ಹೊರ ಜಿಲ್ಲೆಯ ಸಂಘರ್ಷಗಳಿಂದ ಪ್ರಚೋದನೆಗೆ ಒಳಗಾಗಬೇಡಿ: ಕೃಷ್ಣಪ್ಪ

KannadaprabhaNewsNetwork |  
Published : Jun 04, 2025, 12:24 AM IST
೩ಕೆಎಂಎನ್‌ಡಿ-೪ಮಳವಳ್ಳಿ ಡಿವೈಎಸ್ಪಿ ಕಚೇರಿಯಲ್ಲಿ ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಡಿವೈಎಸ್ಪಿ ಕೃಷ್ಣಪ್ಪ ಮಾತನಾಡಿದರು. | Kannada Prabha

ಸಾರಾಂಶ

ಉದ್ದೇಶ ಪೂರ್ವಕವಾಗಿಯೇ ಕಿಡಿಗೇಡಿಗಳು ಶಾಂತಿಗೆ ಭಂಗ ತರುವಂತ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುತ್ತಾರೆ, ಪ್ರಚೋದನಕಾರಿ ಪೋಸ್ಟ್‌ಗಳು ಬಂದಾಗ ಅವುಗಳಿಗೆ ಆಸ್ಪದ ಕೊಡಬಾರದು. ಪ್ರಚೋದನಕಾರಿ ವಿಡಿಯೋ ಕಳುಹಿಸಿದ ಆರೋಪಿಗಳ ವಿರುದ್ಧ ಕಾನೂನು ಅಡಿಯಲ್ಲಿ ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಹೊರ ಜಿಲ್ಲೆಗಳಲ್ಲಿ ನಡೆಯುವ ಸಂಘರ್ಷಗಳಿಂದ ಇಲ್ಲಿನ ಹಿಂದೂ-ಮುಸ್ಲಿಂ ಸಮುದಾಯಗಳು ಪ್ರಚೋದನೆಗೆ ಒಳಗಾಗಬಾರದು, ಕಾನೂನು ಮೀರಿ ವರ್ತಿಸಿದರೆ ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿವೈಎಸ್ಪಿ ಕೃಷ್ಣಪ್ಪ ಎಚ್ಚರಿಸಿದರು.

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ದೇಶ ಪೂರ್ವಕವಾಗಿಯೇ ಕಿಡಿಗೇಡಿಗಳು ಶಾಂತಿಗೆ ಭಂಗ ತರುವಂತ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುತ್ತಾರೆ, ಪ್ರಚೋದನಕಾರಿ ಪೋಸ್ಟ್‌ಗಳು ಬಂದಾಗ ಅವುಗಳಿಗೆ ಆಸ್ಪದ ಕೊಡಬಾರದು. ಪ್ರಚೋದನಕಾರಿ ವಿಡಿಯೋ ಕಳುಹಿಸಿದ ಆರೋಪಿಗಳ ವಿರುದ್ಧ ಕಾನೂನು ಅಡಿಯಲ್ಲಿ ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ತ್ಯಾಗ-ಬಲಿದಾನದ ಸಂಕೇತವಾಗಿ ಆಚರಿಸುವ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದರ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಾಗುವುದು, ಹಬ್ಬದ ಸಂದರ್ಭದಲ್ಲಿ ಕೆಲವೊಂದು ಘಟನೆಗಳು ಸಂಭವಿಸಿದರೆ ತಕ್ಷಣದಲ್ಲಿಯೇ ಪೊಲೀಸರಿಗೆ ಮಾಹಿತಿ ನೀಡಬೇಕೇ ಹೊರತು ಕಾನೂನಿಗೆ ಮೀರಿ ವರ್ತನೆ ತೋರಬಾರದೆಂದು ಸಲಹೆ ಕೊಟ್ಟರು.

ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಮುಖ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ಘಟನೆಗಳು ನಡೆದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ಬಕ್ರೀದ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದರು.

ಸಿಪಿಐ ಬಿ.ಜಿ.ಮಹೇಶ್‌ಕುಮಾರ್ ಮಾತನಾಡಿ, ಕಾಯ್ದೆಯ ಇತಿಮಿತಿಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಬೇಕು, ಪ್ರಾರ್ಥನೆ ಸೇರಿದಂತೆ ನಿಮ್ಮ ಸಂಪ್ರದಾಯಗಳಿಗೆ ಯಾವುದೇ ಅಡೆತಡೆ ಇಲ್ಲದೇ ಮಾಡಬಹುದು. ಆದರೆ, ಕಾನೂನು ಸುವ್ಯವಸ್ಥೆ ಕದಡದಂತೆ ಎಚ್ಚರವಹಿಸಬೇಕು. ಜಿಲ್ಲೆಯಲ್ಲಿ ಹಿಂದು, ಮುಸ್ಲಿಂ ಸಮುದಾಯ ಯಾವುದೇ ಕೋಮುಗಲಭೆ ಇಲ್ಲದೇ ಸಹೋದರತೆ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ ಎಂದರು.

ಇನ್ಸ್‌ಪೆಕ್ಟರ್ ರವಿಕುಮಾರ್ ಮಾತನಾಡಿ, ಹಬ್ಬ ಆಚರಣೆಯಲ್ಲಿ ಕೆಲವೊಂದು ಸಂದರ್ಭವನ್ನು ಕೆಲವು ಯುವಕರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುವುದರಿಂದ ಪೊಲೀಸ್ ಇಲಾಖೆ ಎಚ್ಚರವಹಿಸಲಾಗುವುದು, ಪ್ರತಿಯೊಂದು ಧರ್ಮದವರು ಆಚರಿಸುವ ಹಬ್ಬವನ್ನು ಸರ್ವ ಧರ್ಮಿಯರು ಗೌರವಿಸಬೇಕು, ಆಗ ಮಾತ್ರ ಸೌಹಾರ್ಧತೆಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಸಭೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ರವಿಕುಮಾರ್, ಪ್ರಕಾಶ್ ಸೇರಿದಂತೆ ಮದ್ದೂರು, ಮಳವಳ್ಳಿ ತಾಲೂಕಿನ ಹಿಂದೂ ಮುಸ್ಲಿಂ ಮುಖಂಡರು ಹಾಜರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ