ನವಲಗುಂದ: ಪಟ್ಟಣಕ್ಕೆ ಇಂದಿರಾ ಕಾಂಟೀನ್ ಭಾಗ್ಯ ಒಲಿದು ಬಂದಿದ್ದು, ಆದರೆ, ಜಾಗದ ಸಮಸ್ಯೆ ಎದುರಾಗಿದೆ. ಸಿಎಂ ಪಟ್ಟಣಕ್ಕೆ ಭೇಟಿ ನೀಡುತ್ತಿದ್ದು, ಈ ವೇಳೆ ಕಾಂಟೀನ್ ಕಾಮಗಾರಿಗೆ ಚಾಲನೆ ನೀಡಲು ಉದ್ದೇಶಿಸಿದ್ದು, ತಾಲೂಕು ಆಸ್ಪತ್ರೆ ಆವರಣ ಆಯ್ಕೆ ಮಾಡಲಾಗಿದೆ. ಆದರೆ, ಇಲ್ಲಿ ಕ್ಯಾಂಟೀನ್ ಸ್ಥಾಪನೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಈ ಮೊದಲು ಇಂದಿರಾ ಕ್ಯಾಂಟೀನ್ ನಿರ್ಮಿಸಲು ಪುರಸಭೆಯಿಂದ ₹1.50 ಲಕ್ಷಕ್ಕಿಂತಲೂ ಹೆಚ್ಚು ಹಣ ವೆಚ್ಚ ಮಾಡಲಾಗಿತ್ತು. ಆದರೆ, ಆಗ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಹೀಗಾಗಿ, ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ದಿದ್ದು, ನೂತನ ಕ್ಯಾಂಟೀನ್ ಆರಂಭಿಸಲಾಗುತ್ತಿದೆ. ಇದಕ್ಕಾಗಿ ಸರಕಾರಿ ತಾಲೂಕು ಆಸ್ಪತ್ರೆ ಆವರಣವನ್ನು ಪುರಸಭೆ ಮುಖ್ಯ ಅಧಿಕಾರಿಗಳು ಆಯ್ಕೆ ಮಾಡಿದ್ದಾರೆ. ಸ್ಥಳ ಪರಿಶೀಲನೆ ಸಹ ಮಾಡಲಾಗಿದೆ. ಆದರೆ, ತಾಲೂಕು ಆಸ್ಪತ್ರೆ ಆವರಣ ಚಿಕ್ಕದಾಗಿದ್ದು, ಚಿಕಿತ್ಸೆಗೆ ಬರುವ ರೋಗಿಗಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲ. ಇಲ್ಲೇ ಕ್ಯಾಂಟೀನ್ ಆರಂಭಿಸಿದರೆ ಮತ್ತಷ್ಟು ಸಮಸ್ಯೆ ಉಲ್ಭಣವಾಗುತ್ತದೆ. ಹೀಗಾಗಿ, ಬೇರೆಡೆ ಕ್ಯಾಂಟೀನ್‌ಗೆ ಜಾಗ ಆಯ್ಕೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯ.ನೀಲಮ್ಮನ ಕೆರೆಯ ಪಕ್ಕದಲ್ಲಿ ವಿಶಾಲ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದರೆ ಸುತ್ತಮುತ್ತಲಿನಲ್ಲಿರುವ ಕೂಲಿ ಕಾರ್ಮಿಕರಿಗೆ ಹಾಗೂ ಬೇರೆ ಬೇರೆ ಗ್ರಾಮಗಳಿದ ಬರುವ ಪ್ರಯಾಣಿಕರಿಗೆ, ರೋಗಿಗಳಿಗೆ, ಬಡವರಿಗೆ ಅನುಕೂಲವಾಗುತ್ತದೆ. ಒಂದು ವೇಳೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾದರೆ ಹೋರಾಟಕ್ಕೆ ಮುಂದಾಗುವುದಾಗಿ ಯುವ ರೈತ ಹೋರಾಟಗಾರ ಮೈಲಾರಪ್ಪ ವೈದ್ಯ ಎಚ್ಚರಿಸಿದ್ದಾರೆ.
ಈಗಾಗಲೇ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಶಾಸಕರಿಂದ ಒಪ್ಪಿಗೆ ಪಡೆದು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಳ ನಿಗದಿ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರು ಹೇಳಿದರು.ನಮ್ಮ ಆಸ್ಪತ್ರೆಯಲ್ಲಿ ವಾಹನಗಳು ನಿಲ್ಲಲು ಜಾಗವಿಲ್ಲ. ಇನ್ನು ಆಸ್ಪತ್ರೆಯಲ್ಲಿ ಕಾರ್ಯಕ್ರಮಗಳನ್ನು ಮಾಡಲು ಕೂಡ ನಮಗೆ ಸರಿಯಾದಂತಹ ಸ್ಥಳವಿಲ್ಲ. ಇದರ ಬಗ್ಗೆ ಶಾಸಕರ ಮತ್ತು ಪುರಸಭೆ ಮುಖ್ಯಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದುತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ರೂಪ ಕಿಣಿಗಿ ತಿಳಿಸಿದ್ದಾರೆ.