ಧಾರ್ಮಿಕ ಕ್ಷೇತ್ರಗಳಲ್ಲಿ ನಿಸ್ವಾರ್ಥದ ಕಾಯಕ ಮಾಡಿ: ಅದೃಶ್ಯ ಕಾಡಸಿದ್ದೇಶ್ವರ ಶ್ರೀ

KannadaprabhaNewsNetwork | Published : Dec 18, 2024 12:45 AM

ಸಾರಾಂಶ

ಧಾರ್ಮಿಕ ಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ವೃತ್ತಿ ಮಾಡಿ, ಅಲ್ಲಿ ಸ್ವಾರ್ಥದ ಭಾವನೆ ತೊರೆದು ಪ್ರತಿಯೊಬ್ಬರು ಧರ್ಮ ಕ್ಷೇತ್ರ ಉಳಿಸಿ, ಬೆಳೆಸುವಂತಾಗಬೇಕು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸ್ವಾಮೀಜಿಗಳು ಮಠದ ಮಾಲೀಕರಲ್ಲ. ವ್ಯವಸ್ಥಾಪಕರಷ್ಟೇ. ನಿಜವಾದ ಮಾಲೀಕರು ಸಮಾಜದ ಭಕ್ತರು. ಸ್ವಾಮೀಜಿಗಳನ್ನು ಎಚ್ಚರಿಸುವ ಕೆಲಸವನ್ನು ಭಕ್ತರು ಮಾಡಬೇಕು. ಧಾರ್ಮಿಕ ಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ವೃತ್ತಿ ಮಾಡಿ, ಅಲ್ಲಿ ಸ್ವಾರ್ಥದ ಭಾವನೆ ತೊರೆದು ಪ್ರತಿಯೊಬ್ಬರು ಧರ್ಮ ಕ್ಷೇತ್ರ ಉಳಿಸಿ, ಬೆಳೆಸುವಂತಾಗಬೇಕು. ಸನ್ಯಾಸಿಗಳು ಸನ್ಯಾಸಿಗಳಾಗಿಯೇ ಉಳಿಯಬೇಕು ಎಂದು ಕನ್ನೆರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.

ಪಟ್ಟಣದಲ್ಲಿ ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ದ ಪಟ್ಟದಾರ್ಯ ಶ್ರೀಗಳ 39 ನೇ ಪುಣ್ಯಾರಾಧನೆ ಮತ್ತು ಗುರುಬಸವ ದೇವರ ಪಟ್ಟಾಭಿಷೇಕ ಹಾಗೂ ಶರಣ ಸಂಗಮ, ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾಯಕದಲ್ಲಿ ಮೇಲು ಕೀಳು ಇಲ್ಲ. ದೇಶದಲ್ಲಿ ಪ್ರತಿಯೊಂದು ಕಾಯಕ್ಕೂ ತನ್ನದೇ ಆದ ಮಹತ್ವವಿದೆ. ಇರೋದು 3 ವೃತ್ತಿ ಅದು ಬ್ರಹ್ಮವೃತ್ತಿ, ವೈಶ್ಯ ವೃತ್ತಿ, ಕರ್ಮ ವೃತ್ತಿ ಆಗಿವೆ. ವೃತ್ತಿಗೆ ತಕ್ಕಂತೆ ಜಾತಿ ಹುಟ್ಟಿಕೊಂಡು ಸಮಾಜದಲ್ಲಿ ದೊಡ್ಡವರು ಸಣ್ಣವರು ಎಂಬ ಭಾವನೆ ಮೂಡುವಂತೆ ಮಾಡಿದೆ. ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹಿಸಬೇಕು. ನಮ್ಮ ಜಾತಿಯವರು ನಮ್ಮಲ್ಲಿಯೇ ಉಳಿಯಬೇಕು. ನಾವು ಬೇರೆ ಧರ್ಮಕ್ಕೆ ಮತಾಂತರಗೊಂಡ ದಲಿತ ಸಮಾಜದವರನ್ನು ಮನವೋಲಿಸಿ, ಹಿಂದೂ ಧರ್ಮಕ್ಕೆ ಮರಳಿ ತಂದು ಅವರಿಗೆ ಶಿಕ್ಷಣ ಸಂಸ್ಕಾರ ನೀಡಿ, ಸಮಾಜದ ಮುಖ್ಯವಾಹಿನಿಗೆ ಬರಮಾಡಿಕೊಂಡಿದ್ದೇವೆ ಎಂದರು.

ದೇಶದ ಬಹುದೊಡ್ಡ ದುರಂತವೆಂದರೆ ವರ್ಣದಲ್ಲಿ ಜಾತಿಗಳನ್ನು ತಂದಿದ್ದು. ಆದರೆ ಹಿಂದೆ ಹಾಗಿರಲಿಲ್ಲ. ಕಣೇರಿ ಮಠಕ್ಕೆ ಎಲ್ಲ ಜಾತಿ ಭಕ್ತರಿದ್ದಾರೆ. ಜಂಗಮರ ಓಣಿಯಲ್ಲಿ, ಡೋಹರ ಓಣಿಯಲಿ ನಮ್ಮ ಮಠಗಳಿವೆ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ. ಅದಕ್ಕೆ ಪ್ರತಿರೂಪವಾಗಿ ಗುರುಸಿದ್ದೇಶ್ವರ ಬ್ರಹನ್ಮಠವು ಸಾಕ್ಷಿಯಾಗುತ್ತಿದೆ ಎಂದರು. ಸಸ್ತಾಪೂರದ ಡಾ.ಈಶ್ವರಾನಂದ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಗುರುಸಿದ್ದೇಶ್ವರ ಬ್ರಹನ್ಮಠದ ಶ್ರೀ ಬಸವರಾಜ ಪಟ್ಟದಾರ್ಯ ಶ್ರೀಗಳು, ನಿಯೋಜಿತ ಪೀಠಾಧಿಕಾರಿ ಗುರುಬಸವ ದೇವರು, ಬಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು, ಹಂಸನೂರು ಶಿವಾನಂದ ಮಠದ ಬಸವರಾಜೇಂದ್ರ ಶ್ರೀಗಳು, ಟೆಂಗಿನಮಠದ ಮಲ್ಲಿಕಾರ್ಜುನ ದೇವರು, ಮೈದರಂಗಿಯ ಮೃತ್ಯುಂಜಯ ಮಹಾಸ್ವಾಮೀಜಿ, ಗುರುಪಾದ ಶಿವಾಚಾರ್ಯ ಶ್ರೀಗಳು, ರುದ್ರಾಕ್ಷಿಮಠದ ಅಲ್ಲಮಪ್ರಭು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಶಂಕರ ಪೂಜಾರಿ, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿದರು. ರಾಜು ಜವಳಿ, ನಾಗೇಶಪ್ಪ ಪಾಗಿ ಸೇರಿದಂತೆ ಇತರರು ಇದ್ದರು.

Share this article