ಆಸೆಗಳಿಗಾಗಿ ಬದುಕಬೇಡ ಆದರ್ಶಕ್ಕಾಗಿ ಬದುಕು : ರಂಭಾಪುರಿ ಶ್ರೀ

KannadaprabhaNewsNetwork |  
Published : Aug 27, 2024, 01:39 AM IST
೨೬ಬಿಹೆಚ್‌ಆರ್ ೭: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಧರ್ಮ ಸಮಾರಂಭದಲ್ಲಿ ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಸಂಪಾದಿಸಿದ ವರ್ಷದ ವಾರ್ತಾ ಸಂಕಲನವನ್ನು ಶ್ರೀ ರಂಭಾಪುರಿ ಜಗದ್ಗುರುಗಳು. | Kannada Prabha

ಸಾರಾಂಶ

ಬಾಳೆಹೊನ್ನೂರು, ಮಾನವನ ಬದುಕು ಮೌಲ್ಯವುಳ್ಳದ್ದು. ಮನುಷ್ಯನಲ್ಲಿ ಆಸೆ, ಆಕಾಂಕ್ಷೆಗಳು ಇರುವುದು ಸಹಜ. ಆದರೆ ಆಸೆಗಳಿಗಾಗಿ ಬದುಕದೇ ಆದರ್ಶಗಳಿಗಾಗಿ ಬದುಕಬೇಕೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಾನವನ ಬದುಕು ಮೌಲ್ಯವುಳ್ಳದ್ದು. ಮನುಷ್ಯನಲ್ಲಿ ಆಸೆ, ಆಕಾಂಕ್ಷೆಗಳು ಇರುವುದು ಸಹಜ. ಆದರೆ ಆಸೆಗಳಿಗಾಗಿ ಬದುಕದೇ ಆದರ್ಶಗಳಿಗಾಗಿ ಬದುಕಬೇಕೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಸೋಮವಾರ ನಡೆದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಮನುಷ್ಯ ಸಂತೋಷದಿಂದ ಬದುಕಲು ಪ್ರಯತ್ನಿಸಬೇಕು. ನೀತಿ ನಿಯಮ ಇಲ್ಲದೇ ಸಮಾಜ ನಾಡು ಬೆಳೆಯ ಲಾರದು. ಸಂಜೆಯಾದಂತೆ ಸೂರ್ಯ ಮಾತ್ರ ಮುಳುಗುವುದಿಲ್ಲ. ನಮ್ಮ ವಯಸ್ಸಿನ ಒಂದು ದಿನ ಕಡಿಮೆಯಾಗುತ್ತದೆ.

ಒಳ್ಳೆಯ ಸಂಸ್ಕಾರ ಪಡೆದರೆ ಜೀವನದಲ್ಲಿ ಸಫಲರಾಗುತ್ತೇವೆ. ಮನಃ ಶಾಂತಿಯಿಲ್ಲದ ಸಂಪತ್ತು, ಆರೋಗ್ಯ ಇಲ್ಲದ ಆಯುಷ್ಯ, ಅರ್ಥ ಮಾಡಿಕೊಳ್ಳದ ಸಂಬಂಧ, ಅಕ್ಕರೆಯಿಲ್ಲದ ವ್ಯವಹಾರಿಕ ಸ್ನೇಹದಿಂದ ಯಾವ ಪ್ರಯೋಜನ ಇರುವುದಿಲ್ಲ. ದೀರ್ಘವಾದ ಜೀವನ ಮುಖ್ಯವಲ್ಲ. ದಿವ್ಯವಾದ ಜೀವನವೇ ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ ಎಂದರು.ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ಉಟಗಿ ಹಿರೇಮಠದ ಶಿವಪ್ರಸಾದ ಮಾತನಾಡಿ, ಬಿತ್ತಿದ ಬೀಜದಂತೆ ಫಸಲು ಹೇಗೋ ಹಾಗೆಯೇ ನಮ್ಮ ಆಚರಣೆಯಂತೆ ಫಲ ಪ್ರಾಪ್ತಿಯಾಗುತ್ತದೆ. ಉಜ್ವಲ ಭವಿಷ್ಯಕ್ಕೆ ಭಗವಂತನ ಕೊಡುಗೆ ಅಪಾರ. ತೆನೆ ಬಿಟ್ಟ ಪೈರು, ಗೊನೆ ಬಿಟ್ಟ ಬಾಳೆ, ಫಲ ಬಿಟ್ಟ ಗಿಡ ಬಾಗುತ್ತದೆ. ಏನೂ ಕೊಡದ ಜಂಭದ ಈ ದೇಹ ಬೀಗುತ್ತದೆ. ಬೀಗುವುದು ಸದ್ಗುಣವಲ್ಲ ಬಾಗುವುದು ಸದ್ಗುಣ. ಜಗದ್ಗುರು ರೇಣುಕಾಚಾರ್ಯರ ಲೋಕೋದ್ಧಾರದ ಚಿಂತನೆಗಳು ಎಲ್ಲ ಕಾಲಕ್ಕೂ ಎಲ್ಲರಿಗೂ ಅನ್ವಯಿಸುತ್ತವೆ ಎಂದರು. ನೇತೃತ್ವ ವಹಿಸಿದ ಹುಡಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು ಮಾತನಾಡಿ, ಗುರುವಿಲ್ಲದೇ ಅರಿವು ಮೂಡದು. ವಿದ್ಯೆ ಬುದ್ಧಿ ಸಿದ್ಧಿಸದು. ಸನ್ನಡತೆ ವಿನಯ ವಿಧೇಯತೆಗಳು ಬೆಳೆಯಲು ಸಾಧ್ಯವಿಲ್ಲ. ಶಿವಪಥವನರಿಯಲು ಗುರು ಮಾರ್ಗ ದರ್ಶನ ಅವಶ್ಯಕ ಎಂದರು. ಇದೇ ಸಂದರ್ಭದಲ್ಲಿ ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಸಂಪಾದಿಸಿದ ವರ್ಷದ ವಾರ್ತಾ ಸಂಕಲನವನ್ನು ಶ್ರೀ ರಂಭಾಪುರಿ ಜಗದ್ಗುರು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ನಾಲವಾರ ಆದಿಶೇಷ ಹಿರೇಮಠದ ಚಂದ್ರಶೇಖರ ಸ್ವಾಮಿ, ಸಿಂದಗಿಯ ವೀರರಾಜೇಂದ್ರ ಸ್ವಾಮಿ, ಹಾರನ ಹಳ್ಳಿ ಶಿವಯೋಗಿ ಶಿವಾಚಾರ್ಯರು, ಹೊನ್ನಾಳಿ ಡಾ.ಎಂ. ಶಿವಶಂಕರಯ್ಯ, ಹಾವೇರಿ ಎಸ್.ಎನ್.ಹಿರೇಮಠ ಹಾಗೂ ಯಡ್ರಾಮಿ ಚಂದ್ರಶೇಖರ ಪುರಾಣಿಕಮಠ, ಗುರುಕುಲದ ಸಿದ್ಧಲಿಂಗಯ್ಯ ಹಿರೇಮಠ, ಜಮಖಂಡಿ ರೇವಣಯ್ಯಸ್ವಾಮಿ, ಕುರುಗೋಡಿನ ಯರಿಸ್ವಾಮಿ, ರೇವತಗಾಂವ ವಿಶ್ವನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.ಬೆಳಿಗ್ಗೆ ಶ್ರಾವಣ ಮಾಸದ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಕ್ಷೇತ್ರದ ಎಲ್ಲ ದೈವಗಳಿಗೆ ಶ್ರಾವಣ ಸೋಮವಾರದ ವಿಶೇಷ ಪೂಜೆ ಹಾಗೂ ಪುಷ್ಪಾಲಂಕಾರ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಗುರು ಕಾರುಣ್ಯ ಪಡೆದರು. ಸಮಾರಂಭದ ನಂತರ ಕಬನೂರು ಭಕ್ತ ಮಂಡಳಿಯಿಂದ ಅನ್ನ ದಾಸೋಹ ನೆರವೇರಿತು. ೨೬ಬಿಹೆಚ್‌ಆರ್ ೭: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಧರ್ಮ ಸಮಾರಂಭದಲ್ಲಿ ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಸಂಪಾದಿಸಿದ ವರ್ಷದ ವಾರ್ತಾ ಸಂಕಲನವನ್ನು ಶ್ರೀ ರಂಭಾಪುರಿ ಜಗದ್ಗುರುಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!