ನಾರಾಯಣ ಹೆಗಡೆ
ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ನಿಯೋಜನೆ ಮೇಲಿದ್ದ ಅಧಿಕಾರಿಗಳು, ವೈದ್ಯರು, ನೌಕರರ ಸೇವೆಯನ್ನು ಆರೋಗ್ಯ ಮತ್ತು ಕುಟುಂಬ ಇಲಾಖೆ ಹಿಂಪಡೆದಿದೆ. ಹೀಗೆ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಜಿಲ್ಲಾಸ್ಪತ್ರೆಯಿಂದ ಸೆಲ್ಫ್ ರಿಲೀವ್ ಆಗಿ ಆರೋಗ್ಯ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದರು.
ಈ ಹಿಂದೆ ಆರೋಗ್ಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಸ್ಪತ್ರೆ ಈಗ ಮೆಡಿಕಲ್ ಕಾಲೇಜು ಶುರುವಾದ ಮೇಲೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದೆ. ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ತಜ್ಞ ವೈದ್ಯರು, ಟೆಕ್ನಿಶಿಯನ್ಸ್, ನರ್ಸಿಂಗ್ ಸಿಬ್ಬಂದಿ ಈಗ ಅನಿವಾರ್ಯವಾಗಿ ಜಾಗ ಖಾಲಿ ಮಾಡುವಂತಾಗಿದೆ. ಮೆಡಿಕಲ್ ಕಾಲೇಜು ಬಂದ ಮೇಲೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಜಿಲ್ಲಾಸ್ಪತ್ರೆ ಸೇರಿರುವುದರಿಂದ ಈ ಸಮಸ್ಯೆ ಎದುರಾಗಿದೆ.23 ವೈದ್ಯರು ಖಾಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ಮೇರೆಗೆ ಜಿಲ್ಲಾಸ್ಪತ್ರೆಯ ಪ್ರಮುಖ ವೈದ್ಯರ ಹುದ್ದೆಗಳೆಲ್ಲ ಖಾಲಿಯಾಗಿವೆ. ಎರಡು ತಿಂಗಳ ಹಿಂದೆ ಇಲಾಖೆಯ ವರ್ಗಾವಣೆ ವೇಳೆ 9 ತಜ್ಞ ವೈದ್ಯರು ಬೇರೆ ಕಡೆ ಹೋಗಿದ್ದರು. ಈಗ ಮತ್ತೆ 14 ವೈದ್ಯರು ಮಾತೃ ಇಲಾಖೆಗೆ ವಾಪಸ್ ಆಗಿದ್ದಾರೆ. ಇದರಿಂದ 23 ತಜ್ಞ ವೈದ್ಯರ ಹುದ್ದೆ ಖಾಲಿಯಾಗಿದೆ. ಪ್ರಮುಖವಾಗಿ ಹೆರಿಗೆ, ಸ್ತ್ರೀರೋಗ ತಜ್ಞರು, ಜನರಲ್ ಮೆಡಿಸಿನ್, ಅನಸ್ತೇಶಿಯಾ, ಮಕ್ಕಳ ತಜ್ಞರು, ಚರ್ಮರೋಗ ವೈದ್ಯರು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಹಜ ಹೆರಿಗೆ ಬಿಟ್ಟರೆ ಈಗ ಸಿಜೇರಿಯನ್ ಹೆರಿಗೆ ಮಾಡಲು ವೈದ್ಯರಿಲ್ಲ. ಇದರಿಂದ ಜಿಲ್ಲಾಸ್ಪತ್ರೆ ಇದ್ದೂ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ.
ಜಿಲ್ಲಾಸ್ಪತ್ರೆಯಲ್ಲಿದ್ದ ತಜ್ಞ ವೈದ್ಯರ ಹುದ್ದೆಗಳು ಖಾಲಿ ಆಗಿರುವುದರಿಂದ ಸದ್ಯ ತುರ್ತು ಚಿಕಿತ್ಸೆ ಸಿಗುತ್ತಿಲ್ಲ. ಹೆರಿಗೆ ನೋವು ತಾಳಲಾರದೇ ಬಂದ ಮಹಿಳೆಯರಿಗೆ ಸಿಜೇರಿಯನ್ ಮಾಡಿಸಲು ವೈದ್ಯರಿಲ್ಲ. ಐವರು ಅನಸ್ತೇಶಿಯಾ ತಜ್ಞರು ಇಲ್ಲಿಂದ ಬಿಡುಗಡೆಯಾಗಿ ಹೋಗಿದ್ದಾರೆ. ತುರ್ತು ಚಿಕಿತ್ಸೆಗೆಂದು ಗ್ರಾಮೀಣ ಭಾಗದಿಂದ ಜಿಲ್ಲಾಸ್ಪತ್ರೆಗೆ ಬಂದರೆ, ಹುಬ್ಬಳ್ಳಿ ಕಿಮ್ಸ್‌ಗೆ ಹೋಗಿ ಎಂದು ರೆಫರೆನ್ಸ್ ಮಾಡಿ ಕಳುಹಿಸುತ್ತಿದ್ದಾರೆ. ಒಪಿಡಿ ಹಾಗೂ ಇನ್ನಿತರ ಸಣ್ಣಪುಟ್ಟ ಕಾಯಿಲೆಗಳಿಗಷ್ಟೇ ಸೀಮಿತವಾಗಿದೆ. ದೂರದ ಹಳ್ಳಿಗಳಿಂದ ಬಂದವರು ವೈದ್ಯರಿಲ್ಲ, ಸಹಕರಿಸಿ ಎಂಬ ಬೋರ್ಡ್ ನೋಡಿ ಹೋಗುವಂತಾಗಿದೆ.