ಕಾರಟಗಿ: ರಾಜ್ಯದ ಹಲವು ಸ್ಥಳಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಲು ಮದಕರಿ ನಾಯಕ ಮುಖ್ಯ ಕಾರಣ. ಒಂದು ಜಾತಿಗೆ ಮದಕರಿ ಅವರನ್ನು ಸೀಮಿತ ಮಾಡದೆ ಎಲ್ಲರೂ ಅವರ ಸಾಧನೆ ಮೈಗೂಡಿಸಿಕೊಳ್ಳಬೇಕಿದೆ ಎಂದು ವಾಲ್ಕೀಕಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸೋಮನಾಥ್ ಹೆಬ್ಬಡದ ಹೇಳಿದರು.
ಇಲ್ಲಿನ ತಾಲೂಕು ವಾಲ್ಮೀಕಿ ಮಹಾಸಭಾದ ಕಚೇರಿಯಲ್ಲಿ ನಡೆದ ಗಂಡುಗಲಿ ರಾಜವೀರ ಮದಕರಿ ನಾಯಕರ ಜಯಂತಿ ನಿಮಿತ್ತ ಮದಕರಿ ನಾಯಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.ಶೌರ್ಯ,ಪರಾಕ್ರಮಕ್ಕೆ ರಾಜವೀರ ಮದಕರಿ ನಾಯಕ ಹೆಸರು ವಾಸಿಯಾಗಿದ್ದು, ರಾಜ್ಯದ ಕಲೆ, ಸಾಹಿತ್ಯ ಹಾಗೂ ವಾಸ್ತುಶಿಲ್ಪಕ್ಕೆ ಇವರ ಕೊಡುಗೆ ಅನನ್ಯ ಮತ್ತು ಸ್ಮರಣೀಯ ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ಕೇವಲ ೧೨ವರ್ಷದಲ್ಲಿಯೇ ಚಿತ್ರದುರ್ಗ ಸಿಂಹಾಸನ ಅಲಂಕರಿಸಿದ ಈ ಧೀರ ನಂತರ ಮಾಡಿದ್ದೆಲ್ಲ ಇತಿಹಾಸ. ಚಿತ್ರದುರ್ಗ ಸಿಂಹಾಸನದ ಮೇಲೆ ಅದೇಷ್ಟೋ ದುಷ್ಕರ್ಮಿಗಳ ಕಣ್ಣು ಸದಾ ಇರುತ್ತಿತ್ತು. ಹಲವಾರು ಪಿತೂರಿ ಮಾಡುತ್ತಿದ್ದ ಅದೇಷ್ಟೋ ದುಷ್ಟ ಸೈನ್ಯಗಳ ವಿರುದ್ಧ ಹೋರಾಡಿ ಶತ್ರುಗಳ ರುಂಡ ಚೆಂಡಾಡಿದ ಈ ರಾಜ ವೀರಮದಕರಿ ನಾಯಕನ ಸಾಹಸಕ್ಕೆ ಇದು ಸಾಕ್ಷಿ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ ಮಾತನಾಡಿ, ಮದಕರಿ ನಾಯಕರು ತಮ್ಮ ಆಡಳಿತಾವಧಿಯಲ್ಲಿ ಸಂಸ್ಥಾನ ಬಲಪಡಿಸುವಲ್ಲಿ,ರಾಜ್ಯವನ್ನು ಸುಭಿಕ್ಷೆಯಿಂದ ಇಟ್ಟುಕೊಳ್ಳಲು ವಿಭಿನ್ನ ಯೋಜನೆ ರೂಪಿಸಿದ್ದರು. ಐತಿಹಾಸಿಕ ಚಿತ್ರದುರ್ಗದ ಕೋಟೆ ಸುತ್ತಲು ಕೆರೆ-ಕಟ್ಟೆ, ಮಠ ಮಂದಿರ ನಿರ್ಮಿಸಿ ಎಲ್ಲ ಧರ್ಮ, ಜಾತಿಯವರಿಗೂ ಮಾನ್ಯತೆ ನೀಡಿ,ಸಮಾಜಮುಖಿ ಕೆಲಸ ಮಾಡಿದ್ದರು. ಏಳು ಸುತ್ತಿನ ಕೋಟೆ ಆಳಿದ ಸ್ವಾಭಿಮಾನಿ, ಸಾಹಸಿ, ನಿರ್ಭೀತ ನಡೆಯ ಮದಕರಿ ನಾಯಕರು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದಾರೆ ಎಂದರು.ನ್ಯಾಯವಾದಿ ಶಿವರೆಡ್ಡಿ ನಾಯಕ ಮಾತನಾಡಿ, ರಾಜ ವೀರ ಮದಕರಿ ನಾಯಕರು ಚಿತ್ರದುರ್ಗ ಮಾತ್ರವಲ್ಲದೇ ಕನ್ನಡ ನಾಡಿನ ಜನರ ಅಸ್ಮಿತೆಯಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಚಿತ್ರದುರ್ಗ ಸೇರಿದಂತೆ ರಾಜ್ಯದ ಯಾವುದಾದರೂ ಪ್ರಮುಖ ಸ್ಥಳಗಳಲ್ಲಿ ಅವರ ಭವ್ಯ ಸ್ಮಾರಕ ನಿರ್ಮಿಸಬೇಕು ಎಂದು ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಮಹಾಸಭಾದ ತಾಲೂಕಾಧ್ಯಕ್ಷ ಗಿರಿಯಪ್ಪ ಬೂದಿ, ದುರುಗೇಶ ಪ್ಯಾಟ್ಯಾಳ, ರಮೇಶ ನಾಡಿಗೇರ್ ಡಾ. ಹನುಮಂತಪ್ಪ ಚಂದಲಾಪುರ, ಸೋಮಶೇಖರ ನಾಯಕ, ಬಸವರಾಜ ಪೂಲದಿನ್ನಿ, ಗ್ರಾಪಂ ಅಧ್ಯಕ್ಷ ವೀರೇಶ ಮೈಲಾಪುರ, ದೇವರಾಜ್ ನಾಯಕ, ಶರಣಪ್ಪ ಚಾಗಿ, ಬಸವರಾಜ ನಾಯಕ ಬೂದಗುಂಪಾ, ವೀರೇಶ ಬನ್ನಿಕಟ್ಟಿ, ಹನುಮಂತ ಮೈಲಾಪುರ, ವೆಂಕೋಬ ನಾಯಕ ಚಳ್ಳೂರು, ರಮೇಶಪ್ಪ ಹಿರೇಮನಿ, ಮಂಜುನಾಥ್ ನಾಯಕ, ಯಮನೂರಪ್ಪ ಸೋಮನಾಳ, ದುರುಗಪ್ಪ ನರೇರ್, ಯಮನೂರಪ್ಪ ಸೋಮನಾಳ, ಸೋಮಣ್ಣ ರಾಟಿ, ತಿಮ್ಮಣ್ಣ ಶರಣರು ನಾಗನಕಲ್ ಇನ್ನಿತರರು ಇದ್ದರು.