ಹಾವೇರಿ: ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸುವವರೆಗೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಾರದು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಅಲ್ಲದೆ ಕಾರ್ಖಾನೆ ಆರಂಭಕ್ಕೆ ಪೂಜೆ ನೆರವೇರಿಸುವುದನ್ನು ವಿರೋಧಿಸಿ, ಪೂಜೆಗೆ ತಂದಿದ್ದ ಕಬ್ಬನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಟನ್ ಕಬ್ಬಿಗೆ 5,500 ರು. ದರ ನಿಗದಿಪಡಿಸಬೇಕು. ದರ ನಿಗದಿಯಾಗುವವರೆಗೆ ಯಾವುದೇ ಸಕ್ಕರೆ ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲ. ರೈತರ ಒಪ್ಪಿಗೆ ಮತ್ತು ನ್ಯಾಯಯುತ ದರದ ಕುರಿತು ನಿರ್ಧಾರ ಕೈಗೊಂಡ ಬಳಿಕವೇ ಕಬ್ಬು ನುರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಸಂಗೂರು ಸಕ್ಕರೆ ಕಾರ್ಖಾನೆ ಮಾತ್ರವಲ್ಲದೆ ಬೈರನಪಾದದಲ್ಲಿರುವ ಜಿಎಂ-2 ಸಕ್ಕರೆ ಕಾರ್ಖಾನೆಯಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಬೇಡಿಕೆಗಳನ್ನು ಕಡೆಗಣಿಸಿ ಕಾರ್ಖಾನೆ ಆರಂಭಿಸಲು ಮುಂದಾದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ದೂರವಾಣಿ ಮೂಲಕ ಮಧ್ಯಸ್ಥಿಕೆ ವಹಿಸಿ, ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಮಾತನಾಡಿದರು. ರೈತರೊಂದಿಗೆ ಚರ್ಚಿಸುವವರೆಗೆ ಕಾರ್ಖಾನೆ ಆರಂಭಿಸುವುದಿಲ್ಲ ಎಂದು ಕಾರ್ಖಾನೆ ಆಡಳಿತ ಮಂಡಳಿ ತಿಳಿಸಿದ ಬಳಿಕ ರೈತರು ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದರು.