- ರೈತರೇ ಡ್ಯಾಂ ಗೇಟ್ ಬಂದ್ ಮಾಡಬೇಕಾದೀತು ಎಂದು ಎಚ್.ಆರ್. ಲಿಂಗರಾಜ ಹೇಳಿಕೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಸೋಮವಾರ ಭಾರತೀಯ ರೈತ ಒಕ್ಕೂಟದ ಮುಖಂಡರ ತಂಡ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪದ ಭದ್ರಾ ಡ್ಯಾಂಗೆ ಭೇಟಿ ನೀಡಿತ್ತು. ಈ ವೇಳೆ ಅಣೆಕಟ್ಟೆ ಭರ್ತಿಯಾಗಲು ಇನ್ನೂ 6 ಅಡಿ ನೀರಿನ ಅಗತ್ಯವಿರುವ ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಭದ್ರಾ ಕಾಡಾ ಅಧ್ಯಕ್ಷರು, ಕರ್ನಾಟಕ ನೀರಾವರಿ ನಿಗಮ, ನೀರಾವರಿ ಇಲಾಖೆ ಅಧಿಕಾರಿಗಳು, ಶಿವಮೊಗ್ಗ ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ತಕ್ಷಣವೇ ನದಿಗೆ ನೀರು ಹರಿಸುವುದನ್ನು ತಡೆಯಲು ಮನವಿ ಮಾಡಿದರು.
ಸದ್ಯಕ್ಕೆ ತುಂಗಾ ಮತ್ತು ಭದ್ರಾ ಅಣೆಕಟ್ಟೆಗಳ ಜಲಾನಯನ ಪ್ರದೇಶ, ಘಟ್ಟ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಭದ್ರಾ ಅಣೆಕಟ್ಟೆಯಲ್ಲಿ ಇನ್ನೂ 7 ಟಿಎಂಸಿ ನೀರು ಸಂಗ್ರಹ ಆಗಬೇಕಾಗಿದೆ. ಮಳೆ ಇಲ್ಲದೇ ಡ್ಯಾಂಗೆ ಒಳಹರಿವು ಕಡಿಮೆ ಇದ್ದು, ಅಷ್ಟೇ ನೀರನ್ನು ನದಿಗೆ ಬಿಡುತ್ತಿರುವುದು ಸರಿಯಲ್ಲ. ಸದ್ಯಕ್ಕೆ ಮಳೆ ಸಂಪೂರ್ಣ ನಿಂತಿದ್ದು, ಅಣೆಕಟ್ಟೆ ತುಂಬಲು ಇನ್ನೂ 6 ಅಡಿ ನೀರು ಬರಬೇಕಾಗಿದೆ. ಹೀಗೆಯೇ ಒಳಹರಿವಿನಷ್ಟೇ ನೀರು ನದಿಗೆ ಬಿಟ್ಟರೆ ಅಚ್ಚುಕಟ್ಟು ರೈತರು ಸುಮಾರು ಒಂದೂವರೆ ತಿಂಗಳಷ್ಟು ನೀರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಶಿವಮೊಗ್ಗ ಜಿಲ್ಲಾಧಿಕಾರಿ ಅವರು ನೆರೆ ಉಂಟಾಗುತ್ತದೆ ಎಂಬುದಾಗಿ ಡ್ಯಾಂನಿಂದ ನದಿಗೆ ನೀರು ಹರಿಸಲು ಸೂಚಿಸಿದ್ದಾರೆ ಎಂಬುದಾಗಿ ನೀರಾವರಿ ಅಧಿಕಾರಿಗಳು ಹೇಳುತ್ತಿದ್ದಾರೆ. ಸ್ವತಃ ಡ್ಯಾಂಗೆ ಭೇಟಿ ನೀಡಿದ್ದ ವೇಳೆ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರು, ಮುಖ್ಯ ಅಭಿಯಂತರರಿಗೂ ಕರೆ ಮಾಡಿ, ನದಿಗೆ ನೀರು ಬಿಡದಂತೆ ಮನವಿ ಮಾಡಿದ್ದೇವೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ತಕ್ಷಣವೇ ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಅಲ್ಲಿನ ಜಿಲ್ಲಾಧಿಕಾರಿಗೆ ಹೇಳಿ, ನದಿಗೆ ನೀರು ಹರಿಸದಂತೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.
ಒಂದುವೇಳೆ ಮಳೆ ಇಲ್ಲಿಗೆ ನಿಂತರೆ ಭದ್ರಾ ಡ್ಯಾಂನಲ್ಲಿ ಇರಬೇಕಾಗಿದ್ದ ಸುಮಾರು 6 ಟಿಎಂಸಿ ನೀರು ಖೋತಾ ಆಗಲಿದೆ. ಅತಿವೃಷ್ಟಿ ವೇಳೆ ತುಂಬಿರುತ್ತಿದ್ದ ಭದ್ರಾ ಡ್ಯಾಂ ಆರು ಟಿಎಂಸಿ ನೀರು ತುಂಬಿದ್ದು ಸಹ ವ್ಯರ್ತವಾಗಲಿದೆ. ಈ ಹಿಂದೆ ಮಳೆ ತೀವ್ರವಾಗಿ ಸುರಿಯುತ್ತಿದ್ದ ವೇಳೆ 145 ಅಡಿ ತಲುಪಿದ್ದಾಗ, ರನ್ ದಿ ರಿವರ್ ಇದ್ದಾಗಲೇ ನದಿಗೆ ನೀರು ಬಿಡುವಂತೆ ಒತ್ತಡ ಹೇರಿದ್ದೆವು. ಆದರೆ, ಅದ್ಯಾವುದಕ್ಕೂ ಕಿವಿಗೊಡದ ಅಧಿಕಾರಿಗಳು ಮಳೆ ಬರುವಾಗ ಅನುಭವದ ಮಾತುಗಳನ್ನು ಹೇಳಿದರೂ ಸ್ಪಂದಿಸಲಿಲ್ಲ. ರನ್ ದಿ ರಿವರ್‌ನಲ್ಲಿ ನೀರು ಬಳಸಿದ್ದರೆ ಮಳೆಗಾಲದ ಬೆಳೆಗೂ ಈಗ ಬಿಡುತ್ತಿರುವ ನೀರನ್ನು ಬಳಸಬಹುದಿತ್ತು ಎಂದು ತಿಳಿಸಿದರು.
ತಂಡದಲ್ಲಿ ಭಾರತೀಯ ರೈತ ಒಕ್ಕೂಟದ ಮುಖಂಡರಾದ ಮಂಜುನಾಥ, ಎಂ.ಎಚ್. ಬಸವರಾಜ, ಗ್ಯಾರಹಳ್ಳಿ ಗಣೇಶ, ಬೂದಿಹಾಳ ಬಸವರಾಜ, ರವಿ ಕುಕ್ಕವಾಡ ಇತರರು ಭದ್ರಾ ಅಣೆಕಟ್ಟೆಗೆ ಭೇಟಿ ನೀಡಿದ್ದರು.
- ಶಾಬನೂರು ಎಚ್.ಆರ್.ಲಿಂಗರಾಜ,
ಶಿವಮೊಗ್ಗ ಜಿಲ್ಲೆಯ ಭದ್ರಾ ಅಣೆಕಟ್ಟೆಗೆ ದಾವಣಗೆರೆ ಜಿಲ್ಲೆಯ ರೈತ ಮುಖಂಡರಾದ ಭಾರತೀಯ ರೈತ ಒಕ್ಕೂಟ ಅಧ್ಯಕ್ಷ ಶಾಬನೂರು ಎಚ್.ಆರ್. ಲಿಂಗರಾಜ ಇತರರು ಭೇಟಿ ನೀಡಿ, ವೀಕ್ಷಿಸಿದರು.