ಮಾದಕ ವ್ಯಸನಿಗಳಾಗಿ ಕುಟುಂಬ ಬೀದಿಗೆ ತರಬೇಡಿ

KannadaprabhaNewsNetwork | Published : Mar 27, 2025 1:08 AM

ಸಾರಾಂಶ

ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮದ್ಯ ಮತ್ತು ಮಾದಕಗಳ ದುಷ್ಪರಿಣಾಮಗಳು ಕುರಿತು ವಿಚಾರ ಸಂಕಿರಣವನ್ನು ಮಾನಸಿಕ ತಜ್ಞ ಡಾ.ಮಂಜುನಾಥ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಾದಕ ವ್ಯಸನಿಗಳಾಗಿ ಕುಟುಂಬಗಳ ಬೀದಿಗೆ ತರಬೇಡಿ. ಕ್ಷಣಿಕ ಸುಖ ಕೊಡುವ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯವೂ ಹಾಳಾಗುತ್ತದೆ ಎಂದು ಜಿಲ್ಲಾಸ್ಪತ್ರೆಯ ಮಾನಸಿಕ ತಜ್ಞ ಡಾ.ಮಂಜುನಾಥ್ ಹೇಳಿದರು.

ನಗರದ ಕುಂಚಿಗನಾಳ್ ಬಳಿಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮದ್ಯ ಮತ್ತು ಮಾದಕಗಳ ದುಷ್ಪರಿಣಾಮಗಳು ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ವಸ್ತುಗಳು 5 ರಿಂದ 10 ನಿಮಿಷಗಳು ಮಾತ್ರ ಖುಷಿ ಕೊಡುತ್ತವೆ. ಮಾದಕ ಸೇವನೆಗೆ ಒಮ್ಮೆ ಒಳಗಾದರೆ, ಅದರಿಂದ ಹೊರಬರುವುದು ಕಷ್ಟ. ಇದು ಮನುಷ್ಯನ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರಲಿದೆ. ಇವುಗಳ ಸೇವನೆಯಿಂದ ಮೆದುಳಿನಲ್ಲಿ ಅಸ್ಪಷ್ಟತೆ ಉಂಟಾಗುತ್ತದೆ. ದೇಹದ ಬೇರೆ ಬೇರೆ ಅಂಗಾಂಗಗಳು ಸಹ ನಿಧಾನಕ್ಕೆ ಹಾನಿಯಾಗುತ್ತವೆ. ತನ್ನ ದೇಹದ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ಮದ್ಯ ಮತ್ತು ಮಾದಕ ಈ ಎರಡು ಬೆಂಕಿಯ ಕೆನ್ನಾಲಿಗೆ ಹಾಗೂ ದುಷ್ಟರ ಕೂಟ ಇದ್ದಂತೆ. ಇವೆರಡರಲ್ಲಿ ಪ್ರವೇಶ ಮಾತ್ರ ಇರುತ್ತದೆಯೇ ಹೊರತು ಅಲ್ಲಿಂದ ನಿರ್ಗಮನ ಇರುವುದಿಲ್ಲ. ಆರೋಗ್ಯಪೂರ್ಣ ಹಾಗೂ ಸದೃಢವಾದ ಸಮಾಜ ನಿರ್ಮಾಣವಾಗಬೇಕಾದರೆ ಯುವ ಜನತೆ ದುಶ್ಚಟಗಳಿಂದ ದೂರ ಉಳಿಯಬೇಕು. ಈ ನಿಟ್ಟಿನಲ್ಲಿ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಮಾದಕ ವ್ಯಸನ ಎಂದ ತಕ್ಷಣ ನಮಗೆ ಸಾಮಾನ್ಯವಾಗಿ ಮದ್ಯಪಾನ, ತಂಬಾಕು ಜಗಿಯುವುದು ನೆನಪಿಗೆ ಬರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಸ್ನೇಹಿತರೊಡನೆ ಗುಂಪುಗೂಡಿ ಕುತೂಹಲ ಮತ್ತು ಉತ್ಸುಕತೆಗಾಗಿ ಬೀಡಿ, ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದನ್ನು ಪ್ರಾರಂಭಿಸುತ್ತಾರೆ. ಇದರಿಂದ ಸಿಗುವ ಮಜಾ ಮೋಜು ದಿನದಿಂದ ದಿನಕ್ಕೆ ಹೆಚ್ಚುತ್ತದೆ. ಮಾದಕ ದ್ರವ್ಯ ಇಲ್ಲದಿದ್ದರೆ ನಡೆಯುವುದೇ ಇಲ್ಲಾ ಎನ್ನುವ ಪರಿಸ್ಥಿತಿ ಉಂಟಾಗಿ ಕಾಲೇಜಿನಲ್ಲಿ ಪಠ್ಯದ ಕಡೆ ಗಮನವೇ ಇಲ್ಲದಂತಾಗಿ ಕಲಿಯುವ ಚಟುವಟಿಕೆ ಹಾಗೂ ಶಕ್ತಿ ಕ್ಷೀಣಿಸುತ್ತದೆ ಎಂದರು.

ಇದರ ಜತೆಗೆ ಕುಟುಂಬದಲ್ಲಿ ಪೋಷಕರು ನಿಮ್ಮ ಬಗ್ಗೆ ಲಕ್ಷ್ಯ ಹರಿಸುವುದಿಲ್ಲ. ಬೇಡವಾದ ಜೀವನ ನಿಮ್ಮದಾಗುತ್ತದೆ. ಈಗಾಗಲೇ ಮಾದಕ ದ್ರವ್ಯ ಸೇವಿಸುತ್ತಿದ್ದರೆ ಬಿಡುವ ಪ್ರಯತ್ನ ನಡೆಸಿ. ವ್ಯಾಯಾಮ, ದ್ಯಾನ, ಯೋಗ, ಪ್ರಾಣಾಯಾಮಗಳ ನಿರಂತರ ಅಭ್ಯಾಸದಿಂದ ಸಕಾರಾತ್ಮಕ ಚಿಂತನೆಗಳು ಬರುತ್ತದೆ ಎಂದು ಸಲಹೆ ನೀಡಿದರು. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲ ಬಿ.ಎಸ್.ಸುಹಾಸ್, ಆಡಳಿತಾಧಿಕಾರಿ ಕೆ.ಪಿ.ಕಾಟೇಗೌಡ, ಮಾನಸಿಕ ಆರೋಗ್ಯದ ಕೌನ್ಸಿಲರ್ ಡಾ.ಶ್ರೀಧರ್ ಇದ್ದರು.

Share this article