ಕೈಯಲ್ಲಿ ಬಳೆ ತೊಟ್ಟಿಲ್ಲ ಪದ ನಿಲ್ಲಿಸಬೇಕು

KannadaprabhaNewsNetwork |  
Published : Oct 25, 2025, 01:03 AM IST
ರಾಜ್ಯಮಟ್ಟ ಮಹಿಳಾ ವಿಚಾರಗೋಷ್ಠಿ | Kannada Prabha

ಸಾರಾಂಶ

ನಾವೇನು ಕೈಯಲ್ಲಿ ಬಳೆ ತೊಟ್ಟಿಲ್ಲ ಎಂಬ ಪದವನ್ನು ಇತ್ತೀಚೆಗೆ ರಾಜಕಾರಣಿಗಳು ಬಹಳಷ್ಟು ಸಂದರ್ಭದಲ್ಲಿ ಬಳಸುತ್ತಿದ್ದಾರೆ. ಇದು ಮಹಿಳಾ ಸಮೂಹಕ್ಕೆ ಮಾಡುತ್ತಿರುವ ದೊಡ್ಡ ಅಪಮಾನ. ಹೀಗಾಗಿ ಈ ಪದಬಳಕೆಯನ್ನು ನಿಲ್ಲಿಸಬೇಕು. ಇಲ್ಲವೇ ಸರ್ಕಾರವೇ ನಿಷೇಧಿಸಬೇಕು ಎಂದು ಸಾಹಿತಿ ಡಾ.ಅರ್ಚನಾ ಅಥಣಿ ಒತ್ತಾಯಿಸಿದರು.

ಪ್ರಮೋದ ಗಡಕರ

ಕನ್ನಡಪ್ರಭ ವಾರ್ತೆ ಬೆಳಗಾವಿ

ನಾವೇನು ಕೈಯಲ್ಲಿ ಬಳೆ ತೊಟ್ಟಿಲ್ಲ ಎಂಬ ಪದವನ್ನು ಇತ್ತೀಚೆಗೆ ರಾಜಕಾರಣಿಗಳು ಬಹಳಷ್ಟು ಸಂದರ್ಭದಲ್ಲಿ ಬಳಸುತ್ತಿದ್ದಾರೆ. ಇದು ಮಹಿಳಾ ಸಮೂಹಕ್ಕೆ ಮಾಡುತ್ತಿರುವ ದೊಡ್ಡ ಅಪಮಾನ. ಹೀಗಾಗಿ ಈ ಪದಬಳಕೆಯನ್ನು ನಿಲ್ಲಿಸಬೇಕು. ಇಲ್ಲವೇ ಸರ್ಕಾರವೇ ನಿಷೇಧಿಸಬೇಕು ಎಂದು ಸಾಹಿತಿ ಡಾ.ಅರ್ಚನಾ ಅಥಣಿ ಒತ್ತಾಯಿಸಿದರು.

ಜಿಲ್ಲೆಯ ಚನ್ನಮ್ಮನ ಕಿತ್ತೂರಿನ ವಿಜಯೋತ್ಸವದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಹಿಳೆಯರು ಮತ್ತು ವಿದಾರ್ಥಿನಿಯರಿಗೆ ರಾಣಿ ಚನ್ನಮ್ಮನ ಆದರ್ಶಗಳು ಕುರಿತು ಮಾತನಾಡಿದರು. ಇತ್ತೀಚೆಗೆ ಎರಡೂ ಬಣಗಳ ನಡುವೆ ತಿಕ್ಕಾಟವೊಂದು ನಡೆದಿತ್ತು. ಮಾತಿನ ಮಧ್ಯ ಓರ್ವ ನಾಯಕ ನಾನೇನು ಬಳೆ ತೊಟ್ಟಿಲ್ಲ ಎಂದಿದ್ದರು. ನಾನು ಅವತ್ತೇ ಅವರಿಗೆ ವೈಯಕ್ತಿವಾಗಿ ಉತ್ತರ ಕೊಟ್ಟಿದ್ದೇನೆ. ಅವರ ಹೇಳಿಕೆಯನ್ನು ಖಂಡಿಸಿದ್ದೇನೆ. ಈ ದೇಶದಲ್ಲಿ ಬ್ರಿಟಿಷರಿಗೆ ಚಿನ್ನ, ಬೆಳ್ಳಿ ಪಾತ್ರೆಯಲ್ಲಿ ಕಪ್ಪು ಕಾಣಿಕೆ ಕೊಟ್ಟು ಬ್ರಿಟಿಷರಿಗೆ ಶರಣಾದವರೆಲ್ಲ ಪುರುಷ ರಾಜರುಗಳೇ. ಆದರೆ, ಬ್ರಿಟಿಷರನ್ನು ಎದುರಿಸಿ ಹೋರಾಡಿದವರು ಚನ್ನಮ್ಮನಂತಹ ಮಹಿಳೆಯರು. ಹೀಗಾಗಿ ಯಾರು ಇನ್ನು ಮುಂದೆ ಬಳೆ ತೊಟ್ಟಿಲ್ಲ ಎಂಬ ಪದ ಬಳಸಬಾರದು ಎಂದು ಆಗ್ರಹಿಸಿದರು.ರಾಜಸ್ಥಾನದಲ್ಲಿ ರಾಣಾ ಪ್ರತಾಪಸಿಂಹ ಅವರ ಶೌರ್ಯ, ಸಾಹಸವನ್ನು ಥಿಯೇಟರ್ ಮಾದರಿಯಲ್ಲಿ ಪ್ರತಿನಿತ್ಯ ಪ್ರಸಾರ ಮಾಡಿ ಜನರಿಗೆ ತಿಳಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಅವರ ಸಂಸ್ಕೃತಿ ಹಾಗೂ ಕಲೆಗಳನ್ನು ಪ್ರಸಾರ ಮಾಡುವ ರೀತಿಯಲ್ಲಿ ರಂಗವೇದಿಕೆ ಶೋಗಳು ನಡೆಯುತ್ತಿವೆ. ಹಾಗೆ ಕಿತ್ತೂರು ಉತ್ಸವದ ಈ ಸಂದರ್ಭದಲ್ಲಿ ಒಂದು ರಂಗವೇದಿಕೆ ಪ್ರಾರಂಭವಾಗಬೇಕು. ಸ್ಥಳೀಯ ಜನಪದ ಕಲಾವಿದರು ಹಾಗೂ ವೇಷಭೂಷಣ ಕಲಾವಿದರನ್ನು ಕರೆದುಕೊಂಡು ಪ್ರತಿನಿತ್ಯ ಶೋಗಳು ನಡೆಯುವಂತಾಗಬೇಕು ಎಂದರು.ಮಹಿಳೆಯರು ಅತ್ಯಾಚಾರಗಳಿಂದ ತಪ್ಪಿಸಿಕೊಳ್ಳಲು ಸ್ವರಕ್ಷಣಾ ಕಲೆಗಳನ್ನು ಕಲಿತುಕೊಳ್ಳಬೇಕಿದೆ. ಚನ್ನಮ್ಮನ ಶೌರ್ಯವನ್ನು ಮಾದರಿಯಾಗಿಟ್ಟುಕೊಂಡು ಧೈರ್ಯಶಾಲಿಗಳಾಗಬೇಕು. ಕತ್ತಿ ವರಸೆ, ಬಿಲ್ವಿದ್ಯೆ ಕಲಿಯಬೇಕಿಲ್ಲ. ಇಂದಿನ ಆಧುನಿಕ ಶಿಕ್ಷಣದ ಜತೆಗೆ ಒಂದಾದರೂ ಸ್ವಯಂ ರಕ್ಷಣಾ ಕಲೆ ಗೊತ್ತಿರಬೇಕು ಎಂದು ತಿಳಿಸಿದರು.ಕಿತ್ತೂರು ಸಂಸ್ಥಾನದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಬಗ್ಗೆ ಡಾ.ನಿರ್ಮಲ ಬಟ್ಟಲ ಮಾತನಾಡಿ, ಇತಿಹಾಸದಲ್ಲಿ ಎದುರು ಬಂದು ಹೋರಾಡುವವರಿಂದ ಸೋಲುಗಳಾಗಿಲ್ಲ. ಜತೆಗಿದ್ದು ಕುತಂತ್ರ ಮಾಡುವವರಿಂದಲೇ ಸೋಲುಗಳಾಗಿವೆ. ಚನ್ನಮ್ಮನ ವಿಷಯದಲ್ಲಿ ಇಂತಹ ಕುತಂತ್ರಗಳೇ ಯುದ್ಧಕ್ಕೆ ಕಾರಣವಾಗಿದ್ದವು. ದತ್ತಕ ಪ್ರಕ್ರಿಯೆ ಸರಿಯಾಗಿ ಆಗದಂತೆ ಕೆಲವರು ನೋಡಿಕೊಂಡರು. ಅದೇ ವಿಷಯವನ್ನು ಬ್ರಿಟಿಷ ಅಧಿಕಾರಿಗಳಿಗೆ ತಲುಪಿಸಿ ಇದಕ್ಕೆ ಅಡ್ಡಿಯಾಗುವಂತೆ ಮಾಡಿ ಯುದ್ಧಕ್ಕೆ ಕಾರಣವಾದರು. ಆದರೆ ಉತ್ತಮ ಮಹಿಳಾ ಆಡಳಿತಾಧಿಕಾರಿಯಾಗಿದ್ದ ಚನ್ನಮ್ಮ ಎಲ್ಲವನ್ನೂ ಮೆಟ್ಟಿನಿಂತು ಹೋರಾಟ ಮಾಡಿದ್ದು ಆಕೆಯ ಆಡಳಿತ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದರು.ಆಂಗ್ಲ ಭಾಷಾ ಲೇಖಕಿ ಡಾ.ವಿಜಯಲಕ್ಷ್ಮೀ ತಿರ್ಲಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗ ನಡೆಯುತ್ತಿರುವ ರಾಜ್ಯಮಟ್ಟದ ವಿಚಾರಗೋಷ್ಠಿಗಳು ಮುಂದಿನ ವರ್ಷದಿಂದ ರಾಷ್ಟ್ರಮಟ್ಟದಲ್ಲಿ ನಡೆಯಬೇಕಿದೆ. ಅನೇಕ ವರ್ಷಗಳಿಂದ ಕಿತ್ತೂರು ಉತ್ಸವ ಆಚರಿಸಿಕೊಂಡು ಬಂದಿದ್ದರೂ ಇನ್ನೂ ರಾಷ್ಟ್ರಮಟ್ಟದಲ್ಲಿ ಚನ್ನಮ್ಮನ ಸಾಹಸಗಾಥೆಯನ್ನು ಕೊಂಡೊಯ್ಯಲು ಆಗಿಲ್ಲ. ಈ ಬಗ್ಗೆ ಪ್ರಯತ್ನಗಳಾಗಬೇಕಿದೆ ಎಂದು ಸಲಹೆ ನೀಡಿದರು.ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕಿ ನಾಗರತ್ನ ಪರಾಂಡೆ ಮಾತನಾಡಿ, ಝಾನ್ಸಿ ರಾಣಿಗಿಂತ ಮುಂಚೆ ಹೋರಾಟ ಮಾಡಿದ ಪ್ರಥಮ ಮಹಿಳೆ ಚನ್ನಮ್ಮ ಎನ್ನುವುದನ್ನು ದಾಖಲೀಕರಿಸುವಲ್ಲಿ ನಮ್ಮ ಇತಿಹಾಸಕಾರರು ಸೋತಿದ್ದಾರೆ. ಚನ್ನಮ್ಮನ ಕುರಿತು ಇತಿಹಾಸಕಾರರಿಂದ ಅನೇಕ ಗೊಂದಲಗಳು ಸೃಷ್ಟಿಯಾಗಿವೆ. ಚನ್ನಮ್ಮನ ಜನ್ಮದಿನಾಂಕವೂ ಗೊಂದಲದಲ್ಲಿದೆ. ಕಿತ್ತೂರು ಹೋರಾಟಕ್ಕೆ ಬ್ರಿಟಿಷರ ದತ್ತಕ ಕಾಯಿದೆಯೇ ಕಾರಣ ಎನ್ನುತ್ತಾರೆ. ಅದು ಕೂಡ ಗೊಂದಲವಾಗಿದೆ. ಹೀಗಾಗಿ ಚನ್ನಮ್ಮನ ಕುರಿತಾದ ನೈಜ ಇತಿಹಾಸವನ್ನು ದಾಖಲೀಕರಿಸುವ ಜವಾಬ್ದಾರಿ ಇಂದಿನವರ ಮೇಲಿದೆ ಎಂದರು.ಕಿತ್ತೂರು ಸಂಸ್ಥಾನದ ದತ್ತಕ ಪ್ರಕ್ರಿಯೆಯಲ್ಲಿ ರಾಣಿಯರ ಪಾತ್ರ ಕುರಿತಾಗಿ ನಿವೃತ್ತ ಪ್ರಾಚಾರ್ಯೆ ಡಾ.ಸರಸ್ವತಿ ಕಳಸದ, ಕಿತ್ತೂರು ಸಂಸ್ಥಾನದ ರಾಣಿಯರ ಸಮನ್ವಯತೆ ಸಂದೇಶ ಕುರಿತಾಗಿ ಜ್ಯೋತಿ ಬಾದಾಮಿ ಮಾತನಾಡಿದರು.ಮುಖ್ಯ ವೇದಿಕೆಯಲ್ಲಿ ನಡೆದ ಈ ಮಹಿಳಾ ವಿಚಾರ ಗೋಷ್ಠಿಯಲ್ಲಿ ಪ್ರೊ.ಬಸವರಾಜ ಕುಪ್ಪಸಗೌಡರ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಿತಿ ಅಧ್ಯಕ್ಷೆ ರೇಖಾ ಶೆಟ್ಟರ, ಬಿಇಒ ಸಿ.ವೈ.ತುಬಾಕಿ, ಸ್ನೇಹಲ್ ಪೂಜೇರ ಹಾಗೂ ಜ್ಯೋತಿ ಕೊಟಗಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!