಕ್ತ ಕಾನೂನು ಅರಿವು ಮೂಡಿಸಿ ನ್ಯಾಯ ದೊರಕಿಸಿಕೊಡಲು ಪ್ಯಾರಾ ಲೀಗಲ್ ವಾಲಂಟಿಯರ್‌ಗಳ ಪಾತ್ರ ಅತ್ಯಂತ ಪ್ರಮುಖ ಎಂದು ತಿಳಿಸಿದರು.ಠಾಣೆಗೆ ಬರುವ ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡರು ಕೋರ್ಟ್‌ಗೆ ಅಲೆಯಲು ಇಷ್ಟಪಡುವುದಿಲ್ಲ. ಪೊಲೀಸ್ ಠಾಣೆಯಲ್ಲೇ ಸಂಧಾನ ಮಾಡಿ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸುತ್ತಾರೆ. ವಿಶೇಷವಾಗಿ ಮಹಿಳಾ ಪೊಲೀಸ್ ಠಾಣೆಗೆ ಬರುವ ಗಂಡ-ಹೆಂಡತಿಯರ ಕೌಟುಂಬಿಕ ಕಲಹದ ಶೇ.99 ರಷ್ಟು ಪ್ರಕರಣಗಳಲ್ಲಿ ಯಾರಿಗೂ ದೂರು ದಾಖಲಿಸಿ ಜೈಲಿಗೆ ಕಳುಹಿಸುವುದು ಬೇಕಾಗಿಲ್ಲ. ಬದಲಿಗೆ ಹಿರಿಯರ ಉಪಸ್ಥಿತಿಯಲ್ಲಿ ಕೌನ್ಸೆಲಿಂಗ್ ನಡೆಸಿ ಬುದ್ಧಿವಾದ ಹೇಳಿ ರಾಜಿ ಮಾಡಿಸುವುದನ್ನೇ ಬಯಸುತ್ತಾರೆ ಎಂದರು.