ಪರೀಕ್ಷೆ ಭಯ ಬೇಡ, ಏಕಾಗ್ರತೆಯಿಂದ ಚೆನ್ನಾಗಿ ಓದಿ: ಎಸ್‌.ಮಂಜುನಾಥ್‌

KannadaprabhaNewsNetwork | Published : Feb 28, 2024 2:36 AM

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದು ಭಯ ಪಡುವ ಅವಶ್ಯಕತೆ ಇಲ್ಲ. ನೀವು ನಿತ್ಯ ಓದಿರುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮಗೆ ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಎಂದರು. ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜಕುಮಾರ್ ಕಡಿಮೆ ಓದಿದರೂ ಚಿತ್ರರಂಗದಲ್ಲಿ ಸಾಧನೆ ಮಾಡಿಯೇ ಜನಪ್ರಿಯರಾಗಿದ್ದು. ನಿಮಗೂ ಕೂಡ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರೀಕ್ಷೆ ಭಯ ಬೇಡ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಚೆನ್ನಾಗಿ ಓದಿ ಸಾಧನೆ ಮಾಡಿ ಜೀವನದಲ್ಲಿ ಮುಂದೆ ಬರಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಎಸ್.ಮಂಜುನಾಥ್ ತಿಳಿಸಿದರು.

ನಗರದ ಕೆಎಸ್‌ಎಸ್ ವಿದ್ಯಾಲಯದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ದಾವಣಗೆರೆ ದಕ್ಷಿಣದಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ಭಯ ಬೇಡ ಕಾರ್ಯಕ್ರಮದಲ್ಲಿ ಮಾತನಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದು ಭಯ ಪಡುವ ಅವಶ್ಯಕತೆ ಇಲ್ಲ. ನೀವು ನಿತ್ಯ ಓದಿರುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮಗೆ ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು ಎಂದರು. ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜಕುಮಾರ್ ಕಡಿಮೆ ಓದಿದರೂ ಚಿತ್ರರಂಗದಲ್ಲಿ ಸಾಧನೆ ಮಾಡಿಯೇ ಜನಪ್ರಿಯರಾಗಿದ್ದು. ನಿಮಗೂ ಕೂಡ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ ಎಂದು ಕರೆ ನೀಡಿದರು.

ರೆಡ್‌ಕ್ರಾಸ್ ಸಂಸ್ಥೆ ಚೇರ್ಮನ್ ಡಾ.ಎ.ಎಂ. ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ನಿದ್ದೆಗೆಡದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಪರೀಕ್ಷೆ ಎದುರಿಸಿ ಹಾಗೂ ಮುಂದಿನ ದಿನಗಳಲ್ಲಿ ನಿಮಗೆ ಇಷ್ಟವಾದ ವಿಷಯಗಳ ಆರಿಸಿಕೊಂಡು ಓದಿರಿ, ಯಶಸ್ಸು ಕಟ್ಟಿಟ್ಟ ಬುತ್ತಿ. ಚೆನ್ನಾಗಿ ಓದಿ, ನಿಮಗಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನಿಮ್ಮ ತಂದೆ ತಾಯಿಯರಿಗೆ ಕೀರ್ತಿ ತರುವಂತವರಾಗಿ ಎಂದರು.

ಪರಿಷತ್ ಅಧ್ಯಕ್ಷ ಡಾ.ಎ.ಜೆ. ರವಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಶಿಕ್ಷೆ ಮತ್ತು ಶಿಕ್ಷಣ ಇದ್ದರೆ ಮಾತ್ರ ವಿದ್ಯೆ ಕಲಿಯಲು ದಾರಿ. ಜೀವನದಲ್ಲಿ ಪರೀಕ್ಷೆ ಒಂದೇ ಮುಖ್ಯವಲ್ಲ, ಅದನ್ನು ಧೈರ್ಯವಾಗಿ ಎದುರಿಸಿ ಒಳ್ಳೆಯ ಅಂಕಗಳನ್ನು ಗಳಿಸಿರಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್, ಜಯಲಕ್ಷ್ಮಿ ಮಹೇಶ್, ಮುಖ್ಯ ಶಿಕ್ಷಕರಾದ ದಾಕ್ಷಾಯಿಣಿ, ಶಿಕ್ಷಕ ರವಿಕುಮಾರ, ಎಂ.ಆರ್.ಮಂಜುಳಾ, ದೀಪಾ, ಡಾ.ಹಿರೇಮಠ್ ಇತರರಿದ್ದರು. .

Share this article