ಜಾತಿ ಸಮೀಕ್ಷೆ ತುರಾತುರಿಯಲ್ಲಿ ಕೈಗೊಳ್ಳಬೇಡಿ

KannadaprabhaNewsNetwork |  
Published : Sep 14, 2025, 01:06 AM IST
ಬೆಳಗಾವಿ | Kannada Prabha

ಸಾರಾಂಶ

ಅನಾವಶ್ಯಕ ಜಾತಿಗಳನ್ನು ಸೇರಿಸಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ಸರ್ಕಾರದ ನೀತಿ ಸರಿಯಲ್ಲ

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ಪ್ರಾರಂಭ ಮಾಡಲು ಸೆ.22ರಂದು ನಿಗದಿಗೊಳಿಸಿರುವುದನ್ನು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರು ತುರಾತುರಿಯಲ್ಲಿ ಕೈಗೊಳ್ಳದೆ, ಇನ್ನಷ್ಟು ಜನರಲ್ಲಿ ಜಾಗೃತಿ ಮೂಡಿಸಿ ಗಣತಿ ಪ್ರಾರಂಭಿಸಬೇಕೆಂದು ನ್ಯಾಯವಾದಿ, ಬಿಜೆಪಿ ಮುಖಂಡ ಮುರಘೇಂದ್ರ ಪಾಟೀಲ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರದಲ್ಲಿ ದಸರಾ ಪ್ರಾರಂಭವಾಗುತ್ತದೆ. ಹಳ್ಳಿಗಳಲ್ಲಿ ಅತಿವೃಷ್ಟಿಯಿಂದ ಹಾಳಾದ ಬೆಳೆಗಳ ಕೊಯ್ಲು, ಹಿಂಗಾರಿಗೆ ಭೂಮಿ ಹದಗೊಳಿಸುವ ಕಾರ್ಯದಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿರುವಾಗ ಸರ್ಕಾರ ಕೆಲವೇ ದಿನಗಳಲ್ಲಿ ಸಮೀಕ್ಷೆ‌ ಮುಗಿಸುತ್ತೆವೆ ಎನ್ನುವುದು ಸರಿಯಲ್ಲ. ಯಾವುದೇ ಒತ್ತಡಕ್ಕೆ ಒಳಗಾಗಿ ಸಮೀಕ್ಷೆ ಮಾಡುವುದು ಯಾವ ಪುರುಷಾರ್ಥಕ್ಕೆ? ರಾಜ್ಯದ ಸುಮಾರು 2 ಕೋಟಿ ಮನೆಗಳ ಸಮೀಕ್ಷೆ ಸುಲಭಸಾಧ್ಯವಲ್ಲ, ಬೇಸಿಗೆ ಕಾಲದಲ್ಲಿ ಸಮೀಕ್ಷೆ ಮಾಡುವುದು ಉತ್ತಮ ಎಂದು ಪಾಟೀಲ ಹೇಳಿದರು.

ಸರ್ಕಾರ ಹೊರಡಿಸಿರುವ ಹೊಸ ಜಾತಿಗಳ ಸೃಷ್ಟಿಮಾಡಿರುವುದು ದುರದೃಷ್ಟಕರ. 1,400 ಜಾತಿಗಳ ಪಟ್ಟಿ ಪತ್ರಿಕೆಗಳಲ್ಲಿ ಪ್ರಕಟಿಸಿ ಅದರ ಸಂಬಂಧ ಆಕ್ಷೇಪಣೆಗಳನ್ನು ಕೇಳಿದ್ದರು. ನಂತರ ಅದರಲ್ಲಿರುವ ಕೆಲ ಅನವಾಶ್ಯಕವಾಗಿ ಸೃಷ್ಟಿಸಿದ್ದ ಜಾತಿಗಳು ಕೈಬಿಡಬೇಕಾಗಿತ್ತು ಮತ್ತೊಂದಷ್ಟು ಬಿಟ್ಟು ಹೋಗಿರುವ ಮತ್ತು ಅನಾವಶ್ಯಕ ಜಾತಿಗಳನ್ನು ಸೇರಿಸಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ಸರ್ಕಾರದ ನೀತಿ ಸರಿಯಲ್ಲ ಎಂದು ಆಕ್ಷೇಪಿಸಿದರು.

ಇಡೀ ರಾಜ್ಯದಲ್ಲಿ ಇದೊಂದು ಜನಾಂದೋಲನ ಆಗುವ ಸಾಧ್ಯತೆಗಳಿವೆ. ಕ್ರಿಶ್ಚಿಯನ್, ಮುಸ್ಲಿಮರಲ್ಲಿ ಕೆಲವು ಉಪ ಜಾತಿ ಕೇಳಿದ್ದೆವು. ಎಲ್ಲ ಹಿಂದೂ ಉಪ ಜಾತಿಗಳಿಗೆ ಕ್ರಿಶ್ಚಿಯನ್, ಮುಸ್ಲಿಂ ಎಂದು ಹಾಕಿ ಮತ್ತೊಂದು ರೀತಿ ಮತಾಂತರಕ್ಕೆ ಪ್ರೇರಣೆ ಕೊಡುವ ಹುನ್ನಾರವನ್ನು ಸರ್ಕಾರ ಮಾಡಿದೆ. ಇದು ಮತ್ತೊಂದು ಮೀಸಲಾತಿಯ ಹುನ್ನಾರ ಎಂದು ಜನರಲ್ಲಿ ಅನುಮಾನ ಹುಟ್ಟು ಹಾಕುತ್ತಿದೆ. ಹೊಸದಾಗಿ ಸೃಷ್ಟಿಸಿದ ಜಾತಿಗಳನ್ನು ಪಟ್ಟಿಯಿಂದ ಕೈಬಿಡಲು ಆಗ್ರಹಿಸಿದ್ದಾರೆ.

ಸಮೀಕ್ಷೆಗೆ ಸ್ವೀಕೃತಿ ಪತ್ರವನ್ನು ಕಡ್ಡಾಯವಾಗಿ ಕೊಡಬೇಕು. ಕನ್ನಡದ ವ್ಯಾಕರಣ ಮಾಲೆ ಪ್ರಕಾರ 1,400 ಜಾತಿ ಪಟ್ಟಿ ಮಾಡದೆ ಪ್ರವರ್ಗ ಪ್ರಕಾರ ಮಾಡಬೇಕು. 15 ದಿನದಲ್ಲೇ ಸಮಿಕ್ಷೆ ಮಾಡುವ ಹಠಮಾರಿತನ, ತರಾತುರಿಯಲ್ಲಿ ಮಾಡುವ ಸಮೀಕ್ಷಾ ವರದಿ ಮತ್ತೊಮ್ಮೆ ತಿರಸ್ಕಾರ ಆಗುವಂತಾಗಬಾರದು. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಕರ್ನಾಟಕದಲ್ಲಿ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಮಾಡಲು ತಯಾರಿ ಮಾಡಿಕೊಂಡಿದೆ. ಈ ಹಿಂದೆ ಮಾನ್ಯ ಕಾಂತರಾಜು ನೇತೃತ್ವದಲ್ಲಿ ಆಯೋಗವು ₹165 ಕೋಟಿ ವೆಚ್ಚದಲ್ಲಿ ವರದಿ ಸಿದ್ಧಪಡಿಸಿತ್ತು. ಆ ವರದಿಯನ್ನು ಸರ್ಕಾರಕ್ಕೆ ಮಂಡಿಸಲಿಲ್ಲ. 165 ಕೋಟಿ ನಿರುಪಯುಕ್ತವಾಗಿತ್ತು. ಬಳಿಕ 110 ಕೋಟಿ ವೆಚ್ಚದಲ್ಲಿ ಒಳ ಮೀಸಲಾತಿ ಕುರಿತು ನ್ಯಾ. ನಾಗಮೋಹನ್‍ದಾಸ್ ಅವರ ಸಮೀಕ್ಷೆಯೂ ನಡೆಯಿತು. ಆ ಸಮೀಕ್ಷೆಯ ಯಾವ ಅಂಶಗಳನ್ನೂ ಪರಿಗಣಿಸದೇ ಸರ್ಕಾರವು ಯಾವ ರೀತಿ ನಿಲುವು ಪ್ರಕಟಿಸಿತು ಎಂಬುದು ಕರ್ನಾಟಕದಲ್ಲಿ ಚರ್ಚೆಯ ವಿಷಯವಾಗಿದೆ. ಈ ಸಮೀಕ್ಷೆಯಾದರು ಸರಿಯಾಗಬೇಕಾದರೆ ತುರಾತುರಿಯಲ್ಲಿ ಮಾಡದೆ ಸ್ವಿಕೃತವಾಗುವ ನಿಟ್ಟಿನಲ್ಲಿ ಸಾಗಬೇಕು ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಯಾವುದೇ ಜಾತಿ ಪಟ್ಟಿಯಲ್ಲಿ ಇಲ್ಲದ, ಯಾವ ಆಯೋಗದ ಪಟ್ಟಿಯಲ್ಲಿ ಇಲ್ಲದ ಹೊಸ ಜಾತಿಗಳನ್ನು ಸೃಷ್ಟಿಸಿದೆ. ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್- ಈ ರೀತಿ 107 ಕಡೆಗಳಲ್ಲಿ ಹೊಸ ಜಾತಿ ಪ್ರಕಟಿಸಿದ್ದಾರೆ. ಅವುಗಳಿಗೆ ಕೋಡ್ ನಂಬರ್ ನೀಡಿದ್ದು, ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು