ಬಡ್ಡಿ ದುಡಿಯಲು ಸರ್ಕಾರ ಅನುದಾನ ಕೊಡುತ್ತಾ?

KannadaprabhaNewsNetwork |  
Published : Jan 19, 2024, 01:48 AM IST
ಬಸವ ಪುತ್ಥಳಿ ಪುರಾಣ-ಭಾಗ-8 | Kannada Prabha

ಸಾರಾಂಶ

ಬಸವ ಪುತ್ಥಳಿ ನಿರ್ಮಾಣಕ್ಕೆಂದು ಸರ್ಕಾರ ಮ್ಯಾಚಿಂಗ್ ಗ್ರಾಂಟ್ ಆಗಿ ಬಿಡುಗಡೆ ಮಾಡಲಾದ ಅನುದಾನವ ಖರ್ಚು ಮಾಡುವುದ ಬಿಟ್ಟು ಮುರುಘಾಮಠ ಬ್ಯಾಂಕ್ ನಲ್ಲಿ ಡಿಪಾಜಿಟ್ ಮಾಡಿ ಬಡ್ಡಿ ದುಡಿದುಕೊಳ್ಳಲು ಅವಕಾಶಗಳಿವೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ: ಹಲವು ಪರಿಷ್ಕೃತ ಅಂದಾಜಿನೊಂದಿಗೆ 323 ಅಡಿ ಎತ್ತರದ ಸ್ವರೂಪ ಪಡೆದಿರುವ ಮುರುಘಾಮಠದ ಬಸವಪುತ್ಥಳಿಗೆ ರಾಜ್ಯ ಸರ್ಕಾರ ಬರೋಬ್ಬರಿ 35 ಕೋಟಿ ರು ಅನುದಾನ ನೀಡಿದ್ದು ಅದರಲ್ಲಿ 24 ಕೋಟಿ ರು. ಖರ್ಚಾಗಿದ್ದು, 5 ಕೋಟಿ ರು. ಬ್ಯಾಂಕ್‌ನಲ್ಲಿ ಡಿಪಾಜಿಟ್ ಮಾಡಲಾಗಿದೆ. 6 ಕೋಟಿ ರು. ಪ್ರತಿಮೆ ನಿರ್ಮಾಣದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂಬುದು ಮುರುಘಾ ಮಠದ ವಕ್ತಾರರ ಅಭಿಪ್ರಾಯ. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮತ್ತವರ ತಂಡ ತನಿಖೆಗೆಂದು ಬಸವ ಪುತ್ಥಳಿ ನಿರ್ಮಾಣದ ಪ್ರದೇಶಕ್ಕೆ ಹೋದಾಗ ಅಲ್ಲಿದ್ದ ಮಠದ ಇಂಜಿನಿಯರ್ ಈ ಸಂಗತಿಯ ಬಯಲು ಮಾಡಿದ್ದರು. ಈ ಸಂಬಂಧದ ಲೆಕ್ಕ ಪತ್ರಗಳು ಮಠದಲ್ಲಿವೆ. ಸರ್ಕಾರಕ್ಕೆ ಹಣ ಬಳಕೆ ಪ್ರಮಾಣ ಪತ್ರ ನೀಡಲಾಗಿದೆ ಎಂದಿದ್ದರು.

ಪುತ್ಥಳಿ ನಿರ್ಮಾಣಕ್ಕೆಂದು ಸರ್ಕಾರ ಮ್ಯಾಚಿಂಗ್ ಗ್ರಾಂಟ್ ಆಗಿ ಬಿಡುಗಡೆ ಮಾಡಲಾದ ಅನುದಾನವ ಖರ್ಚು ಮಾಡುವುದ ಬಿಟ್ಟು ಮುರುಘಾಮಠ ಬ್ಯಾಂಕ್ ನಲ್ಲಿ ಡಿಪಾಜಿಟ್ ಮಾಡಿ ಬಡ್ಡಿ ದುಡಿದುಕೊಳ್ಳಲು ಅವಕಾಶಗಳಿವೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಖಾಸಗಿ ಕಂಪನಿಗೆ ನೀಡಲಾದ ಅಡ್ವಾನ್ಸ್ ನ್ನು ಹಣ ಬಳಕೆ ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿದೆ. ಆದರೆ ಡಿಪಾಜಿಟ್ ಮೊತ್ತವ ತೋರಿಸಲಾಗಿಲ್ಲ. ಮುರುಘಾಮಠಕ್ಕೆ ನೀಡಿದ ಅನುದಾನಕ್ಕೆ ಪ್ರತಿಯಾಗಿ ಹಣ ಬಳಕೆಪ್ರಮಾಣ ಪತ್ರ ಪಡೆದುಕೊಂಡಿರುವ ಸರ್ಕಾರಿ ಅಧಿಕಾರಿಗಳು ಐದು ಕೋಟಿ ರುಪಾಯಿ ಡಿಪಾಜಿಟ್ ಮೊತ್ತದ ಉಸಾಬರಿಗೆ ಹೋಗಿಲ್ಲ. ಇದಲ್ಲದೇ ಖಾಸಗಿ ಕಂಪನಿಗೆ ಆರು ಕೋಟಿ ರುಪಾಯಿ ಅಡ್ವಾನ್ಸ್ ನೀಡಿದ್ದರೆ ಪ್ರತಿಯಾಗಿ ಅವರಿಂದ ಆ ಮೊತ್ತಕ್ಕೆ ಲೆಕ್ಕಪತ್ರಗಳ ಪಡೆಯಬೇಕು. ಅಂತಹ ಪ್ರಯತ್ನಗಳು ನಡೆದಿಲ್ಲ. ಈ ಆರು ಕೋಟಿ ರುಪಾಯಿಯ ಖಾಸಗಿ ಕಂಪನಿಯವರು ಬ್ಯಾಂಕ್ ನಲ್ಲಿಟ್ಟು ಬಡ್ಡಿ ದುಡಿಯುತ್ತಿದ್ದಾರಾ ಎಂಬ ಅನುಮಾನ ಮೂಡುತ್ತವೆ.

ಖಾಸಗಿ ಕಂಪನಿಗೆ ಆರು ಕೋಟಿ ರುಪಾಯಿ ಸರ್ಕಾರಿ ಹಣ ಕೊಟ್ಟು ಮುರುಘಾಮಠ ಕೈ ಕಟ್ಟಿ ಕುಳಿತುಕೊಳ್ಳುವಂತಿಲ್ಲ. ಸರ್ಕಾರಿ ದುಡ್ಡು ಬಳಸಲು ಪಾರದರ್ಶಕತೆ ಅಳವಡಿಕೆ ಅಗತ್ಯ. ಪುತ್ಥಳಿ ನಿರ್ಮಾಣದ ಕೆಲಸ ನಿಂತು ಹೆಚ್ಚು ಕಡಿಮೆ ಮೂರ್ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಖಾಸಗಿ ಕಂಪನಿಗೆ ಮುರುಘಾಮಠ ಅಡ್ವಾನ್ಸ್ ಯಾವಾಗ ಕೊಟ್ಟಿತೋ ಎಂಬುದು ಅಸ್ಪಷ್ಟವಾಗಿದೆ. ಮುರುಘಾಮಠದ ಆಡಳಿತದಲ್ಲಿ ಏರು ಪೇರಾಗಿದ್ದುದರಿಂದ ಕಳೆದ ಒಂದು ವರ್ಷದಿಂದ ಪುತ್ಥಳಿ ನಿರ್ಮಾಣದ ಕಾಮಗಾರಿ ನಿಂತಿದೆ ಎಂದು ಮಠದ ಅಧಿಕಾರಿಗಳು ಹೇಳುತ್ತಿದ್ದಾರೆ. ಒಟ್ಟು ಹನ್ನೊಂದು ಕೋಟಿ ರುಪಾಯಿಗೆ ಬಡ್ಡಿ ಎಷ್ಟಾಯಿತು. ಈ ಮೊತ್ತವನ್ನು ಸರ್ಕಾರಿ ಅನುದಾನವೆಂದು ಹೆಚ್ಚುವರಿಯಾಗಿ ಪರಿಗಣಿಸಲಾಗುತ್ತದೆಯೇ ಎಂಬ ಸಹಜ ಪ್ರಶ್ನೆ ಮೂಡುತ್ತವೆ.

ಮಾಜಿ ಸಚಿವ ಹೆಚ್.ಏಕಾಂತಯ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದು ಪುತ್ಥಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಹಾಗೂ ಬಳಕೆ ಬಗೆಯ ಕೂಲಂಕುಷ ವರದಿ ಕೇಳಿದ್ದಾರೆ. ಪುತ್ಥಳಿಯ ನಗದು ಪುಸ್ತಕ, ಖಾತಾ ಪುಸ್ತಕ, ಚಾಲ್ತಿ ಖಾತಾ ಪುಸ್ತಕ, ರಸೀದಿ ಪುಸ್ತಕ, ಹಣ ಸಂದಾಯ ಚೀಟಿ, ಬ್ಯಾಂಕ್ ಸ್ಟೇಟ್ ಮೆಂಟ್, ಪರ್ಚೇಜ್ ಬಿಲ್, ಸ್ಟಾಕ್ ರಿಜಿಸ್ಟರ್, ಕರಾರು ಗುತ್ತಿಗೆ ಪತ್ರ ಎಲ್ಲವನ್ನು ಕೇಳಿದ್ದಾರೆ. ಇವುಗಳ ಒದಗಿಸುವುದು ಸದ್ಯಕ್ಕೆ ಜಿಲ್ಲಾಡಳಿತಕ್ಕೆ ಸಾಹಸದ ಕೆಲಸ

ಮುರುಘಾಮಠ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಹಣ ಬಳಕೆ ಪ್ರಮಾಣ ಪತ್ರದಲ್ಲಿ ಬರೀ ಸಿಮೆಂಟ್, ಕಬ್ಬಿಣ, ಲೇಬರ್ ಪೇಮೆಂಟ್, ಮಿಸೆಲೀನಿಯಸ್ , ಶಿಲ್ಪಿಗಳಿಗೆ ಪೇಮೆಂಟ್, ಆರ್ಕಿಟೆಕ್ ಗೆ 30 ಲಕ್ಷ ಸೇರಿದಂತೆ ವಿವಿಧ ಬಾಬತ್ತುಗಳ ಪಟ್ಟಿ ಮಾಡಿ ಸಲ್ಲಿಸಲಾಗಿದೆ. ಇದಕ್ಕೆ ಚಾರ್ಟೆಡ್ ಅಕೌಂಟೆಂಟ್ ಸಹಿ ಮಾಡಿದ್ದಾರೆ. ಮೂಲ ರಸೀದಿಗಳು ಮುರುಘಾಮಠದಲ್ಲಿವೆ. ರಾಜ್ಯ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಗುರುವಾರ ತಾನೇ ಘೋಷಿಸಿದೆ. ಅದೇ ಬಸವಣ್ಣನ ಮುರುಘಾಮಠ ಬೀದಿಗೆ ತಂದು ನಿಲ್ಲಿಸಿರುವುದು ವಚನ ಲೋಕದ ಬಹುದೊಡ್ಡ ಅಣಕ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ