ತಾಲೂಕಿನ ನೊಣವಿನಕೆರೆ ಹೋಬಳಿಯ ಕೋಡಿಹಳ್ಳಿ ಗ್ರಾಮದ ರೈತ ಕೃಷ್ಣಪ್ಪನವರ ಕರುವಿನ ಹೃದಯಕ್ಕೆ ಚುಚ್ಚಿಕೊಂಡಿದ್ದ ಸೂಜಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಪಶುವೈದ್ಯ ಡಾ. ಎಸ್.ಪಿ. ಮಂಜುನಾಥ್ ಹೊರತೆಗೆದು ಕರುವಿನ ಪ್ರಾಣ ಉಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ನೊಣವಿನಕೆರೆ ಹೋಬಳಿಯ ಕೋಡಿಹಳ್ಳಿ ಗ್ರಾಮದ ರೈತ ಕೃಷ್ಣಪ್ಪನವರ ಕರುವಿನ ಹೃದಯಕ್ಕೆ ಚುಚ್ಚಿಕೊಂಡಿದ್ದ ಸೂಜಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಪಶುವೈದ್ಯ ಡಾ. ಎಸ್.ಪಿ. ಮಂಜುನಾಥ್ ಹೊರತೆಗೆದು ಕರುವಿನ ಪ್ರಾಣ ಉಳಿಸಿದ್ದಾರೆ.ಒಂದು ವಾರದಿಂದ ಕರುವು ಮೇವನ್ನು ತಿನ್ನದೇ ಗದ್ದದ ಕೆಳಗೆ ಊತ ಬಂದು ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಸ್ಥಳಕ್ಕೆ ಧಾವಿಸಿದ ಪಶುವೈದ್ಯ ಮಂಜುನಾಥ್ ಕರುವಿನ ಹೃದಯದ ಸುತ್ತ ಕೀವು ತುಂಬಿರುವ ಸ್ಥಿತಿಯಾದ ಪೆರಿಕಾರ್ಡೈಟಿಸ್ ಎಂದು ಪತ್ತೆಹಚ್ಚಿ ಮೊದಲು ಹೃದಯದ ಸುತ್ತ ತುಂಬಿದ್ದ ಸುಮಾರು ಮುನ್ನೂರು ಮಿ.ಲಿ. ಕೀವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದಿದ್ದಾರೆ. ನಂತರ ಕರುವು ನಿಂತಿರುವ ಸ್ಥಿತಿಯಲ್ಲೇ ಕರುವಿನ ಎಡಭಾಗದ ಉದರ ತೆರೆಯುವ ಶಸ್ತ್ರ ಚಿಕಿತ್ಸೆಯನ್ನು ನಡೆಸಿ ಹಸುವಿನ ಎರಡನೇ ಹೊಟ್ಟೆಯಾದ ರೆಟಿಕ್ಯುಲಮ್‌ನಿಂದ ಹೃದಯಕ್ಕೆ ಚುಚ್ಚುತ್ತಿದ್ದ ಸೂಜಿಯನ್ನು ಹೊರತೆಗೆದಿದ್ದು ಈಗ ಕರುವು ಚೇತರಿಸಿಕೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯ ಮಂಜುನಾಥ್, ಹಸುವಿನ ಹೊಟ್ಟೆಯಲ್ಲಿ ನಾಲ್ಕು ಭಾಗಗಳಿದ್ದು ಚೂಪಾದ ಪರಿಕರಗಳನ್ನು ಸೇವಿಸಿದರೆ ಅವು ಎರಡನೇ ಹೊಟ್ಟೆಯಾದ ರೆಟಿಕ್ಯುಲಮ್‌ನಲ್ಲಿ ಸಿಕ್ಕಿಕೊಳ್ಳುತ್ತವೆ. ರೆಟಿಕ್ಯುಲಮ್ ಹೃದಯದ ಪಕ್ಕವೇ ಇರುವುದರಿಂದ ಹೊಟ್ಟೆಯಿಂದ ಚುಚ್ಚಿಕೊಂಡು ಹೊರಬರುವ ಚೂಪಾದ ಪರಿಕರವು ಹೃದಯಕ್ಕೆ ಚುಚ್ಚಲಾರಂಬಿಸುತ್ತದೆ. ಇದರಿಂದ ಹೃದಯ ಮತ್ತು ಅದರ ಹೊರಪದರದ ನಡುವೆ ಕೀವು ತುಂಬಲಾರಂಬಿಸುತ್ತದೆ. ಆಗ ಹೃದಯಕ್ಕೆ ಕೆಲಸ ನಿರ್ವಹಿಸಲು ಸಾಧ್ಯವಾಗದೇ ಜಾನುವಾರು ಅಸುನೀಗುತ್ತದೆ. ಆದ್ದರಿಂದ ರೈತರು ತಾವು ಕೊಡುವ ಮೇವಿನ ಮೇಲೆ ನಿಗಾ ಇಡಬೇಕು. ಈ ಕರುವಿನ ಚಿಕಿತ್ಸೆಯು ಅತ್ಯಂತ ಸವಾಲಿನದ್ದಾಗಿತ್ತು. ಸರಿಯಾದ ಸಮಯಕ್ಕೆ ಪ್ರಸ್ತುತಪಡಿಸಿದ್ದರಿಂದ ಜೀವ ಉಳಿಸಲು ಸಾಧ್ಯವಾಯಿತು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.