ಜೇನುಗೂಡಿಗೆ ಕೈಹಾಕಬೇಡಿ, ಕೇಸು ಹಿಂಪಡೆಯರಿ: ಯಶ್ಪಾಲ್‌ ಸುವರ್ಣ

KannadaprabhaNewsNetwork |  
Published : Mar 23, 2025, 01:38 AM IST
ಮೀನುಗಾರರ ಬಂಧನ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆಯಲ್ಲಿ 5 ಮಂದಿ ಮೀನುಗಾರರನ್ನು ಬಂಧಿಸಿರುವುದರ ಮತ್ತು ಮೀನುಗಾರರ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವಿರುದ್ಧ ಮಲ್ಪೆ ಮೀನುಗಾರರ ಸಂಘದ ವತಿಯಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮೀನುಗಾರರ ಬಂಧನ ವಿರೋಧಿಸಿ ಬೃಹತ್ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಮಲ್ಪೆ

ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆಯಲ್ಲಿ 5 ಮಂದಿ ಮೀನುಗಾರರನ್ನು ಬಂಧಿಸಿರುವುದರ ಮತ್ತು ಮೀನುಗಾರರ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವಿರುದ್ಧ ಮಲ್ಪೆ ಮೀನುಗಾರರ ಸಂಘದ ವತಿಯಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಈ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಮಲ್ಪೆ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ದಿನವಿಡೀ ಮಲ್ಪೆಯಲ್ಲಿ ಯಾವುದೇ ವ್ಯವಹಾರಗಳು ನಡೆಯಲಿಲ್ಲ.ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ಈ ಘಟನೆಯನ್ನು ಪೊಲೀಸರೇ ರಾಜಿಯ ಮೂಲಕ ಇತ್ಯರ್ಥ ಮಾಡಿದ್ದರು. ಆದರೆ ನಂತರ ಮೀನುಗಾರರ ಮೇಲೆ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಿದ್ದಾರೆ. ಮೀನುಗಾರರು ಯಾರಿಗೂ ಅನ್ಯಾಯ ಮಾಡುವುದಿಲ್ಲ, ತಮಗೆ ಅನ್ಯಾಯವಾದರೇ ಬಿಡುವವರಲ್ಲ. ಪೊಲೀಸರಿಗೆ ಜೇನುಗೂಡಿಗೆ ಕೈ ಹಾಕಿದರೇ ಪರಿಣಾಮ ಏನಾಗುತ್ತದೆ ಎಂಬ ಕಲ್ಪನೆ ಇಲ್ಲ. ಜಾತಿ ನಿಂದನೆ ಸೆಕ್ಷನ್ ವಾಪಸ್‌ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪರಿಣಾಮವನ್ನು ಎದುರಿಸಲು ಇಲಾಖೆಗಳು ಸಿದ್ಧವಾಗಬೇಕು ಎಂದು ಎಚ್ಚರಿಕೆ ನೀಡಿದರು.ಮೀನುಗಾರರಿಗೆ ಅನ್ಯಾಯವಾಗಿದೆ. ಮೀನುಗಾರರ ಋಣ ನನ್ನ ಮೇಲಿದೆ. ಅವರಿಗೆ ನ್ಯಾಯ ಸಿಗುವಂತೆ ಮಾಡುವ ಮೂಲಕ ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ದಲಿತ ಕುಟುಂಬಗಳ ಉದ್ಧಾರ: ಪ್ರಮೋದ್‌

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮಲ್ಪೆ ಬಂದರು ಲಕ್ಷಾಂತರ ಜನರಿಗೆ ಅನ್ನದ ಬಟ್ಟಲಾಗಿದೆ. ಇಲ್ಲಿ ನಡೆದ ಘಟನೆಯನ್ನು ವಿರೋಧಿಸುವ ದಲಿತ ನಾಯಕರ ಕುಟುಂಬಗಳು ಉದ್ಧಾರ ಆಗಿದ್ದು ಇದೇ ಮಲ್ಪೆ ಬಂದರಿನಿಂದ ಎಂಬುದನ್ನು ಮರೆಯಬಾರದು ಎಂದರು.ಈ ಜಿಲ್ಲೆಯಲ್ಲಿ ಅಣ್ಣಾಮಲೈಯಂತಹ ಅನೇಕ ದಕ್ಷ ಎಸ್ಪಿಗಳು ಕೆಲಸ ಮಾಡಿದ್ದಾರೆ. ಆದರೆ ಅವರೆಂದೂ ಮಾನವೀಯತೆ ಬಿಟ್ಟು ವರ್ತಿಸಿಲ್ಲ. ಆದರೆ ಅಮಾಯಕ ಮೀನುಗಾರ ಮಹಿಳೆಯನ್ನು ಬಂಧಿಸಿ ಪೌರುಷ ತೋರಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.ಮೀನುಗಾರಿಕೆ, ಬಂದರಿನ ಬಗ್ಗೆ ಏನೆಂದೇ ತಿಳಿಯದವರು ಉಸ್ತುವಾರಿ ಮಂತ್ರಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕುಳಿತುಕೊಂಡು ದಿಗ್ಭ್ರಮೆಯಾಗಿದೆ ಎಂದು ಸಿಎಂ ಹೇಳಿಕೆ ಕೊಡುತ್ತಾರೆ. ಆದರೆ ಸಿಎಂ ಅವರ ತವರೂರು ಮೈಸೂರಿನಲ್ಲಿ 300 ಮಂದಿ ಗುಂಪು ಸೇರಿ ಪೊಲೀಸ್ ಸ್ಟೇಷನ್‌ಗೆ ಬೆಂಕಿ ಹಾಕಿದಾಗ ದಿಗ್ಭ್ರಮೆ ಆಗಿಲ್ಲವಾ? ಎಂದು ಪ್ರಶ್ನಿಸಿದರು.ದಲಿತೆ ಎಂದು ತಿಳಿದಿರಲಿಲ್ಲ: ರಘುಪತಿ ಭಟ್

ಇನ್ನೊಬ್ಬ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಈ ಘಟನೆಯಲ್ಲಿ ಸರ್ಕಾರ, ಪೊಲೀಸ್ ಇಲಾಖೆ ನಡೆದುಕೊಂಡ ರೀತಿ ಒಪ್ಪಲು ಸಾಧ್ಯವಿಲ್ಲ. ಕಳ್ಳರನ್ನು ಸಾರ್ವಜನಿಕರು ಹಿಡಿದರೆ ಅವರು ಮೊದಲು ಥಳಿಸುತ್ತಾರೆ. ಈ ಪ್ರಕರಣದಲ್ಲಿ ಹೊಡೆಯುವಾಗ ಆಕೆ ದಲಿತೆ ಎಂದು ತಿಳಿದಿಲ್ಲ. ಮಲ್ಪೆ ಬಂದರಿನಲ್ಲಿ ಜಾತಿ ಆಧರಿಸಿ ಯಾರಿಗೂ ಕೆಲಸವನ್ನು ಕೊಟ್ಟಿಲ್ಲ. ಜಾತಿ ನಿಂದನೆ ಪ್ರಕರಣವನ್ನು ಕೈ ಬಿಡಬೇಕು‌ ಎಂದು ಆಗ್ರಹಿಸಿದರು.ಮೀನುಗಾರ ಸಂಘ ಅಧ್ಯಕ್ಷ ದಯಾನಂದ ಮಾತನಾಡಿ, ಪೊಲೀಸರು ಜಾಮೀನು ರಹಿತ ಸೆಕ್ಷನ್‌ ಹಾಕಿದ್ದಾರೆ. ಮೀನುಗಾರರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಳಂಕ ಹೊರಿಸಿದ್ದಾರೆ. ಹಿಂದೆ ಪೋಲಿಸರಿಗೆ ಬಂದರಿನೊಳಗೆ ಪ್ರವೇಶ ಇರಲಿಲ್ಲ. ನಾವೇ ಪರಿಹರಿಸಿಕೊಳ್ಳುವ ಪರಿಪಾಠ ಹಿಂದಿನಿಂದಲೂ ಬಂದಿದೆ. ಮೀನುಗಾರರ ವಿರುದ್ಧ ಹಾಕಿರುವ ಜಾತಿ ನಿಂದನೆ ಪ್ರಕರಣವನ್ನು ಹಿಂಪಡೆಯಬೇಕು ಎಂದರು.ನಗರಸಭಾ ಸದಸ್ಯ ಯೋಗೇಶ್‌, ರಮೇಶ್‌ ಕಾಂಚನ್ ಮಾತನಾಡಿದರು, ತಾಂಡೇಲರ ಸಂಘ ಅಧ್ಯಕ್ಷ ರವಿರಾಜ್ ಸುವರ್ಣ, ಮಹಿಳಾ ಮೀನುಗಾರರ ಸಂಘ ಅಧ್ಯಕ್ಷೆ ಬೇಬಿ ಸಾಲ್ಯಾನ್, ಕನ್ನಿ ಸಂಘ ಅಧ್ಯಕ್ಷ ದಯಾಕರ್ ಸುವರ್ಣ, ಸಂಘದ ಕಾರ್ಯದರ್ಶಿ ಜಗನ್ನಾಥ್ ಕಡೆಕಾರು ಮತ್ತೆನೇಕರು ಉಪಸ್ಥಿತರಿದ್ದರು.--------------ಮನವಿ ಸ್ವೀಕರಿಸಿದ ಎಡಿಸಿ, ಎಎಸ್ಪಿ

ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹಾಗೂ ಹೆಚ್ಚುವರಿ ಎಸ್ಪಿಗಳಾದ ಎಸ್.ಟಿ.ಸಿದ್ದಲಿಂಗಪ್ಪ, ಪಿ.ಎ ಹೆಗಡೆ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿದರು. ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿ, ಮೀನುಗಾರರು ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು, ಮೀನುಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ