ಮಂಗನ ಕಾಯಿಲೆ ಉಲ್ಬಣ ಆಗದಿರಲಿ: ಶಾಸಕ ಭೀಮಣ್ಣ ನಾಯ್ಕ

KannadaprabhaNewsNetwork |  
Published : Jan 20, 2024, 02:02 AM IST
ಸಿದ್ದಾಪುರದಲ್ಲಿ ಭೀಮಣ್ಣ ನಾಯ್ಕ ಮಂಗನಕಾಯಿಲೆ ಕುರಿತು ತುರ್ತು ಸಭೆ ನಡೆಸಿದರು. | Kannada Prabha

ಸಾರಾಂಶ

ಸಿದ್ದಾಪುರ ತಾಲೂಕಿನ ಮೂವರಿಗೆ ಮಂಗನ ಕಾಯಿಲೆ ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಶುಕ್ರವಾರ ತುರ್ತು ಸಭೆ ನಡೆಸಿ ರೋಗ ಉಲ್ಬಣಗೊಳದಂತೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಿದ್ದಾಪುರ:

ತಾಲೂಕಿನ ಮೂವರಿಗೆ ಮಂಗನ ಕಾಯಿಲೆ ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಭೀಮಣ್ಣ ನಾಯ್ಕ ಶುಕ್ರವಾರ ತುರ್ತು ಸಭೆ ನಡೆಸಿ ರೋಗ ಉಲ್ಬಣಗೊಳದಂತೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಾಡಳಿತ ಸೌಧದಲ್ಲಿ ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ನೋಡೆಲ್ ಅಧಿಕಾರಿಗಳ ಸಭೆ ನಡೆಸಿ ಮಂಗನ ಕಾಯಿಲೆ ಕುರಿತು ಗ್ರಾಮೀಣ ಭಾಗದ ಜನರಿಗೆ ಸಂಪೂರ್ಣ ಅರಿವು ಮೂಡಿಸಬೇಕು ಎಂದರು.ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಕಾಡಿಗೆ ಹೋಗುವಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಬೇಕು. ಅಲಲ್ಲಿ ಶಿಬಿರ ನಡೆಸಿ ಸರಿಯಾದ ಸಲಹೆ ನೀಡಬೇಕು. ಶಾಲೆಗೆ ಹೋಗುವ ಮಕ್ಕಳಿಗೂ ಕೂಡ ಸುರಕ್ಷತಾ ಕ್ರಮದೊಂದಿಗೆ ಹೋಗುವಂತೆ ತಿಳಿಸಬೇಕು. ಬೇಸಿಗೆ ಅಂತ್ಯದ ವರೆಗೆ ಸಂಬಂಧಿಸಿದ ಅಧಿಕಾರಿಗಳು ರಜೆ ಮೇಲೆ ತೆರಳದಂತೆ ನೋಡಿಕೊಳ್ಳಿ. ವೈದ್ಯರು ಹಾಗೂ ಸಿಬ್ಬಂದಿ ಎರಡು ತಂಡವಾಗಿ ಗ್ರಾಮೀಣ ಭಾಗಕ್ಕೆ ತೆರಳಿ ಜಾಗೃತಿ ಶಿಬಿರ ನಡೆಸಿ ಅರಿವು ಮೂಡಿಸಬೇಕು ಎಂದ ಅವರು, ರೋಗಿಗಳ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಭರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ನೀರಜ್ ಬಿ.ವಿ. ಮಾತನಾಡಿ, ಮಂಗನ ಕಾಯಿಲೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಕಾಯಿಲೆ ಪತ್ತೆಯಾದ ಸ್ಥಳಕ್ಕೆ ತೆರಳಿ ಜನರಿಗೆ ಅರಿವು ಮೂಡಿಸಲಾಗಿದೆ. ತಾಲೂಕು ಆರೋಗ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಜಾಗೃತಿ ಶಿಬಿರ ನಡೆಸಿ ರೋಗದ ಲಕ್ಷಣ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಲಿದೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ ಮಾಹಿತಿ ನೀಡಿ, ತಾಲೂಕಿನಲ್ಲಿ ೨೦೧೯ರಿಂದ ಮಂಗನ ಕಾಯಿಲೆ ಪ್ರಾರಂಭವಾಗಿದೆ. ಕಳೆದ ವರ್ಷ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಈ ಬಾರಿ ಮೂರು ಕೇಸ್ ಪತ್ತೆಯಾಗಿವೆ. ಲಸಿಕೆ ಪಡೆಯದಿರುವ ಜನರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮಂಗ ಸತ್ತರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದ ಅವರು, ಈಗಾಗಲೇ ೩೪ ಜನರ ಸ್ಯಾಂಪಲ್ ತೆಗೆದಿದ್ದು, ಮೂವರಿಗೆ ಕೆಎಫ್‌ಡಿ ದೃಢಪಟ್ಟಿದೆ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದರು.ಈ ವೇಳೆ ತಾಲೂಕು ದಂಡಾಧಿಕಾರಿ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಆರ್‌ಎಎಫ್‌ಒಗಳಾದ ಗಿರೀಶ ನಾಯ್ಕ, ಬಸವರಾಜ ಬೋಚಳ್ಳಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

PREV

Recommended Stories

‘ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ತನ್ನಿ’ : ನಾರಾಯಣಗೌಡ
ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ