ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ತಾಲೂಕಿನ ಬಂಕಾಪೂರ ಪಟ್ಟಣದ ಶ್ರೀ ಹುಚ್ಚೇಶ್ವರ ಮಹಾಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಇಷ್ಠಲಿಂಗ ಮಹಾಪೂಜೆ, ರುದ್ರಪಠಣ, ಸಿದ್ಧಾಂತ ಶಿಖಾಮಣಿ ಪಾರಾಯಣ, ೨ನೇ ದಿನದ ಜನ ಜಾಗೃತಿ ಧರ್ಮಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ನನ್ನದು, ಇಲ್ಲಿಲ್ಲ ಯಾರದು ಎಂಬ ತತ್ವ ಸಿದ್ಧಾಂತದ ಮೇಲೆ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಮನುಷ್ಯ ಸ್ವರ್ಗದ ದಾರಿ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
ಬಂಕಾಪುರ ಪೊಲೀಸ್ ಠಾಣೆ ಪಿಎಸ್ಐ ನಿಂಗರಾಜ ಕರಕಣ್ಣವರ ಮಾತನಾಡಿ, ಮನುಷ್ಯನ ಜಂಜಾಟದ ಬದುಕಿಗೆ ಮಠ, ಮಂದಿರಗಳು ನೆಮ್ಮದಿ ನೀಡುವ ತಾಣಗಳಾಗಿವೆ. ಮಠಾಧೀಶರು ಸಮಾಜದಲ್ಲಿ ಧರ್ಮಬೋಧನೆಯಂತಹ ಕಾರ್ಯ ಮಾಡದೇ ಇದ್ದರೆ, ಸಮಾಜದಲ್ಲಿ ಶಾಂತಿ, ನೆಮ್ಮದಿ ಮಾಯವಾಗುತ್ತದೆ ಎಂದು ಹೇಳಿದರು.ಸಭೆಯ ಸಾನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವೀರಕ್ತಮಠದ ಶ್ರೀ ಚನ್ನವೀರ ಮಹಾ ಸ್ವಾಮಿಗಳು ಆಶೀರ್ವಚನ ನೀಡಿ, ಸಂಸ್ಕಾರವಂತ ಭಕ್ತರಿಗೆ ಮಾತ್ರ ಗುರು ಕಾರುಣ್ಯ ದೊರೆಯಲಿದೆ. ಅಂತಹ ಮಹತ್ವಪೂರ್ಣ ಕಾರ್ಯವನ್ನು ಶ್ರೀ ಹುಚ್ಚೇಶ್ವರ ಸೇವಾ ಸಮಿತಿಯವರು ಪ್ರತಿವರ್ಷ ಮಠಾಧೀಶರಿಂದ ಧರ್ಮಬೋಧನೆ ಮಾಡಿಸುವ ಮೂಲಕ ಜನರನ್ನು ಜಾಗೃತರನ್ನಾಗಿ ಮಾಡುತ್ತಿದ್ದಾರೆ. ಇಂದಿನ ಯುವಸಮೂಹ ೪ಜಿ, ೫ಜಿ ಬೆನ್ನುಹತ್ತಿ ಮಾತಾ, ಪಿತಾ, ಗುರುಗಳ ಸಂದೇಶವನ್ನು ಪಾಲಿಸದೇ ಇರುವುದು ನೋವಿನ ಸಂಗತಿಯಾಗಿದೆ. ನಮ್ಮಲ್ಲಿ ಮೊಬೈಲ್ ಸೆಟ್ ಇದೆ. ಸೊಪಾ ಸೆಟ್, ಟಿವಿ ಸೆಟ್ ಇದೆ ಹೀಗೆ ಅತ್ಯಾಧುನಿಕ ಸೌಲಭ್ಯಗಳೂ ಇದ್ದರೂ, ಮೈಂಡ್ ಮಾತ್ರ ಅಪಸೆಟ್ ಆಗಿದೆ. ಆ ಮೈಂಡ್ ರಿಫ್ರೇಶ್, ರಿಚಾರ್ಜ್ ಆಗಬೇಕಾದರೆ, ಇಂತಹ ಧರ್ಮ ಸಂದೇಶವನ್ನು ಕೇಳಿ ಮೈಗೂಡಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.