ತಿಪಟೂರು: ವಿದ್ಯಾರ್ಥಿಗಳೇ ನೀವು ಸಾಧಕರಾಗಬೇಕಾದರೆ ರಾತ್ರಿ ಕನಸು ಕಾಣುವುದಲ್ಲ, ಅದನ್ನು ನನಸಾಗಿಸಲು ಬೇಕಾದ ಪ್ರಯತ್ನ, ಗುರಿ, ಶ್ರದ್ಧೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಸಾಧನೆಯತ್ತ ಮುನ್ನುಗ್ಗಿದಾಗ ಮಾತ್ರ ಸಾಧಕರಾಗಲು ಸಾಧ್ಯ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಆರ್. ಚೇತನ್ ತಿಳಿಸಿದರು.
ಐಟಿಐ ಕಾಲೇಜಿನ ಉಪನ್ಯಾಸಕ ವೆಂಕಟೇಶ್ ಮೂರ್ತಿ ಮಾತನಾಡಿ, ಅನುಭವ ಇಲ್ಲದಾಗ ತಪ್ಪುಗಳನ್ನು ಮಾಡುತ್ತೇವೆ. ತಿದ್ದಿಕೊಂಡು ಬದುಕಿದರೆ ಬದುಕು ಅರ್ಥಪೂರ್ಣವಾಗುತ್ತದೆ. ನೀವು ಮಾಡುವ ಶ್ರಮದಾನವೂ ಎಲ್ಲದಕ್ಕಿಂತಲೂ ಶ್ರೇಷ್ಠವಾಗಿದೆ. ಯಾವುದೇ ಕೆಲಸವನ್ನು ಮುಜುಗರ ಬಿಟ್ಟು ಹಳ್ಳಿ ಹಳ್ಳಿಗಳಲ್ಲಿ ಸಮಾಜದ ಒಳಿತಿಗಾಗಿ ಕೆಲಸವನ್ನು ಮಾಡಬೇಕು. ವಿದ್ಯಾರ್ಥಿಗಳು ಸಹಕಾರ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಎಚ್.ಬಿ. ಕುಮಾರಸ್ವಾಮಿ ಮಾತನಾಡಿ, ಸ್ವಯಂ ಸೇವಕರು ಶಿಸ್ತು, ಸಂಯಮ, ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕೂಡ ಭಾಗಿಯಾಗಿ ಎಲ್ಲ ರಂಗಗಳಲ್ಲೂ ಸರ್ವತೋಮುಖ ಅಭಿವೃದ್ಧಿ ಆಗಬೇಕೆಂದು ತಿಳಿಸಿದರು.ಪಿಡಿಒ ಶಿವನಂಜೇಗೌಡ, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಎಂ.ಆರ್. ಚಿಕ್ಕಹೆಗ್ಗಡೆ, ಡಾ ಶಶಿಕುಮಾರ್. ಪ್ರೊ. ಸ್ಮಿತಾ, ಭಾರತಿ, ಡಾ. ಎಲ್.ಎಂ. ವೆಂಕಟೇಶ್, ಪ್ರೊ. ಜ್ಯೋತಿ. ಪ್ರೊ ಜಾಹಿರಾ, ಶಶಿಕುಮಾರ್, ಉದ್ಯಮಿ ಪ್ರವೀಣ್, ಲಿಖಿತ್‌ಗೌಡ, ನಿಜಗುಣ, ಗುರು ಕರಿಸಿದ್ಧೇಶ್ವರ ಮಠದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.