ಕನ್ನಡಪ್ರಭ ವಾರ್ತೆ ಉಡುಪಿ
ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದರ ಜೊತೆಗೆ ಮಾರಣಾಂತಿಕ ಕಾಯಿಲೆಗೆ ಬಲಿಯಾಗುತ್ತಾರೆ. ಇವುಗಳಿಂದ ದೂರವಿದ್ದು, ಉತ್ತಮ ಆರೋಗ್ಯ ಹೊಂದಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಕರೆ ನೀಡಿದ್ದಾರೆ.ಇಲ್ಲಿನ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಗಳ ಸಹಯೋಗದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನರು ಕ್ಷಣಿಕ ಸುಖಕ್ಕಾಗಿ ಮದ್ಯ ಅಥವಾ ಮಾದಕ ವಸ್ತುಗಳಿಗೆ ಬಲಿಯಾಗಿ ಅವುಗಳ ಸುಳಿಯಿಂದ ಹೊರಬರಲಾಗದೆ ಶಿಕ್ಷಣದಿಂದ ವಂಚಿತರಾಗಿ, ಭವ್ಯ ಭವಿಷ್ಯ ಹಾಳು ಮಾಡಿಕೊಂಡು, ಸಮಾಜದಲ್ಲಿ ತಲೆ ಎತ್ತಿ ಓಡಾಡದ ಹಾಗೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಯಾರೊಬ್ಬರೂ ಆಸ್ಪದ ನೀಡಬಾರದು ಎಂದರು.ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ. ವಾಸುದೇವ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ದುಶ್ಚಟಗಳು ಒಂದು ರೀತಿಯ ಕಾಯಿಲೆಯಾಗಿದ್ದು, ಇದಕ್ಕೆ ಅನೇಕ ಸಾಮಾಜಿಕ ಕಾರಣಗಳಿರುತ್ತವೆ. ವ್ಯಸನಕ್ಕೆ ಒಳಗಾದವರನ್ನು ದೂರದೇ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ ರಾಮರಾವ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರ್ತಿ ಮಂಜುಳಾ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಗಿರೀಶ್ ನಾವಡ ಹಾಗೂ ತಂಡದವರು ಸಂಗೀತ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಸ್ವಾಗತಿಸಿದರು. ಕಾಲೇಜಿನ ರೆಡ್‌ಕ್ರಾಸ್ ಘಟಕದ ಸಂಚಾಲಕ ಪ್ರಶಾಂತ್ ಎನ್. ನಿರೂಪಿಸಿದರು. ಇಲಾಖೆಯ ಸಿಬ್ಬಂದಿ ಸುಚಿತ್ರಾ ವಂದಿಸಿದರು.