ಕನ್ನಡಪ್ರಭ ವಾರ್ತೆ, ಬೆಂಗಳೂರು
ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋವಿಡ್ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ವಿಶೇಷವಾಗಿ ಮಕ್ಕಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಹೀಗಾಗಿ ಪೋಷಕರು ಜ್ವರ, ಶೀತ ಇರುವವರನ್ನು ಶಾಲೆಗೆ ಕಳುಹಿಸದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಅಂತಹ ಮಕ್ಕಳಿಗೆ ಶಾಲಾ ಆಡಳಿತ ಮಂಡಳಿಗಳು ರಜೆ ನೀಡುವಂತೆ ಅಧಿಕೃತವಾಗಿ ನಿರ್ದೇಶನ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.ರಾಜ್ಯಾದ್ಯಂತ ಪರೀಕ್ಷಾ ಕಿಟ್ ವಿತರಣೆ:
ಮುನ್ನೆಚ್ಚರಿಕೆ ದೃಷ್ಟಿಯಿಂದ ರೆಮ್ಡಿಸೀವರ್ ಇಂಜೆಕ್ಷನ್ ಅನ್ನು ಖರೀದಿಸಲು ಸೂಚನೆ ನೀಡಲಾಗಿದೆ. ಇದು ಕೋವಿಡ್ ಒಮೆಕ್ರಾನ್ ಜೆ.ಎನ್ 1 ತಳಿಯಾಗಿದ್ದು, ಸೌಮ್ಯ ಸ್ವಭಾವದ ಲಕ್ಷಣಗಳನ್ನು ಹೊಂದಿದೆ. ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡರೂ ಸಹ ಗಂಭೀರವಾಗಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವೆಂಟಿಲೇಟರ್ ಸೇರಿದಂತೆ ಎಲ್ಲ ಸಿದ್ಧತೆ:ಆತಂಕ ಪಡುವ ಪರಿಸ್ಥಿತಿ ಬಂದಿಲ್ಲವಾದರೂ ವೆಂಟಿಲೇಟರ್, ಆಕ್ಸಿಜನ್, ಔಷಧ ಸೇರಿ ಇತ್ಯಾದಿ ಅಗತ್ಯಗಳನ್ನು ಸಿದ್ದಪಡಿಸಿಟ್ಟುಕೊಳ್ಳಲು ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಜತೆಗೆ ಪೂರ್ವ ತಯಾರಿಗಾಗಿ ಕೋವಿಡ್ ವಾರ್ಡ್ ಸಿದ್ಧತೆ ಮಾಡುತ್ತಿದ್ದೇವೆ. ಪ್ರಕರಣಗಳು ಹೆಚ್ಚಾದರೆ ಮಾತ್ರ ಕೋವಿಡ್ ವಾರ್ಡ್ ಕಾರ್ಯನಿರ್ವಹಣೆ ಮಾಡಲಿದೆ. ಭಾನುವಾರದವರೆಗೆ ವರದಿಯಾಗಿರುವ ಪ್ರಕರಣಗಳಲ್ಲಿ ಒಬ್ಬರು ಬಿಟ್ಟು ಉಳಿದೆಲ್ಲರೂ ಮನೆಯಲ್ಲೇ ಇದ್ದಾರೆ. ಹೀಗಾಗಿ ಆತಂಕ ಬೇಡ ಎಂದರು.