ಸಮಾಜ ವಿಷಯದಲ್ಲಿ ರಾಜಕೀಯ ಬೆರೆಸೋದು ಬೇಡ: ಸಂಸದ ಗದ್ದಿಗೌಡರ

KannadaprabhaNewsNetwork |  
Published : Jul 07, 2025, 11:48 PM IST
(ಫೋಟೋ 6ಬಿಕೆಟಿ2, ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು.) | Kannada Prabha

ಸಾರಾಂಶ

ಸಮಾಜದ ಹಲವಾರು ನಾಯಕರು ವಿವಿಧ ರಾಜಕೀಯ ಪಕ್ಷದಲ್ಲಿದ್ದಾರೆ. ಸಮಾಜ ವಿಷಯ ಬಂದಾಗ ಪ್ರತಿಯೊಬ್ಬರೂ ಒಂದಾಗುವ ಮೂಲಕ ರಾಜಕೀಯ ಬೆರೆಸದೇ ಸಮಾಜದ ಪರ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಪ್ರತಿಯೊಬ್ಬರು ಒಂದೇ ಭಾವನೆಯಿಂದ ನಡೆದಾಗ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಮಾಜದ ಹಲವಾರು ನಾಯಕರು ವಿವಿಧ ರಾಜಕೀಯ ಪಕ್ಷದಲ್ಲಿದ್ದಾರೆ. ಸಮಾಜ ವಿಷಯ ಬಂದಾಗ ಪ್ರತಿಯೊಬ್ಬರೂ ಒಂದಾಗುವ ಮೂಲಕ ರಾಜಕೀಯ ಬೆರೆಸದೇ ಸಮಾಜದ ಪರ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಪ್ರತಿಯೊಬ್ಬರು ಒಂದೇ ಭಾವನೆಯಿಂದ ನಡೆದಾಗ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ತಾಲೂಕು ಗಾಣಿಗ ಸಮಾಜ ಹಾಗೂ ಜ್ಯೋತಿ ಕೋ ಆಪ್ ಕ್ರೇಡಿಟ್ ಸೊಸೈಟಿ ಸಹಯೋಗದಲ್ಲಿ ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬೇರೆ ಬೇರೆ ಪಕ್ಷದಲ್ಲಿ ಕೆಲಸ ಮಾಡುವ ಜೊತೆಗೆ ಸಮಾಜ ಎಂದು ಬಂದಾಗ ಕುಟುಂಬದಂತೆ ನಿಂತು ಕೆಲಸ ಮಾಡಿದಾಗ ಸಮಾಜಕ್ಕೆ ಒಳ್ಳೆಯದಾಗಲಿದೆ ಎಂದು ಹೇಳಿದರು.

ಸಮಾಜದ ಮುಖಂಡ ಬಸವಪ್ರಭು ಸರನಾಡಗೌಡರ ಮಾತನಾಡಿ, ಶಿಕ್ಷಣವಂತರಾದರೆ ಸಮಾಜ ಅಭಿವೃದ್ಧಿ ಹೊಂದಲಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಪಾಲಕರು ನೀಡಿದರೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳು, ಅಧಿಕಾರಿಗಳಾಗಿ ಹೊರಹೊಮ್ಮಲಿದ್ದಾರೆ ಎಂದು ಹೇಳಿದರು.

ನಮ್ಮ ಸಮುದಾಯದ ಹಲವಾರು ಮನೆತನದವರು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಾರೆ. ಆದರೆ ನಮ್ಮ ಸಮಾಜದಿಂದ ಒಂದು ಶಿಕ್ಷಣ ಸಂಸ್ಥೆಯಾದರೆ ಸಮುದಾಯದ ಮಕ್ಕಳಿಗೆ ನೆರವಾಗಲಿದೆ. ಆ ಕೆಲಸಕ್ಕೆ ಒತ್ತು ನೀಡಬೇಕು. ಸಮುದಾಯದ ಏಳ್ಗೆಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ ಅವರು, ಶಿಕ್ಷಣ ಸಂಸ್ಥೆ ಕಟ್ಟಲು ಮುಂದಾದರೆ ಸಮುದಾಯದ ಹಲವಾರು ಮುಖಂಡರು ದೇಣಿಗೆ ನೀಡುತ್ತಾರೆ. ಸಮಾಜಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದು ಹೇಳಿದರು.

ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಗಾಣಿಗ ಸಮಾಜ ಯಾರ ಬಳಿಯೂ ಕೈ ಒಡ್ಡಿ ಕೇಳುವುದಿಲ್ಲ. ಉತ್ತರ ಕರ್ನಾಟಕದ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಗಾಣಿಗ ಸಮಾಜದ ಮನೆತನದವರು ನೀಡಿದ ಭೂದಾನದಿಂದ ಇವತ್ತು ಶಿಕ್ಷಣ ಸಂಸ್ಥೆಗಳು ಹೆಮ್ಮರವಾಗಿ ಬೆಳೆದು ನಿಂತಿವೆ. ಶಿಕ್ಷಣ ಕ್ಷೇತ್ರಕ್ಕೆ ಗಾಣಿಗ ಸಮಜದ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಗಾಣಿಗ ಸಮಾಜ ದೊಡ್ಡದಿದೆ. ಜಾತಿ ಜನಗಣತಿ ಸಮೀಕ್ಷೆಗೆ ಬಂದಾಗ ಸಮಾಜದವರು ಜಾತಿ ಕಾಲಂದಲ್ಲಿ ಗಾಣಿಗ, ಧರ್ಮ ಹಿಂದೂ ಎಂದು ಬರೆಸಬೇಕು. ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಗಾಣಿಗ ಸಮಾಜದ ಸಮಾವೇಶ ನಡೆಸಲು ಸಿದ್ಧತೆ ನಡೆದಿದೆ ಎಂದರು. ಇದೇ ವೇಳೆ 2024-25ನೇ ಸಾಲಿನ ಎಸ್.ಎಸ್.ಎಸಲ್.ಸಿ. ಹಾಗೂ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ನೀವೃತ್ತ ನೌಕರರನ್ನು , ಸಾಧಕರನ್ನು ಸನ್ಮಾನಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಗಾಣಿಗ ಸಮಾಜದ ಗುರುಪೀಠದ ಡಾ.ಜಯಬಸವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾಧ್ಯಕ್ಷ ಅಶೋಕ ಲಾಗಲೋಟಿ ಮಾತನಾಡಿದರು.ಅಖಿಲ ಭಾರತ ಗಾಣಿಗ ಸಂಘದ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ, ಗಾಣಿಗ ಸಮಾಜದ ರಾಜ್ಯ ಯುವ ಘಟಕದ ಅಧ್ಯಕ್ಷ ದುಂಡಪ್ಪ ಏಳೆಮ್ಮಿ,ಎಪಿಎಂಸಿ ಮಾಜಿ ಅಧ್ಯಕ್ಷ ಕುಮಾರ ಯಳ್ಳಿಗುತ್ತಿ, ಯುವ ಮುಖಂಡ ಸಂತೋಷ ಹೋಕ್ರಾಣಿ, ಆರ್.ಜಿ.ಪಾಟೀಲ, ಸಿದ್ದಣ್ಣ ಕಾಖಂಡಕಿ, ನಿಂಗಣ್ಣ ಗೋಡಿ, ಕವಿತಾ ಏಳೆಮ್ಮಿ, ಪ್ರಶಾಂತ ಮಾಚಕನೂರ ಚಂದ್ರಕಾಂತ ಕೇಸನೂರ ಇದ್ದರು.

PREV