ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಚುನಾವಣೆಯಲ್ಲಿ ಅಭ್ಯರ್ಥಿಗಳು ನೀಡುವ ಆಸೆಆಮಿಷಗಳಿಗೆ ಬಲಿಯಾಗದೆ ಪ್ರಾಮಾಣಿಕವಾಗಿ ಮತ ಚಲಾಯಿಸುವಂತೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್.ಈ.ನಟರಾಜ್ ಮತದಾರರಲ್ಲಿ ಮನವಿ ಮಾಡಿದ್ದಾರೆ.ಚಿತ್ರದುರ್ಗ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 38 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಮಾಡಿದ್ದೇನೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವು ಇದೆ. ಇದಲ್ಲದೇ ವಿವಿಧ ರೀತಿಯ ಸಂಘಟನೆಯಲ್ಲಿ ಗುರುತಿಸಿಕೊಂಡು ನೌಕರರ ಬೇಡಿಕೆ ಈಡೇರಿಗೆ ಬಗ್ಗೆ ಹೋರಾಟ ಮಾಡಿದ್ದೇನೆ. ಇನ್ನು, ರಾಜ್ಯದಲ್ಲಿ ಬೇರೆ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಕ್ಕಿಂತ ಆಗ್ನೇಯ ಕ್ಷೇತ್ರ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಒಂದು ಕಾಲದಲ್ಲಿ ಬರೀ ಪೋಸ್ಟ್ ಕಾರ್ಡಲ್ಲಿ ಪತ್ರ ಬರೆದು ಚುನಾವಣೆಯನ್ನು ನಡೆಸಿದವರೂ ಇದ್ದಾರೆ. ಆದರೆ ಈಗ ಇಲ್ಲಿ ಕೋಟ್ಯಂತರ ರು. ಖರ್ಚು ಮಾಡುವ ಕಾಲ ಬಂದಿದೆ. ಈಗ ಚುನಾವಣೆಯಲ್ಲಿ ಹಣ ಸುರಿದು, ಗೆದ್ದ ಮೇಲೆ ಹಾಕಿದ ಹಣವನ್ನು ವಾಪಾಸ್ಸು ಪಡೆಯುವ ದಾರಿ ಕಂಡುಕೊಳ್ಳುತ್ತಾರೆ. ಸೇವೆ ಎನ್ನುವುದು ಮರೀಚಿಕೆಯಾಗುತ್ತಿದೆ. ಇದರಿಂದ ಶಿಕ್ಷಕರು ಮನನೊಂದಿದ್ದಾರೆ. ನಮ್ಮ ಬೇಡಿಕೆಗಳು ಈಡೇರುತ್ತಿಲ್ಲ ಎಂದು ಕೊರಗುತ್ತಿದ್ದಾರೆ. ಸದನದ ಹೊರಗಡೆ ಎಷ್ಟೇ ಹೋರಾಟ ಮಾಡಿದರೂ ಫಲ ಸಿಗುವುದಿಲ್ಲ. ಇದರ ಬದಲಿಗೆ ಸದನದ ಒಳಗಡೆ ಹೋರಾಟ ಮಾಡಿ ಶಿಕ್ಷಕರ ಪರವಾಗಿ ಧ್ವನಿ ಎತ್ತುವವರ ಅಗತ್ಯ ಇದೆ ಎಂದು ನಟರಾಜ್ ತಿಳಿಸಿದರು.
ಶಿಕ್ಷಕರ ವೇತನದಲ್ಲಿಯೂ ತಾರತಮ್ಯ ಇದೆ. ನೆರೆಯ ಕೇರಳದಲ್ಲಿ ಶಿಕ್ಷಕರಿಗೆ ಉತ್ತಮವಾದ ವೇತನ ಸಿಗುತ್ತಿದ್ದರೆ, ಕರ್ನಾಟಕದಲ್ಲಿ ಕಡಿಮೆ ಇದೆ. ಇದರ ಬಗ್ಗೆ ಸರ್ಕಾರ ಆಲೋಚನೆ ಮಾಡಿ ಶಿಕ್ಷಕರಿಗೆ ಸರಿಯಾದ ರೀತಿಯಲ್ಲಿ ವೇತನ ಸಿಗುವಂತೆ ಮಾಡಬೇಕಿದೆ. ಈ ಹಿಂದೆ ಕೆಲಸ ಮಾಡಿ ಮತ ಕೇಳುತ್ತಿದ್ದರು, ಈಗ ಮತದಾರರಿಗೆ ಆಸೆ ಆಮಿಷ ಗಳನ್ನು ಒಡ್ಡುವುದರ ಮೂಲಕ ಮತ ಯಾಚನೆ ಮಾಡಿ ಗೆಲುವು ಸಾಧಿಸುತ್ತಿದ್ದಾರೆ. ಇದಕ್ಕೆ ಮತದಾರರು ಮನ ಸೋಲಬಾರದೆಂದು ಮನವಿ ಮಾಡಿದರು. ನಾಗರಾಜ್ ಹಾಗೂ ಇಕ್ಬಾಲ್ ಬಾಷಾ ಉಪಸ್ಥಿತರಿದ್ದರು.