ಡಾ.ರಾಜ್,ವಿಷ್ಣು,ಅಂಬಿ, ಶಂಕರ್ ನಾಗ್ ಚಿತ್ರರಂಗದ ಪಿಲ್ಲರ್ ಗಳು । ದಿ.ಕೆ.ಎಸ್.ಪುಟ್ಟಣ್ಣಯ್ಯನವರ 75 ನೇ ವರ್ಷದ ಜನ್ಮದಿನ । ಕಾಟೇರ ಚಿತ್ರತಂಡಕ್ಕೆ ಅಭಿನಂದನೆ
ಚಿತ್ರನಟ ದರ್ಶನ್ ಗೆ ಭೂಮಿಪುತ್ರ ಬಿರುದು, ಟಗರು, ಕಬ್ಬಿನ ಜಲ್ಲೆ ಉಡುಗೊರೆಕನ್ನಡಪ್ರಭ ವಾರ್ತೆ ಪಾಂಡವಪುರ
ಭೂಮಿಯಿಂದ ಬೆಳೆ ಬೆಳೆದು ದೇಶದ ಜನರಿಗೆ ಅನ್ನ ಕೊಡುತ್ತಿರುವ ರೈತರನ್ನು ಯಾರು ಕೈ ಬಿಡಬೇಡಿ. ರೈತ ಸಂಘಕ್ಕೆ ಕೈ ಕೊಡಬೇಡಿ ಎಂದು ಚಿತ್ರನಟ ದರ್ಶನ್ ಮನವಿ ಮಾಡಿದರು.ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ರೈತಸಂಘದಿಂದ ಶುಕ್ರವಾರ ರಾತ್ರಿ ಆಯೋಜಿಸಿದ್ದ ರೈತನಾಯಕ, ದಿ.ಕೆ.ಎಸ್.ಪುಟ್ಟಣ್ಣಯ್ಯನವರ 75 ನೇ ವರ್ಷದ ಹುಟ್ಟುಹಬ್ಬ ಹಾಗೂ ಕಾಟೇರ ಚಿತ್ರತಂಡಕ್ಕೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅನ್ನ ಕೊಡುವ ರೈತರನ್ನು ದೇವರು ಎಂದು ಕರೆಯುತ್ತೇವೆ. ರೈತರು ನೇಗಿಲು ಹಿಡಿದು, ಎತ್ತು ಕಟ್ಟಿ ಭೂಮಿ ಉಳುಮೆ ಮಾಡದಿದ್ದರೆ ನಾವು ಮಣ್ಣು ತಿನ್ನಬೇಕಾಗುತ್ತದೆ ಎಂದು ಎಚ್ಚರಿಸಿದರು.
ವರನಟ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಶ್ ಹಾಗೂ ಶಂಕರ್‌ನಾಗ್ ಕನ್ನಡ ಚಿತ್ರರಂಗದ ಪಿಲ್ಲರ್‌ಗಳಿದ್ದಂತೆ. ಈ ಮಹಾನ್ ನಾಯಕರ ಪಿಲ್ಲರ್ ಕೆಳಗೆ ಸಾಕಷ್ಟು ಹಿರಿಯ ಕಲಾವಿದರು ಕಂಬಗಳಾಗಿದ್ದಾರೆ ಎಂದರು.ನಾವೆಲ್ಲ ಕಂಬಕ್ಕೆ ಸಪೋರ್ಟ್ ಆಗಿ ಕೊಟ್ಟಿರುವ ಚಿಕ್ಕಪೀಸ್‌ಗಳು ಅಷ್ಟೆ. ಹೀರೋಗಳಲ್ಲ. ನಮ್ಮ ಜತೆಗೆ ನಮ್ಮವರನ್ನೇ ಕರೆದುಕೊಂಡು ಹೋಗಬೇಕು. ಅದಕ್ಕಾಗಿ ಕನ್ನಡ ಚಿತ್ರಗಳನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಮೆರಿಕಾ ಬಿಟ್ಟು ಇಲ್ಲಿ ಜನಸೇವೆ ಮಾಡಲು ಶಾಸಕರಾಗಿದ್ದಾರೆ. ಅಮೆರಿಕಾದಲ್ಲಿನ ಕಂಪನಿ ಮಾರಾಟ ಮಾಡಿ 8 ಕೋಟಿ ಸಾಲ ತೀರಿಸಿ ಇದೀಗ ಅದೇ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ನನ್ನ ನಟನೆಯ ಕಾಟೇರ ಸಿನಿಮಾ 25ನೇ ದಿನವನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸಿನಿಮಾವನ್ನು ಇಷ್ಟೊಂದು ದೊಡ್ಡಮಟ್ಟದಲ್ಲಿ ಯಶಸ್ವಿಗೊಳಿಸಿದ ಕನ್ನಡಿಗರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಾಟೇರ ಸಿನಿಮಾ ರೈತರ ಪರವಾದ ಸಿನಿಮಾ. ಉಳುವವನೇ ಭೂಮಿಯ ಒಡೆಯ ಎಂಬ ವಿಚಾರವನ್ನಿಟ್ಟುಕೊಂಡು ಚಿತ್ರ ಮೂಡಿಬಂದಿದೆ. ಹಾಗಾಗಿ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಕೊಟ್ಟ ಮಾತಿನಂತೆ ಕಳೆದ ವಿಧಾನಸಭಾ ಚುನಾವಣೆ ವೇಳೆ ನನ್ನ ಕ್ಷೇತ್ರಕ್ಕೆ ಬಂದು ನನ್ನ ಪರ ಪ್ರಚಾರ ನಡೆಸಿದ ಪರಿಣಾಮ ನಾನು ಶಾಸಕನಾಗಿ ಆಯ್ಕೆಯಾಗಲು ಸಹಕಾರಿಯಾಯಿತು ಎಂದು ನಟ ದರ್ಶನ್ ಅವರನ್ನು ಇದೇ ವೇಳೆ ಅಭಿನಂದಿಸಿದರು.
ರೈತ ನಾಯಕರಾದ ಕೆ.ಎಸ್.ಪುಟ್ಟಣ್ಣಯ್ಯ, ಪ್ರೊ.ನಂಜುಂಡಿಸ್ವಾಮಿ, ಸುಂದರೇಶ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ರೈತ ಮುಖಂಡರು ಸಮಾರಂಭವನ್ನು ಉದ್ಘಾಟಿಸಿದರು. ಚಿತ್ರನಟ ದರ್ಶನ್ ಅವರಿಗೆ ಭೂಮಿಪುತ್ರ ಎಂಬ ಬಿರುದು ನೀಡಿ ಟಗರು, ಕಬ್ಬಿನ ಜಲ್ಲೆಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉಡುಗೊರೆಯಾಗಿ ನೀಡಿದರು.ಕಾಟೇರ ಚಿತ್ರದ ನಿರ್ದೇಶಕ ತರುಣ್ ಕಿಶೋರ್ , ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿ ಚಿತ್ರತಂಡ ಕಲಾವಿದರನ್ನು ಅಭಿನಂದಿಸಲಾಯಿತು. ಚಿತ್ರರಂಗದ ಹಲವು ನಟಿಯರಿಂದ ನೃತ್ಯ ಪ್ರದರ್ಶನ ಮೂಡಿಬಂತು. ನೆನೆದಿದ್ದ ಪ್ರೇಕ್ಷಕರು ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸಿದರು.
ಇದಕ್ಕೂ ಮುನ್ನ ಚಿತ್ರನಟ ದರ್ಶನ್ ಸೇರಿ ಎಲ್ಲಾ ಕಲಾವಿದರನ್ನು ಪಟ್ಟಣದಲ್ಲಿ ಎತ್ತಿನಗಾಡಿಯಲ್ಲಿ ರೋಡ್ ಶೋ ನಡೆಸುವ ಮೂಲಕ ವೇದಿಕೆಗೆ ಕರೆತರಲಾಯಿತು. ಸಮಾರಂಭದಲ್ಲಿ ಚಿತ್ರನಟರಾದ ಚಿಕ್ಕಣ್ಣ, ವಿನೋದ್ ಪ್ರಭಾಕರ್, ಧನ್‌ವೀರ್, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಚಾಮರಸ ಮಾಲೀಪಾಟೀಲ್, ಸುನಿತಾ ಪುಟ್ಟಣ್ಣಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೊಗೌಡ, ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.-------------
27ಕೆಎಂಎನ್ ಡಿ11,12,13ಪಾಂಡವಪುರದಲ್ಲಿ ನಡೆದ ಸಮಾರಂಭದಲ್ಲಿ ಚಿತ್ರನಟ ದರ್ಶನ್ ಅವರಿಗೆ ಭೂಮಿಪುತ್ರ ಎಂಬ ಬಿರುದು ನೀಡಿ ಟಗರು, ಕಬ್ಬಿನ ಜಲ್ಲೆಯನ್ನು ಉಡುಗೊರೆಯಾಗಿ ನೀಡಲಾಯಿತು.
------ಸಮಾರಂಭದಲ್ಲಿ ಚಿತ್ರರಂಗ ನಟಿಯರು ವಿವಿಧ ಚಲನಚಿತ್ರ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿದರು.