ಅನಿತಾ-ನಿಖಿಲ್ ಪರಿಹಾರ ಕೋರಿರುವ ದಾಖಲೆ ಬಿಡುಗಡೆ

KannadaprabhaNewsNetwork |  
Published : Sep 09, 2025, 01:00 AM IST
8ಕೆಆರ್ ಎಂಎನ್ 2.ಜೆಪಿಜಿಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ರವರು ಅನಿತಾ ಮತ್ತು ಕುಮಾರಸ್ವಾಮಿರವರು ಪ್ರಾಧಿಕಾರದ ಆಯುಕ್ತರಿಗೆ ಬರೆದಿರುವ ಪತ್ರವನ್ನು ಪ್ರದರ್ಶಿಸಿದರು. | Kannada Prabha

ಸಾರಾಂಶ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ತಮ್ಮ ಭೂಮಿ ಸ್ವಾಧೀನವಾದಲ್ಲಿ ಅದರ ದಾಖಲಾತಿ ಮತ್ತು ಪರಿಹಾರವನ್ನು ನೀಡುವಂತೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬರೆದಿರುವ ಪತ್ರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಬಿಡುಗಡೆಗೊಳಿಸಿ ತಿರುಗೇಟು ನೀಡಿದರು.

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ತಮ್ಮ ಭೂಮಿ ಸ್ವಾಧೀನವಾದಲ್ಲಿ ಅದರ ದಾಖಲಾತಿ ಮತ್ತು ಪರಿಹಾರವನ್ನು ನೀಡುವಂತೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬರೆದಿರುವ ಪತ್ರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಬಿಡುಗಡೆಗೊಳಿಸಿ ತಿರುಗೇಟು ನೀಡಿದರು.

ನಗರದ ಹಳೆಯ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರ ಬಿಡುಗಡೆ ಮಾಡಿದ ಗಾಣಕಲ್ ನಟರಾಜ್, 2025ರ ಮಾರ್ಚ್ 29ರಂದು ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಪ್ರಾಧಿಕಾರದ ಆಯುಕ್ತರಿಗೆ ಪ್ರತ್ಯೇಕವಾಗಿ ಎರಡು ಪತ್ರಗಳನ್ನು ಬರೆದಿರುವುದನ್ನು ದಾಖಲೆಗಳ ಸಮೇತ ಸ್ಪಷ್ಟಪಡಿಸಿದರು.

ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೂ ಸ್ವಾಧೀನ ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರನ್ನು ಉದ್ದೇಶಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಅಂತಹ ಅರ್ಜಿಯನ್ನು ನಾವು ಸಲ್ಲಿಸಿದ್ದರೆ, ನಮ್ಮ ತಾಯಿಯವರ ಹೆಸರಲ್ಲಿರುವ ಭೂಮಿಯನ್ನು ಸಂಪೂರ್ಣವಾಗಿ ಬಡವರಿಗೆ ಹಂಚುತ್ತೇನೆ ಎಂದು ಸವಾಲೆಸೆಯುವ ಜೊತೆಗೆ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಅವರು ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಹೆಸರಿನಲ್ಲಿರುವ ಜಮೀನು, ಅದರ ದಾಖಲೆಗಳು ಹಾಗೂ ಪ್ರಾಧಿಕಾರದ ಆಯುಕ್ತರಿಗೆ ಪರಿಹಾರ ಕೋರಿ ಬರೆದಿರುವ ಪತ್ರವನ್ನು ಬಿಡುಗಡೆ ಮಾಡಿದರಲ್ಲದೆ, ಜಮೀನು ಬಿಟ್ಟುಕೊಡಿ ನಾವೇ ಪ್ರಾಧಿಕಾರದ ವತಿಯಿಂದ ಬಡವರಿಗೆ ಹಂಚುತ್ತೇವೆ ಎಂದು ಸವಾಲು ಹಾಕಿದರು.

ಅನಿತಾ ಹೆಸರಲ್ಲಿ 29.10 ಎಕರೆ ಜಮೀನು :

2025ರ ಮಾ.26ರಂದು ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಇದಾದ ಮೇಲೆ ಮಾರ್ಚ್ 29ರಂದು ಅನಿತಾ ಕುಮಾರಸ್ವಾಮಿರವರು ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಬಿಡದಿ ಹೋಬಳಿ ಬನ್ನಿಗಿರಿ ಗ್ರಾಮದ ಸರ್ವೆ ನಂ 194/3, 195/2, 196/2 ಹಾಗೂ ಹೊಸೂರು ಗ್ರಾಮದಲ್ಲಿ ಸರ್ವೆ ನಂಬರ್ 408, 440, 438, 362, 247, 361/2 ಸೇರಿ ಒಟ್ಟು 29 ಎಕರೆ 10 ಗುಂಟೆ ಜಮೀನು ಹೊಂದಿದ್ದೇನೆ ಎಂದು ಪತ್ರದಲ್ಲಿ ಅನಿತಾ ಕುಮಾರಸ್ವಾಮಿ ಅವರೇ ಉಲ್ಲೇಖಿಸಿದ್ದಾರೆ.

ಇದರ ಖಾತೆ ಪಹಣಿ ನನ್ನ ಹೆಸರಿನಲ್ಲೇ ಇವೆ. ಕಾರಣಾಂತರಗಳಿಂದ ಎಂ.ಜಿ.ವಿನಯ್ ಗೌಡರಿಗೆ ಎಸ್ ಪಿಎ ಮೂಲಕ ಅಧಿಕಾರ ನೀಡಲಾಗಿತ್ತು. ಈಗ ಅಧಿಕಾರವನ್ನು ಹಿಂಪಡೆದಿದ್ದೇನೆ. ಜಮೀನನ್ನು ಸಂಪೂರ್ಣ ಸ್ವಾಧೀನಾನುಭವಕ್ಕೆ ಪಡೆದುಕೊಂಡಿರುತ್ತೇನೆ. ಆದ ಕಾರಣ ಭೂ ಸ್ವಾಧೀನವಾದಲ್ಲಿ ಇದಕ್ಕೆ ಸಂಬಂಧಿಸಿದಂತೆ ದಾಖಲಾತಿ, ನೋಟಿಸ್ ಹಾಗೂ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ನನ್ನ ವಿಳಾಸಕ್ಕೆ ನೀಡಬೇಕು ಎಂದು ಕೋರಿದ್ದಾರೆ ಎಂದು ತಿಳಿಸಿದರು.

ಅನ್ಯರ ಹೆಸರಿನಲ್ಲಿ ನಿಖಿಲ್ ಜಮೀನು:

ಇಷ್ಟೇ ಅಲ್ಲದೆ, ನಿಖಿಲ್ ಕುಮಾರಸ್ವಾಮಿ ಸಹ ಪ್ರಾಧಿಕಾರಕ್ಕೆ ಪತ್ರ ಬರೆದು ಬಿಡದಿ ಹೋಬಳಿ ಹೊಸೂರು ಗ್ರಾಮದ ಸರ್ವೆ ನಂ.26ರಲ್ಲಿ 4 ಎಕರೆ ಜಮೀನನ್ನು 2024ರಲ್ಲಿ ನೊಂದಣಿ ಮಾಡಿಸಿಕೊಂಡಿದ್ದೇವೆ. ಭೂ ಸ್ವಾಧೀನವಾದಲ್ಲಿ ದಾಖಲೆಗಳನ್ನು ನೊಟೀಸ್ ಗಳನ್ನು ನನ್ನ ವಿಳಾಸಕ್ಕೆ ನೀಡಬೇಕು ಎಂದು ತಿಳಿಸಿದ್ದಾರೆ. ಹೀಗಿದ್ದರೂ ನಿಖಿಲ್ ರವರು ಮಾಹಿತಿ ಕೊರತೆಯಿಂದ ಜಮೀನು ಬಿಟ್ಟುಕೊಡುವ ಸವಾಲು ಎಸೆದಿದ್ದಾರೆ ಎಂದು ಟೀಕಿಸಿದರು.

ಪ್ರಾಧಿಕಾರವಾಗಲಿ ಅಥವಾ ಪ್ರಾಧಿಕಾರದ ಅಧಿಕಾರಿಗಳಾಗಲಿ ನಿಖಿಲ್ ಕುಮಾರಸ್ವಾಮಿರವರ ಮನೆ ಬಾಗಿಲಿಗೆ ಹೋಗಿ ಭೂಮಿ ಕೇಳಿಲ್ಲ. ಬದಲಿಗೆ ಅಧಿಸೂಚನೆ ನೋಡಿ ಅವರುಗಳೇ ಭೂ ಸ್ವಾಧೀನವಾದಲ್ಲಿ ಪರಿಹಾರ ನೀಡುವಂತೆ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಅಷ್ಟಕ್ಕು ನಿಖಿಲ್ ರವರು ಖರೀದಿಸಿದ ಜಮೀನನ್ನು ಬೇರೆಯವರ ಹೆಸರಿನಲ್ಲಿ ಏಕೆ ಇಟ್ಟಿದ್ದರು ಎಂದು ಪ್ರಶ್ನೆ ಮಾಡಿದರು.

ಉಪಮುಖ್ಯಮಂತ್ರಿಗಳ ವಿರುದ್ಧ ಉಡಾಫೆಯಾಗಿ ಮಾತನಾಡುತ್ತಿರುವ ನಿಖಿಲ್ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಇಡಿ, ಐಟಿ, ಸಿಬಿಐ ತನಿಖೆಗಳನ್ನು ಎದುರಿಸಿದ್ದಾಗಿದೆ. ರಾಜಕೀಯದಲ್ಲಿ ಉನ್ನತ ಭವಿಷ್ಯ ಕಟ್ಟಿಕೊಳ್ಳುವ ಆಶಯ ಇಟ್ಟುಕೊಂಡಿರುವ ನೀವು ಹಿರಿಯ ರಾಜಕಾರಣಿ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ನಿಖಿಲ್ ವಿರುದ್ಧ ಕಿಡಿಕಾರಿದರು.

ಭೂಮಿ ಕೊಟ್ಟರೆ ಬಡವರಿಗೆ ಹಂಚುತ್ತೇವೆ:

ನಮ್ಮ ತಾಯಿ ಅವರು ಭೂಸ್ವಾಧೀನ ವಿಚಾರವಾಗಿ ಅರ್ಜಿ ಸಲ್ಲಿಸಿದ್ದರೆ, ಅವರ ಹೆಸರಲ್ಲಿರುವ 20 ಎಕರೆ ಭೂಮಿಯನ್ನು ಬಡವರಿಗೆ ಹಂಚುತ್ತೇವೆ ಎಂದು ನಿಖಿಲ್ ಸವಾಲ್ ಎಸೆದಿದ್ದಾರೆ. ಈಗ ಅವರು ಭೂ ಸ್ವಾಧೀನವಾದಲ್ಲಿ ನಮ್ಮೊಂದಿಗೆ ಪತ್ರ ವ್ಯವಹಾರ ಮಾಡಿ ಎಂದು ಪತ್ರ ಬರೆದಿರುವುದು ರುಜುವಾಗಿದೆ.

ಇಲ್ಲಿವರೆಗೆ ಭೂ ಸ್ವಾಧೀನ ವಿರೋಧಿಸಿ ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿರವರು ಆಕ್ಷೇಪಣ ಅರ್ಜಿಯನ್ನೇ ಸಲ್ಲಿಸಿಲ್ಲ. ಅಂದರೆ ಅವರಿಗೆ ಭೂ ಸ್ವಾಧೀನಕ್ಕೆ ಸಮ್ಮಿತಿ ಇದೆ ಎಂದರ್ಥ ಅಲ್ಲವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿರವರು ಭೂಮಿಯನ್ನು ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟರೆ, ಪ್ರಾಧಿಕಾರವೇ ಕಡು ಬಡವರಿಗೆ ಹಂಚಲಿದೆ. ಅಲ್ಲದೆ, ಅವರಿಬ್ಬರು ಪ್ರಾಧಿಕಾರಕ್ಕೆ ಭೂಮಿದಾನ ಕೊಟ್ಟಿದ್ದಾರೆಂದು ನಾವೇ ಪ್ರಚಾರ ಮಾಡುತ್ತೇವೆ ಎಂದು ಗಾಣಕಲ್ ನಟರಾಜ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ನಿರ್ದೇಶಕರಾದ ಪುಟ್ಟಯ್ಯ, ನರಸಿಂಹಯ್ಯ, ಕನ್ಯಾಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ ..................

ಅಧಿಸೂಚನೆ ಹೊರಡಿಸಿದಾಗ 2197 ರೈತರ ಅರ್ಜಿಗಳು ಬಂದಿದ್ದು, ಇದರಲ್ಲಿ 1142 ಕೃಷಿಕರು ಭೂಮಿ ಕೊಡುವುದಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ಇದರ ಭೂಮಿ ವಿಸ್ತೀರ್ಣ 2248 ಎಕರೆ ಆಗಿದೆ. ಆನಂತರ ವಿಚಾರಣೆ ವೇಳೆ 1142 ಪೈಕಿ 86 ರೈತರು ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದಾರೆ. 290 ರೈತರು ವಿಚಾರಣೆಗೆ ಗೈರಾಗಿದ್ದಾರೆ. ಇದೀಗ ಕೆಲವರು ರೈತರ ಸೋಗಿನಲ್ಲಿ ಹೋರಾಟ ನಡೆಸುತ್ತಿದ್ದಾರೆ.

-ಗಾಣಕಲ್ ನಟರಾಜ್ , ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

8ಕೆಆರ್ ಎಂಎನ್ 2.ಜೆಪಿಜಿ

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ ಅವರು ಅನಿತಾ ಮತ್ತು ಕುಮಾರಸ್ವಾಮಿಯವರು ಪ್ರಾಧಿಕಾರದ ಆಯುಕ್ತರಿಗೆ ಬರೆದಿರುವ ಪತ್ರವನ್ನು ಪ್ರದರ್ಶಿಸಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು