ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್‌ನವರು ನೀಡುತ್ತಿರುವ ಸುಳ್ಳು ಭರವಸೆಗಳನ್ನು ನಂಬಬೇಡಿ ಎಂದು ಮಂಡ್ಯ ಲೋಕಸಭೆ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಜೆಡಿಎಸ್-ಬಿಜೆಪಿ ಲೋಕಸಭಾ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ನವರು ತಾಲೂಕಿಗೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಅವೆಲ್ಲವೂ ಡೂಪ್ ಅಷ್ಟೇ. ಕೇಂದ್ರ ಸರ್ಕಾರದೊಂದಿಗೆ ಜಗಳ ಮಾಡಿಕೊಂಡಿರುವ ಇವರು, ಪ್ರಣಾಳಿಕೆಯಲ್ಲಿರುವ ಯೋಜನೆಗಳ ಜಾರಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು. ‘ನಮ್ಮ ನೀರು ನಮ್ಮ ಹಕ್ಕು’ ಹೆಸರಿನಲ್ಲಿ ಹೋರಾಟ ಮಾಡಿದರು. ನನಗೂ ಪೇಪರ್-ಪೆನ್ನು ಕೊಡಿ ಅಂದರು. ಇವರನ್ನು ನಂಬಿ ಜನರು ಅಧಿಕಾರ ಕೊಟ್ಟರು. ಅಧಿಕಾರಕ್ಕೆ ಬಂದ ಮೇಲೆ ‘ನಮ್ಮ ನೀರು ತಮಿಳುನಾಡಿನ ಹಕ್ಕು’ ಎಂದು ನೆರೆ ರಾಜ್ಯಕ್ಕೆ ನೀರು ಹರಿಸಿದರು. ಈಗ ಮೇಕೆದಾಟು ಅಣೆಕಟ್ಟು ಕಟ್ಟಲು ಅನುಮತಿ ಕೊಡಿಸಿ ಎಂದು ನಮ್ಮನ್ನು ಕೇಳುತ್ತಿದ್ದಾರೆ. ಹಾಗಾದರೆ ಇವರು ಅಧಿಕಾರದಲ್ಲೇಕಿರಬೇಕು. ಅಧಿಕಾರ ಬಿಟ್ಟು ಕೆಳಗಿಳಿಯಲಿ. ಇವರಿಂದ ಮಾಡಲಾಗದ್ದನ್ನು ನಾವು ಮಾಡಿ ತೋರಿಸುತ್ತೇವೆ ಎಂದು ಸವಾಲೆಸೆದರು.
ಮೋದಿ ಮತ್ತೆ ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಕೊಡುವುದಾಗಿ ಮೋದಿ ನನಗೆ ಭರವಸೆ ನೀಡಿದ್ದಾರೆ. ಕಾವೇರಿ ವಿಚಾರದಲ್ಲಿ ನಾವು ನ್ಯಾಯ ಕೊಡಿಸದಿದ್ದರೆ ಮತ್ತೆಂದೂ ನಿಮ್ಮ ಮುಂದೆ ಮತ ಕೇಳೋಕೆ ಬರುವುದಿಲ್ಲ. ದೇವೇಗೌಡರ ಹೋರಾಟದ ಫಲವಾಗಿ 14.75 ಟಿಎಂಸಿ ಅಡಿ ಹೆಚ್ಚುವರಿ ನೀರು ನಮಗೆ ಸಿಕ್ಕಿದೆ. ನನ್ನ ಮೇಲೆ ಯಾವುದೇ ಸಂಶಯ ಇಟ್ಟುಕೊಳ್ಳಬೇಡಿ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನನ್ನ ಜೀವವನ್ನು ಮುಡಿಪಾಗಿಡುತ್ತೇನೆ ಎಂದು ಭರವಸೆ ನೀಡಿದರು.ಈ ಬಾರಿ ಚುನಾವಣೆಯಲ್ಲಿ ನಿಲ್ಲಬಾರದು ಎಂದುಕೊಂಡಿದ್ದೆ. ದೆಹಲಿ ನಾಯಕರ ಸಲಹೆಯಂತೆ ಮಂಡ್ಯದಲ್ಲಿ ಸ್ಪರ್ಧಿಸಿದ್ದೇನೆ. ಹಾಸನ ಜನ್ಮಕೊಟ್ಟ ಜಿಲ್ಲೆ, ರಾಜಕಾರಣದಲ್ಲಿ ಜನ್ಮ ಕೊಟ್ಟಿದ್ದು ರಾಮನಗರ, ಮಂಡ್ಯ ಜಿಲ್ಲೆ.
ಕುಮಾರಸ್ವಾಮಿ ಕೇಂದ್ರದಲ್ಲಿ ಕೃಷಿ ಸಚಿವರಾಗಬೇಕು ಎಂಬ ಕೂಗಿದೆ. ನಾನು ಮಂಡ್ಯ ಜಿಲ್ಲೆ ಮಾತ್ರವಲ್ಲ, ರಾಜ್ಯದ ರೈತರ ಬದುಕು ಏನಾಗಿದೆ ಎನ್ನುವುದನ್ನೂ ನಿತ್ಯ ನೋಡುತ್ತಿದ್ದೇನೆ. ಅವರ ಬದುಕನ್ನು ರಕ್ಷಣೆ ಮಾಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದರು.ಜನರೇ ನಾನು ಸಂಪಾದಿಸಿದ ಆಸ್ತಿ:
ಜಿಲ್ಲೆಗೆ ಕುಮಾರಸ್ವಾಮಿ ಕೊಟ್ಟ ಕೊಡುಗೆ ಏನು ಎಂದು ಕಾಂಗ್ರೆಸ್‌ನವರು ಪದೇ ಪದೇ ಕೇಳುತ್ತಾರೆ. ಕಾಂಗ್ರೆಸ್‌ನವರು ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು? ಕಾವೇರಿ ವಿಚಾರದಲ್ಲಿ ಕೊಡುಗೆ ಏನು ಕೊಟ್ಟಿರಿ? ರೈತರು ಸಂಕಷ್ಟಕ್ಕೆ ಸಿಲುಕಿದಾಗೆಲ್ಲಾ ನಾನು ಅವರ ನೆರವಿಗೆ ಧಾವಿಸಿದ್ದೇನೆ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರಿಗೆ ಸಾಂತ್ವನ ಹೇಳಲಿಲ್ಲ. ಮೊದಲು ರೈತರಿಗೆ ಸಾಂತ್ವನ ಹೇಳಿದ್ದು ದೇವೇಗೌಡರು ಮತ್ತು ನಾನು. ನಾನು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆ, ಲಕ್ಷಾಂತರ ರು. ಬಾಡಿಗೆ ಬರುವ ಕಟ್ಟಡಗಳನ್ನು ಕಟ್ಟಲಿಲ್ಲ. ಚೆನ್ನಾಂಬಿಕಾ ಫಿಲಂಸ್ ಹಂಚಿಕೆದಾರನಾಗಿ ಅದರಿಂದ ಬಂದ ಹಣದಲ್ಲಿ ಬಿಡದಿ ಬಳಿ ತೋಟ ಮಾಡಿದ್ದೇನೆ. ನಾನು ರಾಜಕಾರಣಕ್ಕೆ ಬಂದ ನಂತರ ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಂಡಿಲ್ಲ. ಹಣವನ್ನೂ ಗಳಿಸಲಿಲ್ಲ. ನಾನು ಸಂಪಾದಿಸಿದ ಆಸ್ತಿ ಜನರು ಮಾತ್ರ ಎಂದು ತಿಳಿಸಿದರು.ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ ಸಿದ್ದರಾಮಯ್ಯ, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ವಹಿಸಿದ್ದರು. ಮಾಜಿ ಸಚಿವರಾದ ಬಂಡೆಪ್ಪ ಕಾಂಶಂಪುರ, ಸಿ.ಎಸ್.ಪುಟ್ಟರಾಜು ಮುಖಂಡರಾದ ಡಾ.ಎಚ್.ಎನ್.ರವೀಂದ್ರ, ಕೆ.ಎಸ್,ನಂಜುಂಡೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಕೆ.ಎಸ್.ಸಚ್ಚಿದಾನಂದ ಸೇರಿ ಅನೇಕ ಮುಖಂಡರು ಭಾಗವಹಿಸಿದ್ದರು.