- ಪಾಲಿಕೆ, ಜಿಲ್ಲಾಡಳಿತ, ಜಿಪಂ ವಿರುದ್ಧ ರೈತ ಸಂಘ-ಹಸಿರು ಸೇನೆ ಪ್ರತಿಭಟನೆ । ಯುರೋಪಿಯನ್ ಮಾದರಿ ವರಾಹ ಶಾಲೆಗೆ ಸಲಹೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರತಿಭಟನೆ ನೇತೃತ್ವ ವಹಿಸದ್ದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ತಾಲೂಕಿನ ಹೊಸಳ್ಳಿ ಗ್ರಾಮದ ಬಳಿ ವರಾಹ ಶಾಲೆ ಹಾಗೂ ತ್ಯಾಜ್ಯ ವಿಲೇವಾರಿ ಘಟಕವನ್ನು ಯಾವುದೇ ಕಾರಣಕ್ಕೂ ಸ್ಥಾಪಿಸಬಾರದು. ಜಿಲ್ಲಾಡಳಿತ, ಪಾಲಿಕೆ, ಜಿಲ್ಲಾ ಪಂಚಾಯಿತಿಯಿಂದ ಹೀಗೊಂದು ಅವೈಜ್ಞಾನಿಕ, ಜನವಿರೋಧಿ ಕಾರ್ಯಕ್ಕೆ ಮುಂದಾಗಿರುವುದು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಹೈಟೆಕ್ ವರಾಹ ಶಾಲೆ ಸ್ಥಾಪಿಸಿ:ಜಿಲ್ಲಾ ಕೇಂದ್ರದಿಂದ 23 ಕಿಮೀ ದೂರದ ಹೊಸಳ್ಳಿ ಬಳಿ ತಾವು ಹೋಗುವುದಿಲ್ಲವೆಂದು ಹಂದಿ ಸಾಕಾಣಿಕೆದಾರರೂ ಹೇಳಿದ್ದಾರೆ. ಆದರೂ, ಪಾಲಿಕೆ ಮೊಂಡಾಟ ಮಾಡುತ್ತಿರುವುದು ಏಕೆ? ಹೊಸಳ್ಳಿ ಗ್ರಾಮಸ್ಥರು ಸಹ ವರಾಹ ಶಾಲೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಕಂದಾಯ ಇಲಾಖೆ ನಿಯಮದ ಪ್ರಕಾರ ಪಾಲಿಕೆ ವ್ಯಾಪ್ತಿಯ 12 ಕಿಮೀ ಅಂತರದಲ್ಲೇ ವರಾಹ ಶಾಲೆ ಸ್ಥಾಪಿಸಲು ಮಾತ್ರ ಕಾನೂನಿನಲ್ಲಿ ಅವಕಾಶ ಇದೆ. ದಾವಣಗೆರೆ ಪಾಲಿಕೆ 13 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿದ್ದರೆ ಹಕ್ಕುಪತ್ರ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗೆ ಸರ್ಕಾರಿ ಜಮೀನಿದ್ದರೂ ಯುರೋಪಿಯನ್ ರಾಷ್ಟ್ರಗಳ ಮಾದರಿಯಲ್ಲಿ ಹೈಟೆಕ್ ವರಾಹ ಶಾಲೆ ಅಲ್ಲಿಯೇ ಸ್ಥಾಪಿಸಲು ನಮ್ಮ ಅಡ್ಡಿಯೇನೂ ಇಲ್ಲ ಎಂದು ಹೇಳಿದರು.
ಹಂದಿಗಳಿಂದ 18 ರೀತಿಯ ಕಾಯಿಲೆಗಳು ಹರಡುತ್ತವೆಂದು ವೈದ್ಯಕೀಯ ವರದಿಗಳು ಹೇಳುತ್ತವೆ. ಈ ಹಿನ್ನೆಲೆ ಹೊಸಳ್ಳಿ ಸುತ್ತಮುತ್ತ ವರಾಹ ಶಾಲೆ ಸ್ಥಾಪಿಸುವುದಕ್ಕೆ ಅವಕಾಶ ನೀಡುವುದಿಲ್ಲ. ಅಷ್ಟೇ ಅಲ್ಲದೇ, ಪಾಲಿಕೆಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದಕ್ಕೂ ಅವಕಾಶ ನೀಡುವುದಿಲ್ಲ. ಜಿಲ್ಲಾ ಕೇಂದ್ರದಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ಅಲ್ಲಿಯೇ ವಿಲೇವಾರಿ ಘಟಕ ಮಾಡಿ, ವೈಜ್ಞಾನಿಕವಾಗಿ ನಿರ್ವಹಣೆ ಮಾಡಲಿ. ಅದನ್ನು ಬಿಟ್ಟು ಹಳ್ಳಿ ಜನರ ನೆಮ್ಮದಿಗೆ ಭಂಗ ತಂದು, ಆರೋಗ್ಯಕ್ಕೆ ಕುತ್ತು ತರಲು ಸಂಘಟನೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ದಾವಣಗೆರೆ ಮಹಾನಗರದ ತ್ಯಾಜ್ಯವನ್ನು ತಂದು ಹೊಸಳ್ಳಿಯ ಬಳಿ ಸುರಿದು ಮತ್ತೊಂದು ಆವರಗೊಳ್ಳ ತ್ಯಾಜ್ಯ ಘಟಕ ಮಾಡಲು ಹೊರಟಿರುವುದಕ್ಕೆ ಅವಕಾಶ ನೀಡುವುದಿಲ್ಲ. ತಕ್ಷಣವೇ ಜಿಲ್ಲಾಧಿಕಾರಿ ಅವರು ತಾಲೂಕಿನ ಹೊಸಳ್ಳಿ ಬಳಿ ವರಾಹ ಶಾಲೆ ಹಾಗೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿರುವ ಪಾಲಿಕೆ ಪ್ರಯತ್ನ ತಡೆಯಬೇಕು. ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸುವ ಜೊತೆಗೆ ಕಾನೂನು ಹೋರಾಟವನ್ನೂ ನಡೆಸುವುದಾಗಿ ಎಚ್ಚರಿಸಿದರು.
- - - -1ಕೆಡಿವಿಜಿ8, 9: