ಚೈತನ್ಯದಿಂದಿರಲು ಯೋಗ ಮಾಡಿ

KannadaprabhaNewsNetwork | Published : Jun 22, 2024 12:49 AM

ಸಾರಾಂಶ

ದೇಶವು ಜಗತ್ತಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ಇದರಲ್ಲಿ ಯೋಗವು ಒಂದು ಅತ್ಯುನ್ನತ ಕೊಡುಗೆ ಎಂದು ಸಿವಿಲ್ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ದೇಶವು ಜಗತ್ತಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ಇದರಲ್ಲಿ ಯೋಗವು ಒಂದು ಅತ್ಯುನ್ನತ ಕೊಡುಗೆ ಎಂದು ಸಿವಿಲ್ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಹೇಳಿದರು.

ಪಟ್ಟಣದ ನ್ಯಾಯಾಲಯದ ಮುಂಭಾಗ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ನಮ್ಮ ಪ್ರಾಚೀನರು ನಮ್ಮ ದೇಹದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವ ಜೊತೆಗೆ ಯಾವಾಗಲೂ ಚೈತನ್ಯದಿಂದ ಇರಲು ಯೋಗವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ. ಇಂದು ಇಡೀ ಜಗತ್ತಿನಲ್ಲಿ ಯೋಗದ ಮಹತ್ವ ಗೊತ್ತಾಗಿದೆ. ಯೋಗವು ಶಿಸ್ತನ್ನು ಕಲಿಸುವುದರ ಜೊತೆಗೆ ನಮ್ಮ ಗುರಿ ಸಾಧನೆಗೆ ಅತ್ಯಂತ ಬಲವಾದ ಸಾಧನವಾಗಿದೆ. ಯೋಗಕ್ಕಿರುವ ಶಕ್ತಿ ಬೇರೆ ಯಾವ ಔಷಧಿಯಲ್ಲೂ ಇಲ್ಲ. ಪ್ರತಿಯೊಬ್ಬರೂ ಯೋಗದ ಮಹತ್ವ ತಿಳಿದುಕೊಂಡು ಪ್ರತಿನಿತ್ಯ ಒಂದು ಗಂಟೆ ಕಾಲ ಯೋಗಾಸನ ಮಾಡುವ ಮೂಲಕ ಸುಂದರ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ ಮಾತನಾಡಿ, ಯೋಗದಿಂದ ರೋಗ ದೂರವಿಡಬಹುದು. ಯೋಗದಿಂದ ಅಗಾಧವಾದ ಜ್ಞಾನ, ಧ್ಯಾನವನ್ನು ಸಂಪಾದಿಸಬಹುದು. ಯೋಗವನ್ನು ನಮ್ಮ ದಿನನಿತ್ಯದ ಬದುಕಿನ ಭಾಗವನ್ನಾಗಿ ಮಾಡಿಕೊಂಡರೆ ಜೀವನ ಆರೋಗ್ಯದಿಂದ ಇರುವ ಜೊತೆಗೆ ಉಲ್ಲಾಸದಿಂದ ಇರುತ್ತದೆ ಎಂದು ಹೇಳಿದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿತೆ ತೋರಿಸಿ ಅವುಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ, ಸಹಾಯಕ ಸರ್ಕಾರಿ ಅಭಿಯೋಜಕ ರಾಹುಲ ಶಹಾ, ಸಹಾಯಕ ಸರ್ಕಾರಿ ಅಭಿಯೋಜಕಿ ರಾಜರಾಜೇಶ್ವರಿ ಸುತಾರ ಇದ್ದರು. ಮಹೇಶ ಕೆ.ಎಸ್. ಸ್ವಾಗತಿಸಿ,ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸುಮಾರು ೬೦ ಜನ ನ್ಯಾಯಾಲಯದ ಸಿಬ್ಬಂದಿ, ನ್ಯಾಯವಾದಿಗಳು ಭಾಗವಹಿಸಿದ್ದರು.

Share this article