ನಂದಗಡ ಕೆರೆಗೆ ಕೊಳಚೆ ನೀರು ಸೇರದಿರಲಿ

KannadaprabhaNewsNetwork |  
Published : Jun 07, 2025, 12:15 AM IST
ಜಿಪಂ ಸಿಇಒ ರಾಹುಲ ಶಿಂಧೆ ಅಧ್ಯಕ್ಷತೆಯಲ್ಲಿ ನಂದಗಡ ಕುಂಬಾರ ಕೆರೆಯ ಅಭಿವೃದ್ಧಿ ಸಂಬಂಧ ಸಭೆ ನಡೆಯಿತು | Kannada Prabha

ಸಾರಾಂಶ

ಚರಂಡಿ ನೀರು ಅಥವಾ ಬೂದು ನೀರು ಕೆರೆಗೆ ಸೇರದಂತೆ ವ್ಯವಸ್ಥೆ ಮಾಡಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ಐತಿಹಾಸಿಕ ಹಿನ್ನೆಲೆ ಹೊಂದಿರುವ ಕುಂಬಾರ ಕೆರೆಯ ಅಭಿವೃದ್ಧಿಯನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲಾಗುತ್ತದೆ. ಜಿಪಂ ಹಾಗೂ ಗ್ರಾಪಂ ವತಿಯಿಂದ ಕೆರೆಯ ಸುತ್ತಲಿನ ಚರಂಡಿ ಹಾಗೂ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವ ನಿಟ್ಟಿನಲ್ಲಿ ದ್ರವ ತ್ಯಾಜ್ಯ ನಿರ್ವಹಣಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಿ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚಿಸಿದರು.

ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಸಮಾಧಿ ಸ್ಥಳದ ಸಮೀಪದಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕುಂಬಾರ ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ 15ನೇ ಹಣಕಾಸು, ಸ್ವ-ಸಂಪನ್ಮೂಲ ಹಾಗೂ ಇನ್ನಿತರ ಯೋಜನೆಗಳಡಿ ಅನುದಾನ ಬಳಸಿಕೊಂಡು ಕಾಮಗಾರಿ ಕೈಗೊಳ್ಳಿ. ಚರಂಡಿ ನೀರು ಅಥವಾ ಬೂದು ನೀರು ಕೆರೆಗೆ ಸೇರದಂತೆ ವ್ಯವಸ್ಥೆ ಮಾಡಿ ಎಂದು ನಿರ್ದೇಶನ ನೀಡಿದರು.

ಕೆರೆಯ ಐತಿಹಾಸಿಕ ಹಿನ್ನೆಲೆ, ಕೆರೆಯಲ್ಲಿ ಪ್ರಸ್ತುತ ಕೈಗೊಳ್ಳಲಾಗಿರುವ ಕಾಮಗಾರಿ ಹಾಗೂ ಮತ್ತೆ ಏನೇನು ಕಾಮಗಾರಿ ಕೈಗೊಳ್ಳಬಹುದು ಎಂಬುದರ ಮಾಹಿತಿಯನ್ನು ಸಹಾಯಕ ನಿರ್ದೇಶಕ (ಪಂ ರಾಜ್) ಗಣೇಶ ಕೆ.ಎಸ್. ಮತ್ತು ಪ್ರೊಜೆಕ್ಟ್ ಅಸೋಸಿಯೇಟ್ ಓಂಕಾರ ಕೋರಿ ಸಭೆಯಲ್ಲಿ ಪ್ರಸ್ತುತಪಡಿಸಿದರು. ಜೊತೆಗೆ ಜಿಪಂ, ತಾಪಂ ಅಧಿಕಾರಿಗಳು ಹಾಗೂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ವಿವಿಧ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.

ಕೆರೆಯ ಪೋಟೋಗ್ರಾಫಿ ಸರ್ವೇ ಕೈಗೊಂಡು ಮತ್ತೊಮ್ಮೆ ವರದಿ ಸಲ್ಲಿಸಿ. ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಪ್ರಾರಂಭಿಸಿ ಎಂದು ಜಿಪಂ ಸಿಇಒ ಶಿಂಧೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ವೇಳೆ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ನಿರೂಪಿಸಿದರು. ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಕಾರ್ಯನಿರ್ವಾಹಕ ಅಭಿಯಂತರ (ಪಂಚಾಯತರಾಜ್ ಎಂಜಿನಿಯರಿಂಗ್) ಸುಂದರ ಕೋಳಿ, ಖಾನಾಪೂರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಜಾಧವ, ನರೇಗಾ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಾಗರಕುಮಾರ ಬಿರಾದಾರ, ಸಹಾಯಕ ಅಭಿಯಂತರ ಸುಬ್ರಮಣ್ಯ ಪಾಟೀಲ, ತಾಂತ್ರಿಕ ಸಂಯೋಜಕ ವಿಶ್ವನಾಥ ಹಟ್ಟಿಹೊಳಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ