ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಜಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ ಕನಕದಾಸರನ್ನು ಯಾವುದೇ ಜಾತಿಗೆ ಸೀಮಿತಗೊಳಿಸುವ ಮಾನಸಿಕ ಸಂಕುಚಿತ ಭಾವನೆಯಿಂದ ಸಮಾಜ ಹೊರಬರಬೇಕಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎಸ್. ರಘು ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ವತಿಯಿಂದ ಮಂಗಳವಾರ ಆಯೋಜಿಸಿದ್ದ ತ್ಯಾಗರ್ತಿ ಗೌರಮ್ಮ ಮತ್ತು ಸಿದ್ದಪ್ಪ ದತ್ತಿ ಹಾಗೂ ಸಂಜೀವಮ್ಮ ನಾರಾಯಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾರ್ಶನಿಕರು ನಾಡಿಗೆ ಮಾನವೀಯ ಗುಣಗಳ ಸಂದೇಶ ಸಾರಿದ್ದಾರೆ. ಜಾತಿ ವ್ಯವಸ್ಥೆ ವಿರುದ್ಧ ಧ್ಚನಿ ಎತ್ತಿದ ಬಸವಣ್ಣ, ಕನಕದಾಸರು ಸೇರಿದಂತೆ ಹಲವು ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಜಾತಿ ಸಂಕೋಲೆಗೆ ಸೀಮಿತಗೊಳಿಸುವ ಮಾನಸಿಕ ಸಿನಿಕತನದಿಂದ ಸಮಾಜ ಹೊರಬರಬೇಕಾಗಿದೆ ಎಂದು ತಿಳಿಸಿದರು.ಕನ್ನಡ ಭಾಷೆ ಬಗ್ಗೆ ವಿದ್ಯಾರ್ಥಿಗಳು ಅಭಿಮಾನ ಬೆಳೆಸಿಕೊಳ್ಳಬೇಕು. ಸಾಹಿತ್ಯ ಕ್ಷೇತ್ರದ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ಕವಿಗಳಾಗಿ, ಲೇಖಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವ ರೀತಿಯಲ್ಲಿ ವ್ಯಕ್ತಿತ್ವವನ್ನು ಬೆಳಸಿಕೊಳ್ಳುವಂತೆ ಸಲಹೆ ನೀಡಿದರು.
ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಕುರಿತು ಸರ್ಕಾರಿ ಸ್ವಾತಂತ್ರ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕ ಬಂಗಾರಪ್ಪ ಮಾತನಾಡಿ, ಅನುಭಾವ ಹಾಗೂ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ದಾಸ ಸಾಹಿತ್ಯ ಜನ್ಮತಾಳಿದೆ. ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರವಾಗಿದೆ. ಕನಕದಾಸರು ಜಾತಿ ಮೀರಿ ಬದುಕುವ ಸಂದೇಶ ಸಾರಿದ್ದಾರೆ. ಆದ್ದರಿಂದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದರು.ಮಾನವೀಯ ಮೌಲ್ಯಗಳ ಕುರಿತು ಜೆಸಿಐ ಸಂಸ್ಥೆ ತರಬೇತುದಾರ ಜಿ.ಎಂ. ದಿನೇಶ್ ಆಚಾರ್ ಮಾತನಾಡಿ, ಶ್ರದ್ಧೆ, ಸತ್ಯ, ಪ್ರಾಮಾಣಿಕತೆ, ಅಹಿಂಸೆ ಸೇರಿದಂತೆ ಹಲವು ಮಾನವೀಯ ಮೌಲ್ಯಗಳು ಮನುಷ್ಯನ ಸದೃಢ ಬದುಕಿಗೆ ಆಧಾರ ಸ್ತಂಭಗಳಾಗಿವೆ. ಜೀವನದಲ್ಲಿ ಯಶಸ್ಸು ಸಾಧಿಸಲು ಮಾನವೀಯ ಮೌಲ್ಯಗಳು ಪ್ರಮುಖ ಪಾತ್ರ ವಹಿಸಲಿವೆ. ವಿದ್ಯಾರ್ಥಿ ಜೀವನದಿಂದಲೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಘು ಅಧ್ಯಕ್ಷತೆಯಲ್ಲಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚಟುವಟಿಕೆಗಳು ಕ್ರಿಯಾಶೀಲವಾಗಿ ನಡೆಯುತ್ತಿವೆ ಎಂದು ಪ್ರಶಂಸಿಸಿದರು.
ಸರ್ಕಾರಿ ಬಾಲಕಿಯರ ಪದವಿಪೂರ್ವ ಪ್ರಾಂಶುಪಾಲ ಕೆ.ಪಿ.ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಿದರು. ಕನಕದಾಸರ ಕುರಿತು ಕಸಾಪ ಕಾರ್ಯಕಾರಿ ಸಮಿತಿ ಸದಸ್ಯೆ ನಂದಾ ಪ್ರೇಮ್‌ಕುಮಾರ್ ಕವನ ವಾಚಿಸಿದರು.ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎಸ್. ಹುಚ್ರಾಯಪ್ಪ, ಕಾರ್ಯಕ್ರಮ ಸಂಚಾಲಕ ಕೆ.ಎಚ್. ಪುಟ್ಟಪ್ಪ, ಜೆಸಿಐ ಚಂದನ ಶಿಕಾರಿಪುರ ಖಜಾಂಚಿ ಹದಡಿ ಪ್ರವೀಣ್ ಉಪಸ್ಥಿತರಿದ್ದರು.
- - - -26ಕೆಎಸ್.ಕೆಪಿ5:ಶಿಕಾರಿಪುರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ದತ್ತಿ ಕಾರ್ಯಕ್ರಮವನ್ನು ಪ್ರಾಚಾರ್ಯ ಮಲ್ಲಿಕಾರ್ಜುನ್ ಉದ್ಘಾಟಿಸಿದರು.