ಕನ್ನಡಪ್ರಭ ವಾರ್ತೆ ಮಂಡ್ಯ
ರಾಜಪ್ರಭುತ್ವವನ್ನು ಪ್ರಜಾಪ್ರಭುತ್ವಕ್ಕೆ ಹೋಲಿಕೆ ಮಾಡುವ ಅಪ್ರಜ್ಞಾಪೂರ್ವಕ ಆಲೋಚನೆಗಿಳಿಯದೇ ರಾಜರಾದವರು ಪ್ರಜೆಗಳ ಪರವಾದ ಆಲೋಚನೆಯೊಂದಿಗೆ ಆಡಳಿತ ನಡೆಸಿದ ರೀತಿಯನ್ನು ಅರಿತು ಈಗ ಆಡಳಿತ ನಡೆಸುವವರನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಬೆಂಗಳೂರು ಕೇಂದ್ರ ವಲಯ ಐಜಿ ಬಿ.ರವಿಕಾಂತೇಗೌಡ ಸಲಹೆ ನೀಡಿದರು.ನಗರದ ರೈತ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಸಂಘದ ವತಿಯಿಂದ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಲ್ವಡಿ ಅವರನ್ನು ಕುರಿತು ಮಾತನಾಡಿ, ರಾಜರ ಆಳ್ವಿಕೆಯನ್ನು ಹೊಗಳುವ ಭರದಲ್ಲಿ ರಾಜಪ್ರಭುತ್ವವನ್ನು ಒಪ್ಪಿಕೊಳ್ಳದೆ ರಾಜರಾದವರು ಪ್ರಜೆಗಳ ಪರವಾಗಿ, ಸಾಮಾಜಿಕ ನ್ಯಾಯದ ಪರವಾಗಿದ್ದರು ಎಂಬುದನ್ನು ನಾವು ಅರಿತುಕೊಳ್ಳಬೇಕು. ನಾಲ್ವಡಿ ಅವರು ಒಬ್ಬ ಜನಕೇಂದ್ರಿತ ಆಡಳಿತಗಾರರಾಗಿದ್ದರು. ಜೊತೆಗೆ ಸಾಮಾಜಿಕ ಬಂಡಾಯಗಾರರೂ ಆಗಿದ್ದರು ಎಂದು ಬಣ್ಣಿಸಿದರು.
ನಾಲ್ವಡಿ ಅವರ ಸಾಧನೆಗಳು ವರ್ಷಕ್ಕೆ 50ಕ್ಕೂ ಮಿಗಿಲಾಗಿರುತ್ತಿದ್ದವು. ಪ್ರಜಾಪ್ರತಿನಿಧಿ ಸಭೆಯ ಮೂಲಕ ಪ್ರಜಾಪ್ರಭುತ್ವವನ್ನು ಪರಿಚಯಿಸಿದರಲ್ಲದೆ, ಮೇಲ್ಮನೆ, ಕೆಳಮನೆಯ ಪರಿಕಲ್ಪನೆಯನ್ನು ಹುಟ್ಟು ಹಾಕಿದವರು. ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದರು. ಶಾಲೆಗಳಲ್ಲಿ ಅಸ್ಪೃಶ್ಯತೆಯನ್ನು ದೂರ ಮಾಡಿದರು. ಸಹಕಾರ ಸಂಘಗಳನ್ನು ರೈತರ ಬೆನ್ನಲುಬಾಗಿಸಿದರು ಎಂದು ವಿವರಿಸಿದರು.ನದಿಯ ನೀರು ವ್ಯರ್ಥವಾಗಿ ಸಮುದ್ರ ಸೇರುವುದನ್ನು ತಪ್ಪಿಸಲು ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಿಸಿದರು. ಅದಕ್ಕೆ ಹಣಕಾಸಿನ ಕೊರತೆ ಎದುರಾದಾಗ ಅರಮನೆಯನ್ನು, ಸಂಸ್ಥಾನದ ಆಸ್ತಿಯನ್ನು ಮಾರುವುದಕ್ಕೆ ಮುಂದಾದ ಸಮಯದಲ್ಲಿ ಅವರ ತಾಯಿ ತಮ್ಮಲ್ಲಿದ್ದ ಅಮೂಲ್ಯ ಚಿನ್ನಾಭರಣಗಳನ್ನು ಮಾರಾಟ ಮಾಡಲು ಉದಾರವಾಗಿ ನೀಡಿದರು. ಅದರಿಂದ ಬಂದ ಹಣದಿಂದ ಆಣೆಕಟ್ಟೆ ಪೂರ್ಣಗೊಳಿಸುವ ಮೂಲಕ ರೈತರ ಬದುಕನ್ನು ಹಸನಾಗಿಸಿದ ಮಹಾಪುರುಷ ಎಂದು ಬಣ್ಣಿಸಿದರು.
ನಾಲ್ವಡಿ ಅವರಿಗೆ ಪ್ರತಿಯೊಂದು ಕೆಲಸದಲ್ಲೂ ಅವರ ಬೆನ್ನೆಲುಬಾಗಿ ನಿಂತಿದ್ದವರು ಕಂಠೀರವ ನರಸಿಂಹರಾಜದತ್ತ ಒಡೆಯರ್. ಅವರಿಗೆ ಆಡಳಿತದಲ್ಲಿ ಸಲಹೆ-ಮಾರ್ಗದರ್ಶನ ಮಾಡುತ್ತಿದ್ದರು. ಅವರಿಬ್ಬರ ನಡುವಿನ ಬಾಂಧವ್ಯ ಬಿಡಿಸಲಾಗದ ಬೆಸುಗೆಯಂತಿತ್ತು. ಇದೇ ಕಾರಣದಿಂದಲೋ ಏನೋ ಕಂಠೀರವ ನರಸಿಂಹರಾಜದತ್ತ ಒಡೆಯರ್ ಮರಣಹೊಂದಿದ ಏಳೇ ತಿಂಗಳಲ್ಲಿ ನಾಲ್ವಡಿ ಅವರೂ ಮೃತಪಟ್ಟರು ಎಂದು ಹೇಳಿದರು.ಪ್ರಶಸ್ತಿ ಪ್ರದಾನ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ಕೆಂಪೇಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸರಿಸಾಟಿಯಾದ ಆಡಳಿತಗಾರರು ಮತ್ತೊಬ್ಬರಿಲ್ಲ. ಪ್ರಜಾಪ್ರಭುತ್ವ ಹೇಗಿರಬೇಕು ಎನ್ನುವುದನ್ನು ನಾಲ್ವಡಿ ಅವರು ತಮ್ಮ ಆಡಳಿತದ ಮೂಲಕ ತೋರಿಸಿಕೊಟ್ಟರು. ಆಸಕ್ತಿ ಮತ್ತು ಶ್ರದ್ಧೆ ವಹಿಸಿ ಅಭಿವೃದ್ಧಿ ಕೆಲಸ ಮಾಡಿದರು. ರಾಜರಾಗಿ ಜೀವನ ನಡೆಸದೆ ಜನರಿಗಾಗಿ ಜೀವನವನ್ನು ತ್ಯಾಗ ಮಾಡಿದವರು ಎಂದು ವರ್ಣಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಬಡತನದ ಬೇಗೆಯಲ್ಲಿ ಬೆಂದ ಪ್ರತಿಭೆಗಳನ್ನುಸಂಗೀತ ಲೋಕಕ್ಕೆ ಪರಿಚಯಿಸಿದ ಹಂಸಲೇಖ ನಿಜವಾಗಿಯೂ ನಾದಬ್ರಹ್ಮ. ದೇಶಿ ಸಂಗೀತ ಪ್ರತಿಭೆಗಳನ್ನು ನಾಡಿಗೆ ಕೊಡುಗೆಯಾಗಿ ನೀಡುತ್ತಿರುವ ಅವರಿಗೆ ನಾಲ್ವಡಿ ಹೆಸರಿನ ಪ್ರಶಸ್ತಿ ದೊರಕುತ್ತಿರುವುದು ಈ ಜಿಲ್ಲೆಯ ಸೌಭಾಗ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ದಂಪತಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿವ್ಯ ಸಾನ್ನಿಧ್ಯವನ್ನು ಕೊಮ್ಮೇರಹಳ್ಳಿ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸಿದ್ದರು. ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ವಿ.ನಾಗರಾಜ್ ಭೈರಿ, ತಗ್ಗಹಳ್ಳಿ ವೆಂಕಟೇಶ್, ಪ್ರೊ.ಶಂಕರೇಗೌಡ, ಪಿ.ಲೋಕೇಶ್ ಚಂದಗಾಲು, ಹೆಚ್.ಬಿ.ನಾಗಪ್ಪ, ವಿನಯ್‌ಕುಮಾರ್, ನಾಗರತ್ನ ಇತರರಿದ್ದರು.