ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಜನತೆ ಹಕ್ಕಿ ಜ್ವರದ ಬಗ್ಗೆ ಆತಂಕ ಪಡುವುದು ಬೇಡ. ಆದರೆ ಮುಂಜಾಗ್ರತೆ ಕ್ರಮ ಅನುಸರಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಹಕ್ಕಿ ಶೀತ ಜ್ವರ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಕ್ಕಿ ಜ್ವರ ಅಥವಾ ಕೋಳಿ ಶೀತ ಜ್ವರ ಎಚ್ 5 ಎನ್ 1 ವೈರಸ್ ನಿಂದ ಹರಡುವ ಖಾಯಿಲೆಯಾಗಿದ್ದು, ಪಕ್ಷಿಯಿಂದ ಪಕ್ಷಿಗೆ ಹರಡುತ್ತದೆ. ಕೆಲವೊಮ್ಮೆ ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಜ್ವರದ ಲಕ್ಷಣಗಳು ಕಂಡುಬರುವ ಸಾಧ್ಯತೆ ಇದೆ ಎಂದು ಹೇಳಿದರು.
ರಾಜ್ಯದ ಚಿಕ್ಕಬಳ್ಳಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಕಂಡುಬಂದಿವೆ. ಆದರೆ ಜಿಲ್ಲೆಯಲ್ಲಿ 10 ವರ್ಷಗಳಲ್ಲಿ ಯಾವುದೇ ಹಕ್ಕಿಜ್ವ ಪ್ರಕರಣ ಕಂಡುಬಂದಿಲ್ಲವಾದರೂ ಮುಂಜಾಗ್ರತಾ ಕ್ರಮ ಅನುಸರಿಸುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ಹಕ್ಕಿ ಜ್ವರ ಹರಡಂತೆ ಮುಂಜಾಗ್ರತೆಯಾಗಿ 28 ಕಾರ್ಯಪಡೆ ರಚಿಸಲಾಗಿದ್ದು, ಕಾರ್ಯಪಡೆ ದಿನಂಪ್ರತಿ ಕೋಳಿ ಫಾರ್ಮ್‌ಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.ಪಶು ಇಲಾಖೆ ಉಪನಿರ್ದೇಶಕ ಎಸ್.ಎಚ್. ಕರಡಿಗುಡ್ಡ ಮಾತನಾಡಿ, ಜಿಲ್ಲೆಯಲ್ಲಿ 348 ಮಾಂಸದ ಕೋಳಿ ಫಾರ್ಮ್ ಇದ್ದು, ಮೊಟ್ಟೆ ಕೋಳಿ ಫಾರ್ಮ್ 69 ಇವೆ. ಜಿಲ್ಲೆಯಲ್ಲಿ ರಚಿಸಲಾದ ಪ್ರತಿಯೊಂದು ಕಾರ್ಯಪಡೆ ಫಾರ್ಮ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಈವರೆಗೆ ಯಾವುದೇ ಪ್ರಕರಣ ಕಂಡುಬಂದಿಲ್ಲ. ಆದರೂ ಸಹ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಪಶು ಸಹಾಯವಾಣಿ 1962 ಸಂಖ್ಯೆಗೆ ಕರೆ ಸಹ ಮಾಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಡಿ. ಮಾತನಾಡಿ, ರೋಗ ಪೀಡಿತ ಕೋಳಿ ಅಥವಾ ಹಕ್ಕಿಗಳ ಮಾಂಸವನ್ನು ಸರಿಯಾಗಿ ಬೇಯಿಸದೇ ತಿನ್ನುವುದು, ಸೋಂಕಿರುವ ಹಸಿ ಮೊಟ್ಟೆ ಸೇವನೆಯಿಂದ ಹಾಗೂ ಕೋಳಿಗಳ ಹಿಕ್ಕೆಗಳು ಮನುಷ್ಯರು ಕುಡಿಯುವ ನೀರಿನೊಂದಿಗೆ ಬೆರೆತು ಕಲುಷಿತಗೊಂಡಾಗ ಈ ಖಾಯಿಲೆ ಹರಡುತ್ತದೆ. ಕೆಲವು ಸಂದರ್ಭಗಳಲ್ಲಿ ಗಾಳಿಯ ಮೂಲಕವೂ ಮನುಷ್ಯರಿಗೆ ಹರಡುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೇನ್ನವರ, ಪಶುವೈದ್ಯಾಧಿಕಾರಿ ಪದರಾ ಸೇರಿದಂತೆ ಆಯಾ ತಾಲೂಕಿನ ಪಶು ವೈಧ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಹಕ್ಕಿಜ್ವರದ ಲಕ್ಷಣಗಳು: ಜ್ವರ ಮತ್ತು ಕೆಮ್ಮು, ಶೀತ, ಕಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುವುದು ಹಕ್ಕಿಜ್ವರದ ಲಕ್ಷಣಗಳು. ಕೆಲವೊಮ್ಮೆ ವಾಂತಿ ಭೇದಿಯೂ ಆಗಬಹುದು. ಇಂತಹ ಲಕ್ಷಣಗಳು ಕಂಡುಬಂದಾಗ ಸಮೀಪದ ಸರ್ಕಾರಿ ಆಸ್ಪತ್ರೆ ಇಲ್ಲವೆ ಜಿಲ್ಲಾ ನೋಡಲ್ ಅಧಿಕಾರಿ (9448928662), ಹೆಲ್ಪಲೈನ್ ನಂ.104ಗೆ ಸಂಪರ್ಕಿಸಬೇಕು.