ಮಳೆ ಸಮಯದಲ್ಲಿ ಮರದ ಕೆಳಗೆ ನಿಲ್ಲಬೇಡಿ: ರಾಠೋಡ

KannadaprabhaNewsNetwork |  
Published : May 22, 2024, 12:45 AM IST
ಚಿಂಚೋಳಿ ತಾಲೂಕಿನ ಕೊರಡಂಪಳ್ಳಿ ಮತ್ತು ದೇಗಲಮಡಿ ಗ್ರಾಮಗಳಿಗೆ ತಾಪಂ ಅಧಿಕಾರಿ ಶಂಕರ ರಾಠೋಡ ಭೇಟಿ ನೀಡಿ ಚರಂಡಿ ವ್ಯವಸ್ಥೆ ಮತ್ತು ನೀರಿನ ತೊಟ್ಟಿ ಪರಿಶೀಲಿಸಿದರು. | Kannada Prabha

ಸಾರಾಂಶ

ಚಿಂಚಚೋಳಿ ತಾಲೂಕಿನ ೯ ಗ್ರಾಪಂಗಳಲ್ಲಿ ಬರುವ ೨೨ ಗ್ರಾಮಗಳು ಪ್ರತಿ ವರ್ಷ ಮಳೆಗಾಲದಲ್ಇ ಬರುವ ಪ್ರವಾಹದಿಂದ ತೊಂದರೆ ಅನುಭವಿಸುವ ಪ್ರವಾಹ ಪೀಡಿತ ಗ್ರಾಮಗಳಾಗಿವೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ರಾಜ್ಯ ಹವಾಮಾನ ಇಲಾಖೆ ಹಾಗೂ ಕೃಷಿ ಇಲಾಖೆ ಮಾಹಿತಿ ಪ್ರಕಾರ ಅತಿ ಹೆಚ್ಚು ಮಳೆ ಆಗಲಿದೆ ಎಂಬ ಕಾರಣದಿಂದಾಗಿ ತಾಲೂಕಿನ ಎಲ್ಲ ಗ್ರಾಪಂ ಕಚೇರಿ ಕೇಂದ್ರ ಸ್ಥಾನಗಳಲ್ಲಿ ಪಿಡಿಓ, ಕಾರ್ಯದರ್ಶಿ ಕಡ್ಡಾಯವಾಗಿ ಇದ್ದುಕೊಂಡು ವಿಪತ್ತು ನಿರ್ವಹಣೆ ಬರ ಪರಿಹಾರ ಹಾಗೂ ಮಳೆಗಾಲ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಾಪಂ ಇಒ ಶಂಕರ ರಾಠೋಡ ತಿಳಿಸಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸೇಡಂ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ಪಿಡಿಓ, ಕಾರ್ಯದರ್ಶಿ, ಅಂಗನವಾಡಿ ಕಾರ್ಯಕರ್ತೆಯರ, ಆರೋಗ್ಯ ಅಧಿಕಾರಿಗಳ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರ ಸಭೆ ನಡೆಸಿ ಸರಕಾರದ ಮಾರ್ಗಸೂಚಿಗಳನ್ನು ಸಭೆಯಲ್ಲಿ ತಿಳಿಸಿದರು.

ತಾಲೂಕಿನ ೯ ಗ್ರಾಪಂಗಳಲ್ಲಿ ಬರುವ ೨೨ ಗ್ರಾಮಗಳು ಪ್ರತಿ ವರ್ಷ ಮಳೆಗಾಲದಲ್ಇ ಬರುವ ಪ್ರವಾಹದಿಂದ ತೊಂದರೆ ಅನುಭವಿಸುವ ಪ್ರವಾಹ ಪೀಡಿತ ಗ್ರಾಮಗಳಾಗಿವೆ. ತಾಲೂಕಿನ ಪ್ರತಿಯೊಂದು ಗ್ರಾಮ ಮತ್ತು ತಾಂಡಾಗಳಲ್ಲಿ ಮಳೆಗಾಲದಲ್ಲಿ ಶುದ್ಧ ನೀರು ಪೂರೈಕೆ ಮಾಡಬೇಕು. ಪೈಪ್‌ಲೈನ್‌ ಸೋರಿಕೆ ದುರಸ್ತಿ ಕೈಕೊಳ್ಳಬೇಕು. ಬೋರ್‌ವೆಲ್ ಸುತ್ತಲು ಹೊಲಸು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸಲು ಅಲ್ಲದೇ ಚರಂಡಿಯಲ್ಲಿ ಹೊಲಸು ನೀರು ನಿಲ್ಲದಂತೆ ಮತ್ತು ಸೊಳ್ಳೆಗಳು ಉತ್ಪತ್ತಿ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಮಳೆ ನೀರು, ಪ್ರವಾಹ ನೀರು ಸರಾಗವಾಗಿ ಚರಂಡಿಯಲ್ಲಿ ಹರಿದು ಹೋಗುವಂತೆ ಕಲ್ಲುಮುಳ್ಳಿನ ಕಂಟಿಗಳನ್ನು ತೆಗೆದು ಹಾಕಬೇಕೆಂದು ತಿಳಿಸಲಾಗಿದೆ ಎಂದು ಹೇಳಿದರು.

ತಾಲೂಕಿನಲ್ಲಿ ಇರುವ ಅಂಗನವಾಡಿ ಕೇಂದ್ರಗಳು ಮಳೆಯಿಂದ ಸೋರಿಕೆ ಆಗುತ್ತಿದ್ದರೆ ಅಪಾಯ ಸ್ಥಿತಿಯಲ್ಲಿ ಕಟ್ಟಡದಲ್ಲಿ ಕೆಲಸ ಮಾಡದಂತೆ ಸುರಕ್ಷತೆ ಇರುವ ಕಟ್ಟಡದಲ್ಲಿ ಮಕ್ಕಳಿಗೆ ಊಟ ನೀಡಬೇಕೆಂದು ತಿಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮಳೆಗಾಲ ಹೆಚ್ಚು ಇರುವುದರಿಂದ ನದಿ ಹಳ್ಳಕೊಳ್ಳಗಳು ತುಂಬಿ ಹರಿಯುವ ಸಂದರ್ಭದಲ್ಲಿ ಜನ ಜಾನುವಾರುಗಳು ಹಳ್ಳದ ಕಡೆಗೆ ಹೋಗದಂತೆ ಮತ್ತು ಮಹಿಳೆಯರು ನದಿಯಲ್ಲಿ ಬಟ್ಟೆಗಳನ್ನು ಒಗೆಯದಂತೆ ಮುಂಜಾಗ್ರತಾಕ್ರಮ ಕೈಕೊಳ್ಳುವುದಕ್ಕಾಗಿ ಡಂಗೂರ ಸಾರಿ ಜನರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದ್ದಾರೆ.

ರೈತರು ತಮ್ಮ ಹೊಲಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮಳೆ ಬರುತ್ತಿರುವಾರ ಮಳೆ ಆಸರೆಗಾಗಿ ಮರದ ಕೆಳಗೆ ನಿಲ್ಲದಂತೆ ಜಾಗೃತಿ ಮೂಡಿಸಲಾಗಿದೆ. ಏಕೆಂದರೆ ಮಳೆ ಬೀಳುವ ಸಂದರ್ಭಧಲ್ಲಿ ಗುಡುಗು, ಮಿಂಚು, ಸಿಡಿಲಿನ ಅರ್ಭಟ ಹೆಚ್ಚಾದ ಸಂದರ್ಭದಲ್ಲಿ ರೈತರು ಕೂಲಿ ಕಾರ್ಮಿಕರು, ಮಹಿಳೆಯರು ಮರದ ಆಸರೆಗೆ ನಿಲ್ಲಬಾರದು ಎಂದು ಮಳೆಯಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ