ಮಕ್ಕಳ ಮನಸ್ಸಿನಲ್ಲಿ ಜಾತಿ ಭಾವನೆ ಬಿತ್ತಬೇಡಿ

KannadaprabhaNewsNetwork |  
Published : Jan 01, 2026, 02:15 AM IST
ಸಿಕೆಬಿ-1 ತಾಲ್ಲೂಕಿನ ಮಂಚನಬಲೆ ಗ್ರಾಮದ ಬಿಜಿಎಸ್ ವಿದ್ಯಾನಿಕೇತನ ಶಾಲೆಯ ಮಾತೃ ಭೋಜನ ಕಾರ್ಯಕ್ರಮದಲ್ಲಿ ಮಂಗಳಾನಾಥ ಸ್ವಾಮೀಜಿ ಮಕ್ಕಳಿಗೆ ಕೈತುತ್ತು ತಿನ್ನಿಸಿದರು | Kannada Prabha

ಸಾರಾಂಶ

ದೇವರು ಎಲ್ಲಕಡೆ ಇರಲು ಆಗುವುದಿಲ್ಲವೆಂದ ತಾಯಿಯನ್ನು ಸೃಷ್ಟಿಸಿ ಅಮ್ಮನ ರೂಪದಲ್ಲಿ ನಮ್ಮೆಲ್ಲರಿಗೂ ನೀಡಿದ್ದಾನೆ. ವೇದ-ಉಪನಿಷತ್, ಪುರಾಣ ಮತ್ತು ಗಾದೆಗಳಲ್ಲೂ ಸಹಾ ಮಾತೃದೇವೂ ಭವ ಎಂದೇ ಮೊದಲು ಹೇಳುವುದು. ತಾಯಿಗಿಂತ ದೇವರಿಲ್ಲ. ಆಕೆಯೇ ಒಂದು ದಿವ್ಯಶಕ್ತಿಯಾಗಿದ್ದಾಳೆ. ನಮ್ಮಲ್ಲಿ ಐಕ್ಯತೆ ಮೂಡಲು ತಾಯಿಯೇ ಕಾರಣಳಾಗಿದ್ದಾಳೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕಿತ್ತಾಟವಿದೆ. ಇಂತಹದ್ದರ ನಡುವೆ ಇಲ್ಲಿ ಮಕ್ಕಳಿಗೆ ಊಟ ಬಡಿಸುವಾಗ ಯಾರೂ ಸಹ ಜಾತಿ, ಧರ್ಮವನ್ನು ಕೇಳಲಿಲ್ಲ. ಮಕ್ಕಳ ಮನಸ್ಸಿನಲ್ಲಿ ಜಾತಿ, ಧರ್ಮಗಳಿಗೆ ಹೊರತಾದ ಭಾವನೆಗಳನ್ನು ಬೆಳೆಸಬೇಕು ಎಂದು ಆದಿಚುಂಚನಗಿರಿ ಶಾಖಾಮಠದ ಕಾರ್ಯದರ್ಶಿ ಶ್ರೀ ಮಂಗಳನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಮಂಚನಬಲೆ ಗ್ರಾಮದ ಬಿಜಿಎಸ್ ವಿದ್ಯಾನಿಕೇತನ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮಾತೃ ಭೋಜನ ಕಾರ್ಯಕ್ರಮ ಮತ್ತು ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಪಾಠ ಪ್ರವಚನಗಳು ಎಲ್ಲ ಶಾಲೆಗಳಲ್ಲಿಯೂ ಆಗುತ್ತದೆ. ಆದರೆ ಮಾತೃಭೋಜನದಂತಹ ಕಾರ್ಯಕ್ರಮಗಳು ನಮ್ಮ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಎಲ್ಲಾ ಶಾಲೆಗಳಲ್ಲಿ ಕಳೆದರೆಡು ದಶಕಗಳಿಂದ ನಡೆಯುತ್ತಿದೆ ಎಂದರು.

ಮಾತೃದೇವೂ ಭವ:

ದೇವರು ಎಲ್ಲಕಡೆ ಇರಲು ಆಗುವುದಿಲ್ಲವೆಂದ ತಾಯಿಯನ್ನು ಸೃಷ್ಟಿಸಿ ಅಮ್ಮನ ರೂಪದಲ್ಲಿ ನಮ್ಮೆಲ್ಲರಿಗೂ ನೀಡಿದ್ದಾನೆ. ವೇದ-ಉಪನಿಷತ್, ಪುರಾಣ ಮತ್ತು ಗಾದೆಗಳಲ್ಲೂ ಸಹಾ ಮಾತೃದೇವೂ ಭವ ಎಂದೇ ಮೊದಲು ಹೇಳುವುದು. ತಾಯಿಗಿಂತ ದೇವರಿಲ್ಲ. ಆಕೆಯೇ ಒಂದು ದಿವ್ಯಶಕ್ತಿಯಾಗಿದ್ದಾಳೆ. ನಮ್ಮಲ್ಲಿ ಐಕ್ಯತೆ ಮೂಡಲು ತಾಯಿಯೇ ಕಾರಣಳಾಗಿದ್ದಾಳೆ. ಪ್ರತಿ ಮನೆಯಲ್ಲಿ ತಾಯಿಯ ಪಾತ್ರ ಬಹುಮುಖ್ಯ. ತಾಯಿಯು ಸರಿಯಾಗಿ ಗಮನ ಹರಿಸಿದರೆ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ. ಮಕ್ಕಳಿಗೆ ಮಾತೃ ಪ್ರೇಮದ ಸವಿ ತುತ್ತು ಉಣಿಸುವ ಈ ಕಾರ್ಯಕ್ರಮ ತುಂಬಾ ಅಥಪೂರ್ಣ ಮತ್ತು ವೈಶಿಷ್ಟ್ಯವಾಗಿದೆ ಎಂದು ಹೇಳಿದರು.

ಅಂಕಪಟ್ಟಿಗೆ ಸೀಮಿತವಲ್ಲ

ಬಿಜಿಎಸ್ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್. ಶಿವರಾಮರೆಡ್ಡಿ ಮಾತನಾಡಿ, ಎಲ್ಲಾ ಶಾಲೆಗಳಂತೆ ನಮ್ಮ ಶಾಲೆ ಕೇವಲ ಅಂಕಪಟ್ಟಿ ವಿತರಿಸುವ ಸಂಸ್ಥೆಯಾಗಿಲ್ಲ. ನಾವು ಮಕ್ಕಳಿಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಾಗೂ ಸ್ವ-ಕೌಶಲದಿಂದ ಜೀವನವನ್ನು ಅತ್ಯಂತ ಸುಂದರವಾಗಿ ನಡೆಸುವ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುತ್ತಿದ್ದೇವೆ. ಪ್ರತಿಯೊಬ್ಬ ಮಗುವಿನ ಜೀವನ ರೂಪಿಸುವಲ್ಲಿ, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಬಿಜಿಎಸ್ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

ಮಕ್ಕಳಿಗಾಗಿ ಪೋಷಕರು ಅಕ್ಕಿರೊಟ್ಟಿ,ರಾಗಿರೊಟ್ಟಿ, ಜೋಳದ ರೊಟ್ಟಿ, ಪೂರಿ, ತರಕಾರಿ ಪಲಾವ್,ಹೋಳಿಗೆ, ಕೇಸರಿ ಬಾತ್,ರವೆ ಉಂಡೆ, ಲಾಡು, ಉಪ್ಪಿಟ್ಟು, ಚಿತ್ರಾನ್ನ, ಮೊಸರನ್ನ, ಅನ್ನ ಸಾಂಬಾರ್, ರಸಂ, ಕೋಸಂಬರಿ, ವಡೆ,ಪಾಯಸ ಸೇರಿದಂತೆ ವಿವಿಧ ಬಗೆಯ ಅಡುಗೆ ಸಿದ್ಧಪಡಿಸಿಕೊಂಡು ಬಂದಿದ್ದರು.

ಸಾಮೂಹಿಕ ಭೋಜನ:

ಅವರಿವರೆನ್ನದೆ ಎಲ್ಲರೂ ಬಡಿಸಿದ ಊಟವನ್ನು ಸವಿದ ಮಕ್ಕಳ ಮೊಗದಲ್ಲಿ ಸಂತಸ ಮನೆ ಮಾಡಿದರೆ, ಊಣ ಬಡಿಸಿದ ತಾಯಂದಿರಲ್ಲಿ ಧನ್ಯತೆಯ ಭಾವ ಕಂಡುಬಂತು. ಮಾತೃ ಭೋಜನ’ದಲ್ಲಿ ಜಾತಿ, ಭೇದ ಮರೆತು ವಿದ್ಯಾರ್ಥಿಗಳು ತಾಯಂದಿರ ಕೈ ತುತ್ತು ಸವಿದು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಮಂಗಳನಾಥ ಸ್ವಾಮೀಜಿ ಕಾರ್ಯಕ್ರಮದ ಅತಿಥಿಗಳೊಂದಿಗೆ ಪಂಕ್ತಿ ಭೋಜನ ಮಾಡಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು.

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ಧೇಶಕ ರವಿಕುಮಾರ್, ಶಾಲೆಯ ಪ್ರಾಶುಪಾಲ ಜಿ.ವಿ.ಗಂಗಾಧರ್, ಮುಖ್ಯೋಪಾಧ್ಯಾಯ ಬೋರಯ್ಯ, ಶಿಕ್ಷಕ ಮುಖಂಡರಾದ ಸಿಎಸ್ಎನ್ ರಮೇಶ್, ರಾಜಣ್ಣ, ವೆಂಕಟನಾರಾಯಣ್,ಗಂಗಾಧರ್, ವೆಂಕಟೇಶ್, ಮಂಚನಬಲೆ ಶ್ರೀನಿವಾಸ್, ಸೊಣ್ಣೇಗೌಡ,ರಾಜೇಶ್, ಹರೀಶ್, ದಿಲೀಪ್, ಶಾಲೆಯ ಭೋಧಕ ಮತ್ತು ಭೋಧಕೇತರ ಸಿಬ್ಬಂಧಿ, ಶಾಲೆಯ ಹಿರಿಯ ವಿಧ್ಯಾರ್ಥಿಗಳು, ವಿಧ್ಯಾರ್ಥಿಗಳು, ಪೋಷಕರು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ