ಕುಷ್ಠ ರೋಗದ ಬಗ್ಗೆ ಸಾಮಾಜಿಕ ಕಳಂಕದ ಭೀತಿ ಬೇಡ

KannadaprabhaNewsNetwork |  
Published : Nov 05, 2024, 12:31 AM IST
ಚಿತ್ರದುರ್ಗಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

Don't fear social stigma about leprosy

-ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮನವಿ

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಕುಷ್ಠರೋಗದ ಬಗ್ಗೆ ಭಯ, ಸಾಮಾಜಿಕ ಕಳಂಕ ಭೀತಿ ಬೇಡ. ತಪಾಸಣೆಗೆ ಹಾಗೂ ಚಿಕಿತ್ಸೆ ನೀಡಲು ಸಹಕರಿಸುವಂತೆ ತಾಲೂಕಿನ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮನವಿ ಮಾಡಿದರು.

ನಗರದ ಎಲ್ಲಾ ವಾರ್ಡ್‍ಗಳಲ್ಲಿ ಕುಷ್ಠರೋಗ ಪ್ರಕರಣ ಪತ್ತೆ ಆಂದೋಲನ ಮನೆ ಮನೆ ಭೇಟಿ, ಮಾಹಿತಿ, ಶಿಕ್ಷಣ, ಕುಷ್ಠರೋಗ ಲಕ್ಷಣ ಪತ್ತೆ ಹಚ್ಚುವಿಕೆ ಕಾರ್ಯಕ್ರಮವು ನಡೆಯುತ್ತಿದ್ದು, ಸೋಮವಾರ ತಾಲೂಕು ಆರೋಗ್ಯ ಅಧಿಕಾರಿಗಳ ತಂಡ ವಿವಿಧೆಡೆ ಪರಿಶೀಲನೆ, ಭೇಟಿ ನಡೆಸಿ ಮನೆಗಳಲ್ಲಿ ಅಂತರ್ ವೈಯಕ್ತಿಕ ಸಮಾಲೋಚನೆ, ಅಲ್ಲಲ್ಲಿ ಗುಂಪು ಸಭೆ ನಡೆಸಿ ಮಾಹಿತಿ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದ ಭೀಮಪ್ಪ ನಾಯಕ ಪ್ರೌಢಶಾಲೆ ರಸ್ತೆಯಲ್ಲಿ ನಡೆದ ಗುಂಪು ಸಭೆಯಲ್ಲಿ ಮಾತನಾಡಿದ ಅವರು ಕುಷ್ಠ ರೋಗ ದೀರ್ಘ ಕಾಲ ಖಾಯಿಲೆಯಾಗಿದ್ದು, ಬ್ಯಾಕ್ಟಿರಿಯಾಗಳಾದ ಮೈಕೋಬ್ಯಾಕ್ಟೀರಿಯಂ ಲೆಪ್ರೆಯಿ ಮತ್ತು ಮೈಕೋಬ್ಯಾಕ್ಟೀರಿಯಂ ಲೆಫ್ರೆರೀಮತೊಸಿಸ್‍ದಿಂದ ಬರುವ ಖಾಯಿಲೆಯಾಗಿದೆ. ಚರ್ಮದ ಬಾಧೆ ಇದರ ಪ್ರಾಥಮಿಕ ಬಾಹ್ಯ ಚಿಹ್ನೆ. ಕುಷ್ಠರೋಗ ಗುಣಪಡಿಸಿಕೊಳ್ಳದಿದ್ದಲ್ಲಿ, ಅದು ಅಭಿವೃದ್ಧಿಗೊಳ್ಳುತ್ತ ಹೋಗಿ ಚರ್ಮಕ್ಕೆ, ನರಗಳಿಗೆ, ಕಾಲುಗಳಿಗೆ ಮತ್ತು ಕಣ್ಣುಗಳಿಗೆ ಶಾಶ್ವತ ಹಾನಿ ಉಂಟು ಮಾಡುತ್ತದೆ. ಶೀಘ್ರ ಪತ್ತೆ ಬಹುವಿಧ ಚಿಕಿತ್ಸೆಯಿಂದ ಕುಷ್ಟರೋಗ ಸಂಪೂರ್ಣ ಗುಣಮುಖವಾಗುತ್ತದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಮಾತನಾಡಿ, ನ.04 ರಿಂದ 21ರವರೆಗೆ ಕುಷ್ಠರೋಗದ ಬಗ್ಗೆ ಮಾಹಿತಿ ಶಿಕ್ಷಣ ರೋಗ ತಪಾಸಣೆ ಮಾಡಲು ಆಶಾ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಆರೋಗ್ಯ ನಿರೀಕ್ಷಣಾಧಿಕಾರಿಗಳು ಮನೆಗಳಿಗೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ತಪ್ಪದೇ ಸಹಕರಿಸಿ ತಪಾಸಣೆ ಮಾಡಿಸಿಕೊಳ್ಳಿ. ಶಂಕಿತ ಪ್ರಕರಣಗಳ ಪಟ್ಟಿ ಮಾಡಿ, ತಜ್ಞರಿಂದ ಮರು ತಪಾಸಣೆ ನಡೆಸಿ ಕುಷ್ಠರೋಗದ ಖಚಿತತೆ ಪಡಿಸಿಕೊಂಡ ನಂತರ ಬಹುವಿಧ ಚಿಕಿತ್ಸಾ ವಿಧಾನಕ್ಕೆ ಒಳಪಡಿಸಲಾಗುತ್ತದೆ. ತಪಾಸಣೆ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ. ಮನೆ ಮನೆಗೆ ಬರುವ ಆಶಾ ಕಾರ್ಯಕರ್ತೆಯರಿಗೆ ಯಾವುದೇ ಗೌಪ್ಯತೆ ಮಾಡದೆ ಸಂಪೂರ್ಣ ಮಾಹಿತಿ ನೀಡಿ ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಿ ಎಂದರು.

ಕುಷ್ಠರೋಗದ ಬಗ್ಗೆ ಯಾವುದೇ ಭೀತಿ ಬೇಡ. ಕಾಯಿಲೆ ಇದೆ ಎಂದು ಗೊತ್ತಾದರೆ ಸಾಮಾಜಿಕವಾಗಿ ನೋವು ಅನುಭವಿಸಬೇಕಾಗುತ್ತದೆ ಎಂಬ ಆತಂಕಗಳು ಬೇಡ. ಕಾಯಿಲೆ ವಾಸಿ ಮಾಡಿಕೊಳ್ಳುವುದರ ಕಡೆ ಗಮನ ಹರಿಸುವುದಕ್ಕಿಂತ ಕಾಯಿಲೆಗೆ ತುತ್ತಾಗಿ ನರಳುವುದು ಬೇಡವೆಂದರು.

ಗುಂಪು ಸಭೆಯಲ್ಲಿ ಆರೋಗ್ಯ ಸುರಕ್ಷತಾ ಅಧಿಕಾರಿ ಗೀತಮ್ಮ, ಆಶಾ ಕಾರ್ಯಕರ್ತೆ ಅನುರಾಧ, ಸ್ಥಳೀಯ ಕುಟುಂಬಸ್ಥರು ಭಾಗವಹಿಸಿದ್ದರು.

----------------

ಪೋಟೋ: ಕುಷ್ಠರೋಗ ಪ್ರಕರಣ ಪತ್ತೆ ಆಂದೋಲನ ಸಂಬಂಧ ಚಿತ್ರದುರ್ಗದ ನಗರದ ಭೀಮಪ್ಪ ನಾಯಕ ಪ್ರೌಢಶಾಲೆ ರಸ್ತೆಯಲ್ಲಿ ನಡೆದ ಗುಂಪು ಸಭೆಯಲ್ಲಿ ಜಾಗೃತಿ ಮೂಡಿಸುವ ಕರಪತ್ರ ಬಿಡುಗಡೆ ಮಾಡಲಾಯಿತು.

-------

ಫೋಟೋ: 4 ಸಿಟಿಡಿ 2

--

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ