ಶಿವಮೊಗ್ಗ: ಜಾತಿ ಜನಗಣತಿ ಹಿಂದೂ ಸಮಾಜ ಒಡೆಯುತ್ತಿದೆ ಇದರಿಂದ ಕಾಂಗ್ರೆಸ್ ಸರ್ಕಾರ ಪತನ ಆದರೂ ಆಶ್ಚರ್ಯ ಇಲ್ಲ ಎಂದು ಹೇಳಿದ್ದೆ. ಹಿಂದೂ ಸಮಾಜ ಒಡೆಯುವ ಪ್ರಯತ್ನ ಯಾರೇ ನಡೆಸಿದರೂ ಯಶಸ್ವಿ ಆಗಲ್ಲ. ಜಾತಿ ಗಣತಿ ಆರಂಭಿಸಿದರೆ ಸಿಎಂ ಸಿದ್ದರಾಮಯ್ಯ ಅವರು ಕುರ್ಚಿ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಹಿಂದೂ ಸಮಾಜವನ್ನು ಛಿದ್ರಗೊಳಿಸಲು ಜಾತಿ ಗಣತಿ ನೆಪದಲ್ಲಿ ಸಿದ್ದರಾಮಯ್ಯ 331 ಹೊಸ ಜಾತಿಗಳನ್ನು ಸೃಷ್ಟಿಸಿದರು. ಈಗ ಸಚಿವ ಸಂಪುಟದ ಸದಸ್ಯರಿಗೆ ಅದರ ಅಡ್ಡಪರಿಣಾಮ ಅರ್ಥವಾಗಿದೆ. ಗಣತಿ ವಿರುದ್ಧ ರಾಜ್ಯದ ಇತಿಹಾಸದಲ್ಲೇ ನಡೆಯಬಾರದ ವಿದ್ಯಮಾನ ನಡೆದಿರುವುದು ಈಗ ಸಿದ್ದರಾಮಯ್ಯ ಒಬ್ಬ ಶಕ್ತಿ ಹೀನ ಮುಖ್ಯಮಂತ್ರಿ ಎಂಬುದನ್ನು ಸಾಬೀತುಪಡಿಸಿದೆ. ಈ ಹಿಂದೆ ಸಿದ್ದರಾಮಯ್ಯ 165 ಕೋಟಿ ರು.ವೆಚ್ಚ ಮಾಡಿ ಕಾಂತರಾಜ್ ವರದಿ ಸಿದ್ಧಪಡಿಸಿದ್ದರು. ಎಂತಹ ಪರಿಸ್ಥಿತಿ ಬಂದರೂ ಅದನ್ನು ಜಾರಿಗೊಳಿಸಿಯೇ ಸಿದ್ಧ ಎಂದು ಗುಡುಗಿದ್ದರು. ಸಿಎಂ ಅಂದಿನ ಶಕ್ತಿಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಬಗ್ಗಿತ್ತು. ಆದರೆ ನಂತರ ದೆಹಲಿಗೆ ಹೋಗಿ ಹಿಂತಿರುಗಿದ ಬಳಿಕ ಏಕಾಏಕಿ ಕಾಂತರಾಜ್ ವರದಿ ಜಾರಿಯ ಬಗ್ಗೆ ಮೌನಕ್ಕೆ ಶರಣಾದರು. 165 ಕೋಟಿ ರು. ವೆಚ್ಚದ ವರದಿಗೆ ಬೆಂಕಿ ಇಟ್ಟರು. ಆ ವರದಿಯನ್ನು ಜಾರಿ ಮಾಡದೇ ಬಿಡುವುದಿಲ್ಲ ಎಂದು ಹೇಳಿ ಕೊನೆಗೆ ಮಾತು ತಪ್ಪಿದರು ಎಂದು ವ್ಯಂಗ್ಯವಾಡಿದರು.ಈಗ ಹಠ ಹಿಡಿದು ಜಾತಿ ಗಣತಿಯನ್ನು ಮಾಡಲು ಸಿದ್ದರಾಮಯ್ಯ ಮುಂದಾಗಿದ್ದೇ ಆದಲ್ಲಿ ಅವರು ಮುಖ್ಯಮಂತ್ರಿ ಖುರ್ಚಿ ಕಳೆದುಕೊಳ್ಳುವುದು ಗ್ಯಾರಂಟಿ. ಈಗ 420 ಕೋಟಿ ರು. ವೆಚ್ಚದಲ್ಲಿ ಹೊಸ ಜಾತಿ ಗಣತಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸೆ.22ರಿಂದ ಅ.7ರವರೆಗೆ ಗಣತಿ ನಡೆಯಲಿದೆ ಎಂದಿದ್ದಾರೆ. ಪ್ರತಿ ಜಾತಿಗೂ ಕ್ರಿಶ್ಚಿಯನ್ ಧರ್ಮ ಸೇರಿಸಲಾಗಿದೆ. ಇದನ್ನು ಹಿಂದೂ ಸಮಾಜದವರು ಯಾರೂ ಒಪ್ಪುವುದಿಲ್ಲ. ಮತ್ತೆ ಈ ಆರ್ಥಿಕ ಹಾನಿ ಬೇಡ ಎಂದ ಅವರು, ಸಂಪುಟದ ಸಚಿವರೇ ಈಗಿನ ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ. ಆ ಎಲ್ಲ ಹಿಂದೂ ಪರ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತ ಬಳಗದ ಅಧ್ಯಕ್ಷ ಕೆ.ಇ.ಕಾಂತೇಶ್, ಪ್ರಮುಖರಾದ ಈ.ವಿಶ್ವಾಸ್, ನಕುಲ, ಮೋಹನ್ ಇದ್ದರು. ಸಚಿವ ಮಧುಬಂಗಾರಪ್ಪನವರಿಗೆ ಅಭಿನಂದನೆಶಿವಮೊಗ್ಗ ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ 6.50 ಕೋಟಿ ರು. ಬಿಡುಗಡೆ ಮಾಡಿದೆ ಎಂದು ಸಚಿವ ಮಧುಬಂಗಾರಪ್ಪ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಇದು ಕೇವಲ ಆದೇಶವಾಗಿ ಉಳಿಯಬಾರದು, ತಕ್ಷಣ ಅನುಷ್ಠಾನಕ್ಕೆ ಬರಬೇಕು. ಈ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರಿಗೆ ಆಸಕ್ತಿ ಇದೆ. ಸಂಸದ ಬಿ.ವೈ.ರಾಘವೇಂದ್ರ ಅವರು ಸಹಕರಿಸಬೇಕು. ಆರೋಪ ಪ್ರತ್ಯಾರೋಪ ಮಾಡಿಕೊಳ್ಳುವುದರಲ್ಲಿ ಯಾವುದೇ ಲಾಭವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.