ಸಹಕಾರ ಚಳವಳಿಗೆ ದೊಡ್ಡಬಳ್ಳಾಪುರ ಕೊಡುಗೆ ಅನನ್ಯ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ದೊಡ್ಡಬಳ್ಳಾಪುರ: ಸಹಕಾರ ಚಳವಳಿಗೆ ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೊಡುಗೆ ಅನನ್ಯವಾದದ್ದು. ಸಹಕಾರ ಚಳವಳಿಯ ಸಬಲೀಕರಣದಿಂದ ಸಮಗ್ರ ಪ್ರಗತಿಯ ಸಂಕಲ್ಪ ಸಾಕಾರಗೊಳ್ಳುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.

ದೊಡ್ಡಬಳ್ಳಾಪುರ: ಸಹಕಾರ ಚಳವಳಿಗೆ ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೊಡುಗೆ ಅನನ್ಯವಾದದ್ದು. ಸಹಕಾರ ಚಳವಳಿಯ ಸಬಲೀಕರಣದಿಂದ ಸಮಗ್ರ ಪ್ರಗತಿಯ ಸಂಕಲ್ಪ ಸಾಕಾರಗೊಳ್ಳುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.

ಇಲ್ಲಿನ ಒಕ್ಕಲಿಗರ ಭವನದಲ್ಲಿ ನಡೆದ ಸಹಕಾರ ರತ್ನ ಚುಂಚೇಗೌಡರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.

ದೇಶದ ಮೊದಲ ಸಹಕಾರ ಸಂಘ ಜನ್ಮತಳೆದಿದ್ದು ಕರ್ನಾಟಕದಲ್ಲಿ ಎಂಬುದು ನಮ್ಮೆಲ್ಲರ ಹೆಮ್ಮೆ.ಈ ವಲಯದಲ್ಲಿ ಬೆಳೆದು ಬಂದ ನಾಯಕರು ದೇಶದ ಅನನ್ಯ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವುದು ಇತಿಹಾಸ ಎಂದ ಅವರು, ಸಹಕಾರ ಚಳವಳಿಗೆ ಬಹುದೊಡ್ಡ ಪರಂಪರೆ ಇದ್ದು, ಶತಮಾನಗಳಿಂದ ಹಾಸುಹೊಕ್ಕಾಗಿದೆ ಎಂದರು.

ನೀರಾವರಿ ಯೋಜನೆಗಳ ಪ್ರಗತಿ:

ದೊಡ್ಡಬಳ್ಳಾಪುರ ಕ್ಷೇತ್ರದ ಹಲವು ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ. ವೃಷಭಾವತಿ ವ್ಯಾಲಿಯಿಂದ ಸಂಸ್ಕರಿತ ನೀರನ್ನು ದೊಡ್ಡಬಳ್ಳಾಪುರ ಮತ್ತು ನೆಲಮಂಗಲದ ಕೆರೆಗಳಿಗೆ ಹರಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, ಶೀಘ್ರ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ. ಅದೇ ರೀತಿ ಎತ್ತಿನಹೊಳೆ ಯೋಜನೆಯ ಪ್ರಗತಿಯೂ ಆಶಾದಾಯಕವಾಗಿದ್ದು, ಕ್ಷೇತ್ರದ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ನೀರೊದಗಿಸುವ ಮಹತ್ವಾಕಾಂಕ್ಷಿ ಕೈಗೂಡಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಗ್ರಾಮ ಸ್ವರಾಜ್ಯದ ಕನಸು ಈಡೇರಿಸುವ ಸಾಮರ್ಥ್ಯ ಸಹಕಾರ ರಂಗಕ್ಕೆ ಮಾತ್ರ ಇದೆ ಎಂದರೆ ತಪ್ಪಾಗದು. ಪ್ರತಿ ವ್ಯಕ್ತಿಯ ಅಭ್ಯುದಯವನ್ನು ಬಯಸುವ ಸಹಕಾರ ಚಿಂತನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ರಾಜ್ಯದ ಅತ್ಯಂತ ಶ್ರೇಷ್ಟ ಸಹಕಾರಿಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದೆ. ಆರ್.ಎಲ್.ಜಾಲಪ್ಪನವರು ಸಹಕಾರ ಸಚಿವರಾಗಿ ಈ ರಂಗಕ್ಕೆ ಕೊಟ್ಟ ಕೊಡುಗೆ ಅಪಾರ ಎಂದರು.

ಪ್ರಗತಿಯ ಯಾವುದೇ ನೆಲೆಯನ್ನು ನಾವು ಸರ್ವತೋಮುಖ ರೀತಿಯಲ್ಲಿ ಪರಿಗಣಿಸಿ ಮಹತ್ವ ನೀಡುವುದಾರೆ ಅದು ಸಹಕಾರಿ ವಲಯದಿಂದಲೇ ಸಾಧ್ಯ. ಯಾವುದೇ ಗ್ರಾಮದಲ್ಲಿ ಶಾಲೆ, ದೇವಾಲಯ, ಆಸ್ಪತ್ರೆ ಇತ್ಯಾದಿ ಮೂಲಸೌಕರ್ಯಗಳ ಮಾದರಿಯಲ್ಲೇ ಸಹಕಾರಿ ಸಂಘವೂ ಇದ್ದರೆ ಆ ಗ್ರಾಮ ಪ್ರಗತಿಯ ಹೊಸಪಥದಲ್ಲಿ ಮುನ್ನಡೆಯಲಿದೆ ಎಂದರು.

ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಚುಂಚೇಗೌಡರಂತಹ ಶ್ರೇಷ್ಠ ಸಹಕಾರಿಗಳಿಂದ ಈ ವಲಯ ಮತ್ತಷ್ಟು ಸದೃಢವಾಗಿದೆ. ತಾಲೂಕಿನ ಸಹಕಾರ ಸಂಸ್ಥೆಗಳು ರಾಜ್ಯಕ್ಕೇ ಮಾದರಿ ಎಂದರೆ ತಪ್ಪಿಲ್ಲ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕರಾದ ವಿ.ಕೃಷ್ಣಪ್ಪ, ಜೆ.ನರಸಿಂಹಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಣಗೌಡ, ಜಿಪಂ ಮಾಜಿ ಸದಸ್ಯರಾದ ಎ.ನರಸಿಂಹಯ್ಯ, ಎಚ್.ಅಪ್ಪಯ್ಯಣ್ಣ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಮುಖಂಡರಾದ ಬೈರೇಗೌಡ, ಜಗನ್ನಾಥ್, ರಾಮಕೃಷ್ಣ, ಜಿ.ಎಂ.ಚನ್ನಪ್ಪ, ಹನುಮಂತರಾಯಪ್ಪ, ಕೆ.ಎಂ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ನಾಗರಿಕ ಸನ್ಮಾನ ಪ್ರದಾನ:

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಚುಂಚೇಗೌಡರಿಗೆ ದೊಡ್ಡಬಳ್ಳಾಪುರ ನಾಗರಿಕ ಸನ್ಮಾನವನ್ನು ಇದೇ ವೇಳೆ ಪ್ರದಾನ ಮಾಡಲಾಯಿತು. ಜೊತೆಗೆ ಸಹಕಾರ ಕ್ಷೇತ್ರದ ಪ್ರಗತಿಗೆ ಶ್ರಮಿಸಿದ ತಾಲೂಕಿನ ಹತ್ತಾರು ಹಿರಿಯ ಸಹಕಾರಿ ಗಣ್ಯರನ್ನು ಪುರಸ್ಕರಿಸಿ ಅಭಿನಂದಿಸಲಾಯಿತು. ಇದಕ್ಕೂ ಮುನ್ನ ತಾಲೂಕು ಕಚೇರಿ ವೃತ್ತದಿಂದ ಒಕ್ಕಲಿಗರ ಭವನದವರೆಗೆ ಪುರಸ್ಕೃತರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

19ಕೆಡಿಬಿಪಿ3-

ದೊಡ್ಡಬಳ್ಳಾಪುರದಲ್ಲಿ ನಡೆದ ಸಹಕಾರ ರತ್ನ ಚುಂಚೇಗೌಡ ಅವರಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ಮಾಜಿ ಸಚಿವ ಜಿ.ಟಿ.ದೇವೇಗೌಡ ನಾಗರಿಕ ಪುರಸ್ಕಾರ ಪ್ರದಾನ ಮಾಡಿದರು.

Share this article