ಕನ್ನಡಪ್ರಭ ವಾರ್ತೆ ಚಿತ್ತಾಪುರ
ವಡ್ಡರ ಸಮಾಜವು ತಮ್ಮ ಜಾತಿ ಪದವನ್ನು ಮರೆಮಾಚಿ ಭೋವಿ ಪದದ ಶೀರ್ಷಿಕೆಯಿಂದ ಕಾರ್ಯಕ್ರಮ ಹಮ್ಮಿಕೊಂಡು ತಾವೇ ಮೂಲ ಭೋವಿಗಳೆಂದು ಬಿಂಬಿಸಲು ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡು ವಡ್ಡರ ಸಮಾಜದ ಮುಖಂಡರು ಭೋವಿ ಪದ ದುರ್ಬಳಕೆ ಮಾಡಿ ನಮ್ಮ ಸಮಾಜದ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಎಂದು ಕರ್ನಾಟಕ ಭೋವಿ ಸಮಾಜ ವಿಕಾಸ ಸಂಘದ ತಾಲೂಕು ಅಧ್ಯಕ್ಷ ಸುರೇಶ ಅಳ್ಳೊಳ್ಳಿ ಆರೊಪಿಸಿದರು.ಒಂದು ಜಾತಿಯು ಮತ್ತೊಂದು ಪದವನ್ನು ಬಳಸುವಂತಿಲ್ಲ. ತಂತ್ರಾಂಶದ ಮೂಲಕ ನೀಡಲ್ಪಡುವ ಜಾತಿ ಪ್ರಮಾಣ ಪತ್ರದಲ್ಲಿ ಭೋವಿ ಮತ್ತು ವಡ್ಡರ ಜಾತಿ ಪದಗಳನ್ನು ನಿಯಮಾನುಸಾರ ಬೇರೆ ಬೇರೆಯಾಗಿ ನಮೂದಿಸಲ್ಪಡುತ್ತದೆ. ಎಲ್ಲೂ ಭೋವಿವಡ್ಡರ ಎಂದು ಒಟ್ಟಿಗೆ ಸೇರಿದ ಪದ ಬಳಸಿದ ಪುರಾವೆಗಳಿಲ್ಲ. ಈ ಎಲ್ಲಾ ಸ್ಪಷ್ಟ ನಿಯಮಗಳಿದ್ದರೂ ಸಹ ವಡ್ಡರ ಸಮುದಾಯದವರು ತಮ್ಮ ಸಭೆ ಸಮಾರಂಭಗಳಲ್ಲಿ ಕರಪತ್ರ, ಭಿತ್ತಿ ಪತ್ರ, ಪ್ಲೆಕ್ಸ್, ಕಟೌಟ್ ಹಾಗೂ ನಾಮಫಲಕಗಳಲ್ಲಿ ಪತ್ಯೇಕ ವಡ್ಡರ ಸಮುದಾಯವೆಂಬ ತಮ್ಮ ಬಳಕೆ ಮಾಡದೇ ಸ್ವಾರ್ಥ ಉದ್ದೇಶಪೂರ್ವಕವಾಗಿ ಭೋವಿ ಎಂಬ ನಮ್ಮ ಸಮುದಾಯದ ಪದವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದರು.
ವಡ್ಡರ ಸಮುದಾಯವು ತಮಗೆ ಮೀಸಲಾಗಿರುವ ಸರ್ಕಾರದ ಸೌಲಭ್ಯಗಳು ಪಡೆಯುವಲ್ಲಿ ನಮ್ಮ ಸಮುದಾಯದಿಂದ ಯಾವುದೇ ಅಭ್ಯಂತರವಿರುವುದಿಲ್ಲ. ಆದರೆ ಹಿಂದಿನಿಂದ ವಡ್ಡರ ಸಮುದಾಯದವರು ಎನಿಸಿಕೊಂಡ ಇವರು ನಮ್ಮ ಭೋವಿ ಜಾತಿ ಪದ ದುರ್ಬಳಕೆ ಮಾಡಿಕೊಂಡು ನಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವದನ್ನು ನಾವು ರಾಜ್ಯಾದ್ಯಂತ ತೀವ್ರವಾಗಿ ಖಂಡಿಸುತ್ತೇವೆ ಎನ್ನುವ ಮನವಿ ಪತ್ರವನ್ನು ತಹಸೀಲ್ದಾರವರಿಗೆ ಸಲ್ಲಿಸಿ ಒತ್ತಾಯಿಸಿದರು.ಮುಖಂಡರಾದ ಶಂಬಣ್ಣಾ ಎದರಮನಿ, ಸಿದ್ರಾಮ ಅಲಮೇಲಕರ್, ಶಂಬು ತಾಂಡೂರಕರ್, ಲಕ್ಷ್ಮಣ, ತಿಮ್ಮಯ್ಯ, ಅಂಬ್ರೀಷ, ಶಿವಣ್ಣ, ಗಾಯತ್ರಿ, ಶಾಂತಾಬಾಯಿ, ಶರಣಮ್ಮ, ನಾಗಮ್ಮ ಸೇರಿದಂತೆ ಸಮಾಜದ ಬಾಂದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.