ಈ ಬಾರಿ ಬಜೆಟ್‌ನಲ್ಲಿ ದಲಿತ ಕಲ್ಯಾಣ ಹಣ ಖೋತಾ ಮಾಡಬೇಡಿ: ಎನ್‌.ರವಿ ಕುಮಾರ್‌

KannadaprabhaNewsNetwork | Published : Mar 2, 2025 1:16 AM

ಸಾರಾಂಶ

ಈ ಬಾರಿ ಮಾ.7ರಂದು ಸಿಎಂ ಮಂಡಿಸಲಿರುವ ಬಜೆಟ್‌ನಲ್ಲಿ 14 ಸಾವಿರ ಕೋಟಿ ರು.ಗೂ ಹೆಚ್ಚಿನ ಮೊತ್ತವನ್ನು ಕಡಿತಗೊಳಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಈ ಬಾರಿಯೂ ದಲಿತ, ಹಿಂದುಳಿದ ವರ್ಗಗಳಿಗೆ ರಾಜ್ಯ ಸರ್ಕಾರದ ಭಾರಿ ಅನ್ಯಾಯ ಆಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿ ಕುಮಾರ್‌ ಮಂಗಳೂರಿನಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಎಸ್‌ಸಿ ಎಸ್‌ಟಿ ಹಾಗೂ ದಲಿತರ ಉದ್ಧಾರಕ್ಕೆ ಮೀಸಲಿಡಬೇಕಾದ ಮೊತ್ತದಲ್ಲಿ ಈ ಬಾರಿ ಮಾ.7ರಂದು ಸಿಎಂ ಮಂಡಿಸಲಿರುವ ಬಜೆಟ್‌ನಲ್ಲಿ 14 ಸಾವಿರ ಕೋಟಿ ರು.ಗೂ ಹೆಚ್ಚಿನ ಮೊತ್ತವನ್ನು ಕಡಿತಗೊಳಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಈ ಬಾರಿಯೂ ದಲಿತ, ಹಿಂದುಳಿದ ವರ್ಗಗಳಿಗೆ ರಾಜ್ಯ ಸರ್ಕಾರದ ಭಾರಿ ಅನ್ಯಾಯ ಆಗಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿ ಕುಮಾರ್‌ ಹೇಳಿದ್ದಾರೆ.

ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಕೇಂದ್ರ ಮಾಜಿ ಸಂಸದ, ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ಹಿಂದುಳಿದ ವರ್ಗದ ಅಭಿವೃದ್ಧಿಗೆ ಹಿಂದಿನಂತೆ ಹಣ ಕಾದಿರಿಸಬೇಕು, ಆ ಬಳಿಕ ಯಾವುದೇ ಕಾರಣಕ್ಕೂ ಅನುದಾನ ಕಡಿತಗೊಳಿಸಬಾರದು ಎಂದು ಆಗ್ರಹಿಸಿ ರಾಜ್ಯವ್ಯಾಪಿ ಬಿಜೆಪಿ ತಂಡಗಳಲ್ಲಿ ಅಭಿಯಾನ ನಡೆಸುತ್ತಿದೆ. ಈ ಅಭಿಯಾನದ ಭಾಗವಾಗಿ ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದು ರವಿ ಕುಮಾರ್‌ ಹೇಳಿದರು.

ಬಡವರಿಗಾಗಿ ಮೀಸಲಿಟ್ಟಕೋಟ್ಯಂತರ ಮೊತ್ತವನ್ನು ಈಗಾಗಲೇ ದುರ್ಬಳಕೆ ಮಾಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟನಿಧಿಯನ್ನು ಮತ್ತೆ ದುರ್ಬಳಕೆ ಮಾಡಲು ಬಜೆಟ್‌ ಬರುವುದನ್ನೇ ಕಾಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ಉದ್ಧಾರ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೋಗಸ್‌ ಸ್ಟೇಟ್‌ಮೆಂಟ್‌ ಅಷ್ಟೆ. ಒಂದೆಡೆ ಸರ್ಕಾರದ ಖಜಾನೆ ಖಾಲಿಯಾಗಿದೆ. ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಿಟ್ಟ ಅನುದಾವನ್ನು ಇತರ ಯೋಜನೆಗಳಿಗೆ ಬಳಸಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ತೀವ್ರ ರೀತಿಯ ಹೋರಾಟ ನಡೆಸುತ್ತಲೇ ಬಂದಿದೆ ಎಂದರು. ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ ಮಾತನಾಡಿ, ರಾಜ್ಯದ ಈವರೆಗಿನ ಆಡ‍ಳಿತದಲ್ಲಿ ಯಾವ ಸರ್ಕಾರವೂ ಪರಿಶಿಷ್ಟ ಸಮುದಾಯದ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಆದರೆ ಸಿದ್ದರಾಮಯ್ಯ ಅವರು ದಲಿತೋದ್ಧಾರಕ ಎಂದು ಹೇಳಿಕೊಂಡು ಅವರಿಗೆ ಮೀಸಲಿಟ್ಟಅನುದಾನವನ್ನೇ ಬಳಸಿಕೊಂಡಿರುವುದು ಖೇದಕರ ಎಂದರು. ಶಾಸಕರಾದ ವೇದವ್ಯಾಸ ಕಾಮತ್‌, ಉಮಾನಾಥ ಕೋಟ್ಯಾನ್‌, ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಪುತ್ತೂರು, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಮುಕಂಡರಾದ ಹರ್ಷವರ್ಧನ್‌, ದಿನಕರ ಬಾಬು, ಗೋಪಾಲ್‌, ಗಂಗಪ್ಪ ಸಾಬೂ ದೊಡ್ಡಮನಿ, ಯತೀಶ್‌ ಆರ್ವರ್‌ ಮತ್ತಿತರರು ಇದ್ದರು.

Share this article