ದೊಡ್ಡಬಾಣಗೆರೆ ಸರ್ಕಾರಿ ಶಾಲೇಲಿ ಪ್ರಯೋಗ ಸಾಮಗ್ರಿ ಕೊರತೆ

KannadaprabhaNewsNetwork |  
Published : Jul 08, 2024, 12:34 AM IST
ಶಿರಾ ತಾಲೂಕಿನ ದೊಡ್ಡಬಾಣಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾ | Kannada Prabha

ಸಾರಾಂಶ

ದೊಡ್ಡಬಾಣಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಅವಶ್ಯಕವಾಗಿರುವ ವಿಜ್ಞಾನ ಉಪಕರಣ, ಗಣಿತ ಕಲಿಕೋಪಕರಣ, ಕ್ರೀಡಾ ಸಾಮಾಗ್ರಿ, ಜ್ಞಾನಾರ್ಜನೆಗೆ ಬೇಕಾದ ಪುಸ್ತಕಗಳಿಲ್ಲದೆ ಇಲ್ಲಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ತುಮಕೂರು

ದೊಡ್ಡಬಾಣಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಅವಶ್ಯಕವಾಗಿರುವ ವಿಜ್ಞಾನ ಉಪಕರಣ, ಗಣಿತ ಕಲಿಕೋಪಕರಣ, ಕ್ರೀಡಾ ಸಾಮಾಗ್ರಿ, ಜ್ಞಾನಾರ್ಜನೆಗೆ ಬೇಕಾದ ಪುಸ್ತಕಗಳಿಲ್ಲದೆ ಇಲ್ಲಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಹಳೆ ವಿದ್ಯಾರ್ಥಿ ಬಿ.ವಿ.ಗುಂಡಪ್ಪ ಆರೋಪಿಸಿದರು.

ಶಿರಾ ತಾಲೂಕಿನ ದೊಡ್ಡಬಾಣಗೆರೆ ಗ್ರಾಮವು ಗಡಿ ಗ್ರಾಮವಾಗಿದ್ದು, ಈ ಶಾಲೆಯಲ್ಲಿ ಒಟ್ಟು 115 ವಿದ್ಯಾರ್ಥಿ-ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಒಂದರಿಂದ ಮೂರನೇ ತರಗತಿಗೆ ನಲಿ-ಕಲಿ ಚಟುವಟಿಕೆಗೆ ಬೇಕಾದ ಅಕ್ಷರ ಚಪ್ಪರ, ಕಲಿಕಾ ಚಪ್ಪರ, ಕಲಿಕಾ ಹಾಳೆಗಳು, ತಟ್ಟೆಗಳು ಏನೂ ಇಲ್ಲ. 5,6,7 ನೇ ತರಗತಿಯಲ್ಲಿನ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಪಠ್ಯ ಬೋಧನೆಗೆ ಯಾವುದೇ ಚಾರ್ಟ್‌ ಮಾದರಿಗಳಂತಹ ಕಲಿಕಾ ಉಪಕರಣಗಳು ಇಲ್ಲ.

ಶಾಲಾ ಅನುದಾನ, ಶಿಕ್ಷಕರ ಅನುದಾನವನ್ನು ಸದ್ಬಳಕೆ ಮಾಡಿಕೊಂಡಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಶಾಲೆಗೆ ಭೇಟಿ ನೀಡುವ ಸಿ.ಆರ್.ಪಿ, ಮಿಂಚು ತಂಡ ಹಾಗೂ ಇ.ಸಿ.ಒ ಈ ಶಾಲೆಯ ಸ್ಥಿತಿ ನೋಡಿ ಕ್ರಮ ತೆಗೆದು ಕೊಂಡಿಲ್ಲವೇಕೆ ? ಇವರೆಲ್ಲ ಮೇಲಾಧಿಕಾರಿಗಳಿಗೆ ವರದಿ ಮಾಡಿಲ್ಲದಿರುವುದು ಇವರ ಅಸಮರ್ಥತೆ ಎದ್ದು ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ಶಾಲೆಯಲ್ಲಿ 3 ವರ್ಷಗಳಿಂದ ಕಾಯಂ ಮುಖ್ಯ ಶಿಕ್ಷಕರಿಲ್ಲ. ದೈಹಿಕ ಶಿಕ್ಷಣ ಶಿಕ್ಷಕರು ಕಳೆದ ಮೂರು ವರ್ಷಗಳಿಂದ ಪ್ರಭಾರ ಮುಖ್ಯಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಬಂದ ಒಬ್ಬರು ಮಾತ್ರ ಕಾಯಂ ಶಿಕ್ಷಕಿ ಇದ್ದಾರೆ. ಉಳಿದ 4 ಜನ ತರಬೇತಿ ಇಲ್ಲದ ಅತಿಥಿ ಶಿಕ್ಷಕರಿದ್ದಾರೆ. ಸಾಕಷ್ಟು ಪೀಟೋಪಕರಣಗಳಿಲ್ಲದೆ 7 ನೇ ತರಗತಿ ವಿದ್ಯಾರ್ಥಿಗಳನ್ನು ಬಿಟ್ಟು ಉಳಿದ ವಿದ್ಯಾರ್ಥಿಗಳು ನೆಲದಲ್ಲಿ ಕೂರುತ್ತಾರೆ. ನೆಲಸಮ ಮಾಡದ ಹಳೆಯ ಕೊಠಡಿ ಅನಾಹುತಕ್ಕೆ ಕಾದು ಕೂತಿದೆ ಎಂದು ಅಲ್ಲಿನ ಸಮಸ್ಯೆ ವಿವರಿಸಿದ್ದಾರೆ.

ಶಾಲಾ ಆವರಣದಲ್ಲಿರುವ ಓವರ್‌ ಹೆಡ್ ಟ್ಯಾಂಕ್ ಸೊರುತ್ತಿದ್ದು, ಶೌಚಾಲಯದ ಮುಂಭಾಗ ಮತ್ತು ಕೈತೊಳೆಯುವ ಜಾಗದಲ್ಲಿ ನೀರು ನಿಂತು ಡೆಂಘೀ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿಂದ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೂಡಲೇ ಉನ್ನತ ಅಧಿಕಾರಿಗಳು ಈ ಶಾಲೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ