ಯಾವುದೇ ಕಾರಣಕ್ಕೂ ಡೆಂಘೀ ಬಗ್ಗೆ ಉದಾಸೀನ ಬೇಡ: ಡಾ.ಕಾಂತರಾಜು ಎಚ್ಚರಿಕೆ

KannadaprabhaNewsNetwork |  
Published : Jul 14, 2024, 01:35 AM IST
೧೩ಕೆಎಂಎನ್‌ಡಿ-೩ಮಂಡ್ಯದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಡೆಂಘೀ ಮತ್ತು ಚಿಕೂನ್‌ಗುನ್ಯಾ ರೋಗಗಳ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿ ಡಾ.ಕಾಂತರಾಜು ಮಾತನಾಡಿದರು. | Kannada Prabha

ಸಾರಾಂಶ

ಡೆಂಘೀ ವಿಷಯದಲ್ಲಿ ಉದಾಸೀನ ಮಾಡಿದರೆ ತೊಂದರೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಡೆಂಘೀ ಲಕ್ಷಣಗಳು ಕಂಡುಬಂದ ಕೂಡಲೇ ಹತ್ತಿರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆಯೂ ಇರುತ್ತದೆ ಇದರ ಸದ್ಭಳಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಡೆಂಘೀ ಪ್ರಕರಣಗಳು ದಿನೇ ದಿನೇ ಉಲ್ಬಣಿಸುತ್ತಿರುವುದರಿಂದ ಯಾರೂ ಸಹ ಉದಾಸೀನ ಮಾಡಬಾರದು. ಈ ರೋಗವನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಧಿಕಾರಿ ಡಾ.ಕಾಂತರಾಜು ಹೇಳಿದರು.

ನಗರದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಡೆಂಘೀ ಮತ್ತು ಚಿಕೂನ್‌ಗುನ್ಯಾ ರೋಗಗಳ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡೆಂಘೀ ವಿಷಯದಲ್ಲಿ ಉದಾಸೀನ ಮಾಡಿದರೆ ತೊಂದರೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಡೆಂಘೀ ಲಕ್ಷಣಗಳು ಕಂಡುಬಂದ ಕೂಡಲೇ ಹತ್ತಿರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆಯೂ ಇರುತ್ತದೆ ಇದರ ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ವಿದ್ಯಾರ್ಥಿಗಳು ಇದರ ಬಗ್ಗೆ ಮಾಹಿತಿ ಪಡೆದು ನಿಮ್ಮ ಕುಟುಂಬದವರಿಗೂ ಜಾಗೃತಿ ಮೂಡಿಸಬೇಕು ಶಾಲಾ-ಕಾಲೇಜು, ಹಾಸ್ಟೆಲ್ ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಹಳೆಯ ಟೈರು, ಖಾಲಿ ಬಾಟಲ್ ತೆಂಗಿನ ಚಿಪ್ಪುಗಳು ಸೇರಿದಂತೆ ಅನುಪಯುಕ್ತ ವಸ್ತುಗಳ ಜಾಗದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕು. ಇದರಿಂದ ಸೊಳ್ಳೆಯ ಸಂತಾನೋತ್ಪತ್ತಿ ತಡೆಗಟ್ಟಬಹುದು ಎಂದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಎಂ.ಸಿ.ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ನೂರಾರು ಜನ ಡೆಂಘೀ ಜ್ವರದಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿರುವುದಿಲ್ಲ, ಮಕ್ಕಳು, ಗರ್ಭಿಣಿಯರು, ವೃದ್ಧರಲ್ಲಿ ಹೆಚ್ಚಾಗಿ ಕಂಡುಬಂದಿದು, ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬೇಗ ರೋಗಕ್ಕೆ ತುತ್ತಾಗುತ್ತಾರೆ ಡೆಂಘೀ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಆದರೆ, ಮುಂಜಾಗ್ರತೆ ವಹಿಸಬೇಕು. ಜೊತೆಗೆ ಎಲ್ಲರ ಸಹಕಾರದಿಂದ ಹತೋಟಿಗೆ ತರಬಹುದು ಎಂದರು.

ಕಾರ್ಯಕ್ರಮದಲ್ಲಿ ಡೆಂಘೀ ಕುರಿತು ಜಾಗೃತಿ ಕರಪತ್ರ ಪ್ರದರ್ಶಿಸಿದರು. ನಂತರ ಆರೋಗ್ಯ ಸಿಬ್ಬಂದಿ ಮಾಹಿತಿ ನೀಡಿದರು. ನಗರಸಭಾ ಸದಸ್ಯೆ ಪೂರ್ಣಿಮಾ, ತಾಲೂಕು ಆರೋಗ್ಯ ಅಧಿಕಾರಿ ಡಾ.ಜವರೇಗೌಡ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ, ಆಡಳಿತ ವೈದ್ಯಾಧಿಕಾರಿ ಡಾ.ಪೂರ್ಣಿಮಾ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶ್ರೀನಿವಾಸ್, ಆರೋಗ್ಯ ನಿರೀಕ್ಷಣಾಧಿಕಾರಿ ಸೋಮಶೇಖರ್, ಹಾಸ್ಟೆಲ್ ವಾರ್ಡನ್ ಬಸವರಾಜು ಭಾಗವಹಿಸಿದ್ದರು.

PREV